ಸರ್ಕಾರದಿಂದ ಕಚ್ಚಾ ರೇಷ್ಮೆ ಖರೀದಿಗೆ ಸೂಚನೆ : ಡಾ.ನಾರಾಯಣಗೌಡ

ಬೆಂಗಳೂರು:

     ಕಚ್ಚಾ ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ಕಂಗಲಾಗಿರುವ ರೇಷ್ಮೆ ಬೆಳೆಗಾರರ ಬೆಂಬಲಕ್ಕೆ ಧಾವಿಸಿದ್ದು, ಸರ್ಕಾರದಿಂದಲೇ ಕಚ್ಚಾ ರೇಷ್ಮೆ ಖರೀದಿಸುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು. ಇಂದು ವಿಧಾನಸೌಧದಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಕಳೆದ ಎರಡು ವರ್ಷಗಳಿಂದ ಸ್ಥಿರವಾಗಿದ್ದ ರೇಷ್ಮೆಗೂಡಿನ ದರ ದಿಢೀರ್ ಕುಸಿತಕ್ಕೆ ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಕಚ್ಛಾ ರೇಷ್ಮೆಗೂಡಿನ ದರ ದಿಢೀರ್ ಕುಸಿತದಿಂದ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗಬಾರದು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶ ಮಾಡಿ, ರೇಷ್ಮೆ ಬೆಳೆಗಾರರ ಜೊತೆ ನಿಲ್ಲಬೇಕು. ಕೆಎಸ್‌ಎಂಬಿ ಮುಖಾಂತರ ಕಚ್ಚಾ ರೇಷ್ಮೆ ಖರೀದಿ ಮಾಡುವಂತೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು. ಇಂದು ಸಂಜೆಯೇ ದರ ಕಮಿಟಿಯ ಸಭೆ ಕರೆದು, ನಾಳೆಯಿಂದಲೇ ಕೆಎಸ್‌ಎಂಬಿ ಮೂಲಕ ಕಚ್ಚಾ ರೇಷ್ಮೆ ಖರೀದಿಗೆ ಚಾಲನೆ ನೀಡಬೇಕು. ರೇಷ್ಮೆ ಗೂಡಿನ ದರ ಮತ್ತೆ ಉತ್ತಮ ಸ್ಥಿತಿಗೆ ತಲುಪಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

    ರೇಷ್ಮೆಗೂಡು ಉತ್ಪಾದನೆಯಲ್ಲಿ ಶೇಕಡಾ 23 ರಷ್ಟು ಹೆಚ್ಚಳ ಕಂಡಿದ್ದು, ಕಳೆದ 15 ದಿನಗಳಿಂದ ಒಮ್ಮೆಲೆ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಕುಸಿತವಾಗಿರಬಹದು. ಜೊತೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಲೂ ಬೆಲೆ ಕಡಿಮೆಯಾಗಿರಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಳೆಯಿಂದಲೇ ಕೆಎಸ್‌ಎಂಬಿ ಮೂಲಕ ಕಚ್ಚಾ ರೇಷ್ಮೆ ಖರೀದಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು. ಸರ್ಕಾರ ರೇಷ್ಮೆ ಬೆಳೆಗಾರರ ಬೆನ್ನಿಗಿದ್ದು, ಮತ್ತೆ ರೇಷ್ಮೆಗೂಡಿನ ಬೆಲೆ ಉತ್ತಮ ಸ್ಥಿತಿಗೆ ತಲುಪುವಂತೆ ಕ್ರಮಕೈಗೊಳ್ಳುವುದಾಗಿ ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದೇ ವೇಳೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಭಾಗದಲ್ಲಿ ರೇಷ್ಮೆ ಹುಳು ಹಣ್ಣಾಗುತ್ತಿಲ್ಲದರ ಬಗ್ಗೆಯೂ ಸಚಿವ ಡಾ.ನಾರಾಯಣಗೌಡ ಅವರು ವರದಿ ಪಡೆದರು.. ಶಿಡ್ಲಘಟ್ಟ ಭಾಗದಲ್ಲಿ 15 ದಿನ ಕಳೆದರೂ ರೇಷ್ಮೆ ಹುಳುಗಳು ಹಣ್ಣಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಕೂಡಲೇ ರೇಷ್ಮೆ ಇಲಾಖೆಯ ವಿಜ್ಞಾನಿಗಳು ಭೇಟಿ ನೀಡಿ ನಿಖರ ಕಾರಣದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap