ವಿಶ್ವ ಬ್ಯಾಂಕ್‌ ನೂತನ ಅಧ್ಯಕ್ಷರಾಗಿ ಡೇವಿಡ್‌ ಮಾಲ್ಪಾಸ್‌

ವಾಷಿಂಗ್ಟನ್‌

       ವಿಶ್ವಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಮಂಗಳವಾರ ಡೇವಿಡ್‌ ಮಾಲ್ಪಾಸ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ .ವಿಶ್ವಬ್ಯಾಂಕ್‌ನ 13ನೆ ಅಧ್ಯಕ್ಷರಾಗಿ ಡೇವಿಡ್‌ ಮಾಲ್ಪಾಸ್‌ ಅವರು ವಾಷಿಂಗ್ಟನ್‌ ಡಿಸಿಯಲ್ಲಿ ಮಂಗಳವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು.

     ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಬ್ಯಾಂಕ್‌ನ ನಿರ್ದೇಶಕರು ಮತ್ತು ಗವರ್ನರ್‌ಗಳ ಮಂಡಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಉತ್ಸಾಹದಿಂದ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

      ಅಮೆರಿಕ ಖಜಾನೆ ಇಲಾಖೆಯ ಅಂತಾರಾಷ್ಟ್ರೀಯ ವ್ಯವಹಾರಗಳ ಮಾಜಿ ಅಧೀನ ಕಾರ್ಯದರ್ಶಿಯಾಗಿದ್ದ ಡೇವಿಡ್‌ ಅವರನ್ನು ಫೆಬ್ರವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಅವರು ವಿಶ್ವಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಇದಕ್ಕೂ ಮೊದಲು ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಜಿಮ್‌ ಯಾಂಗ್‌ ಕಿಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ಖಾಲಿಯಾಗಿತ್ತು.

      63 ವರ್ಷ ವಯಸ್ಸಿನ ಡೇವಿಡ್‌ ಮಾಲ್ಪಾಸ್ ಅವರನ್ನು ವಿಶ್ವಬ್ಯಾಂಕ್‌ನ ಮಂಡಳಿ ಅವಿರೋಧವಾಗಿ ಆಯ್ಕೆಮಾಡಿತ್ತು. ಐದು ವರ್ಷಗಳ ಅವಧಿಗೆ ಡೇವಿಡ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿಶ್ವಬ್ಯಾಂಕ್‌ ಶುಕ್ರವಾರ ಪ್ರಕಟಿಸಿತ್ತು. ಅವರ ಅಧಿಕಾರಾವಧಿ 2019, ಏಪ್ರಿಲ್‌ 9ರಂದು ಆರಂಭಗೊಂಡಿದೆ.

      ಬ್ಯಾಂಕ್‌ಗೆ ಸ್ಪಷ್ಟ ದೂರದೃಷ್ಟಿ ಇದೆ. ಬಡತನ ನಿವಾರಣೆ ಮತ್ತು ಅಭ್ಯುದಯದ ಹಂಚಿಕೆ ನಮ್ಮ ಗುರಿಯಾಗಿದೆ. ಇವುಗಳ ತುರ್ತು ಜಾರಿ ಅಗತ್ಯವಿದೆ. ಫಲಿತಾಂಶಗಳನ್ನು ಸಾಧಿಸಲು ನಮಗೆ ಸ್ಪಷ್ಟ ಗಮನವಿರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

       ಹವಾಮಾನ ಬದಲಾವಣೆ, ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ, ಬಲಿಷ್ಠ ಅಭಿವೃದ್ಧಿಯ ಅಗತ್ಯ ಮುಂತಾದ ಪ್ರಮುಖ ಸವಾಲುಗಳು ನಮ್ಮ ಮುಂದಿವೆ. ಬ್ಯಾಂಕ್‌, ಉತ್ತಮ ಸಂಪನ್ಮೂಲಗಳನ್ನು ಹೊಂದಿದೆ. ಸಿಬ್ಬಂದಿ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇದು ನಿಜವಾಗಿಯೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

         ಅಮೆರಿಕ ಶೇಕಡಾ 16 ಮತದಾನ ಅಧಿಕಾರ ಹೊಂದಿರುವ ವಿಶ್ವ ಬ್ಯಾಂಕಿನ ಅತಿದೊಡ್ಡ ಷೇರುದಾರ ರಾಷ್ಟ್ರವಾಗಿದೆ. ಹೀಗಾಗಿ 1944 ರಲ್ಲಿ ಸಂಸ್ಥೆ, ಪ್ರಾರಂಭವಾದಾಗಿನಿಂದಲೂ ಬ್ಯಾಂಕ್‌ನ ಅಧ್ಯಕ್ಷ ಹುದ್ದೆ ಅಮೆರಿಕದ ಪಾಲಾಗುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link