ಮೀಸಲಾತಿ : ವರದಿ ಬಂದು ಮೂರು ವರ್ಷಗಳ ವರೆಗೆ ಸರ್ಕಾರ ಏನು ಮಾಡುತ್ತಿತ್ತು? : ಸಿದ್ದರಾಮಯ್ಯ

ಬೆಂಗಳೂರು

        ಈ ತಿಂಗಳ 4 ರಂದು ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ವಿಧಾನಸಭಾ ಚುನಾವಣೆಗೆ ಎರಡನೇ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

       ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ವಿಚಾರವೂ ಸಹ ಇತ್ಯರ್ಥವಾಗಬಹುದು. ನಾನು ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕಿದೆ, ನಾಡಿದ್ದು ನಡೆಯುವ ಸಭೆಯಲ್ಲಿ ತೀರ್ಮಾನ ಆಗಬಹುದು ಎಂದರು.

      ವರುಣಾ ಕ್ಷೇತ್ರವನ್ನು ಬಿಜೆಪಿ ಪಕ್ಷ ಪ್ರಮುಖ ಕ್ಷೇತ್ರವಾಗಿ ಪರಿಗಣಿಸಿರುವ ಬಗ್ಗೆ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ನೀಡಿ, ಯಾರನ್ನು ಯಾರಿಂದಲೂ ಕಟ್ಟಿಹಾಕಲು ಆಗಲ್ಲ. ಒಬ್ಬರನ್ನು ಸೋಲಿಸುವುದು ಗೆಲ್ಲಿಸುವುದು ಜನರ ಕೈಲಿದೆ. ನಾನು ನಾಮಪತ್ರ ಸಲ್ಲಿಕೆಗೆ ಮಾತ್ರ ವರುಣಾಗೆ ಹೋಗುತ್ತೇನೆ. ಯತೀಂದ್ರ ಅವರು ಅಲ್ಲಿನ ಹಾಲಿ ಶಾಸಕರು, ಅವರು ಕೂಡ ಅಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ. ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಎಂಬ ಬಗ್ಗೆ ಯೋಚನೆ ಮಾಡಲು ಹೋಗಲ್ಲ, ಯಾರು ನಮ್ಮ ಶಾಸಕರಾಗಬೇಕು ಎಂದು ತೀರ್ಮಾನ ಮಾಡುವುದು ಜನ. ಜನರ ಆಶೀರ್ವಾದ ಮುಖ್ಯವಾಗುತ್ತೆ, ಯಾರು ನಮ್ಮಲ್ಲಿ ಗೆದ್ದರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆ ಎಂದು ತೀರ್ಮಾನ ಮಾಡಬೇಕಾಗಿರುವುದು ಜನ. ಎದುರಾಳಿ ಯಾರೇ ಇರಲಿ ಅದರ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಹೇಳಿದರು.

     ಸರ್ಕಾರ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಮಾಡಿದೆ. ಅವರ ಉದ್ದೇಶ ಒಳ್ಳೆಯದಿಲ್ಲ. ಮೀಸಲಾತಿ ಕೊಡಬೇಕು ಎಂದಿದ್ದರೆ ಅದರ ಬಗ್ಗೆ ಅಧ್ಯಯನ ಮಾಡಿ ಸಂವಿಧಾನ ಬದ್ಧವಾಗಿ, ವೈಜ್ಞಾನಿಕವಾಗಿ ನೀಡುತ್ತಿದ್ದರು. ಒಳಮೀಸಲಾತಿ ವಿಚಾರವಾಗಿ ಸರ್ಕಾರ 4 ವರ್ಷದಿಂದ ಸುಮ್ಮನಿದ್ದು ಚುನಾವಣೆ ಬಂದಾಗ ಓಟಿಗಾಗಿ ಕೊನೆ ಘಳಿಗೆಯಲ್ಲಿ ಜಾರಿ ಮಾಡಿದೆ. ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ ರಚನೆಯಾದದ್ದು ಸಮ್ಮಿಶ್ರ ಸರ್ಕಾರ ಇದ್ದಾಗ, ವರದಿ ನೀಡಿದ್ದು 2020ರಲ್ಲಿ, ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು 2023ರಲ್ಲಿ. ವರದಿ ಬಂದು ಮೂರು ವರ್ಷಗಳ ವರೆಗೆ ಸರ್ಕಾರ ಏನು ಮಾಡುತ್ತಿತ್ತು? ಮೀಸಲಾತಿ ಹೆಚ್ಚಳ ಮಾಡಿದ ಮೇಲೆ ಒಟ್ಟು ಮೀಸಲಾತಿ ಪ್ರಮಾಣ 56% ಆಯಿತು, ಇದರಿಂದ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ?ಮೀಸಲಾತಿ ಪ್ರಮಾಣ 50% ಗಿಂತ ಮೀರಬಾರದು? ಎಂಬ ತೀರ್ಪಿನ ಉಲ್ಲಂಘನೆಯಾಗುತ್ತದೆ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸವನ್ನು ಸರ್ಕಾರ ಮಾಡಿದೆಯಾ? ಹೀಗಿದ್ದಾಗ ಇದು ಊರ್ಜಿತವಾಗುತ್ತದಾ? ಹೀಗೆ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಮತ್ತು ಅಲ್ಪಸಂಖ್ಯಾತ ವರ್ಗದ ಜನರಿಗೆ ಮೋಸ ಮಾಡಿದೆ ಎಂದರು.

     ಕೆಟಗರಿ 2ಬಿ ಯನ್ನು ರದ್ದು ಮಾಡಿದ್ದು ಯಾಕೆ? ಇದು 1995 ಜನವರಿಯಿಂದ ಇತ್ತು, ಚಿನ್ನಪ್ಪ ರೆಡ್ಡಿ ಅವರ ಸಮಿತಿಯ ವರದಿ ಆಧರಿಸಿ ಈ ಮೀಸಲಾತಿ ನೀಡಲಾಗಿತ್ತು. ಈಗ ಮೀಸಲಾತಿಯನ್ನು ತೆಗೆದುಹಾಕಿದರೆ ಅದು ಸೇಡಿನ ರಾಜಕಾರಣ ಆಗುವುದಿಲ್ಲವೇ?.

    ನಮ್ಮ ಸರ್ಕಾರ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಯಾಕೆ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಸಮೀಕ್ಷೆಗಾಗಿ ನಾವು ಹಣ ಖರ್ಚು ಮಾಡಿ, ಇಂಥದ್ದೊಂದು ಸಮೀಕ್ಷೆಯ ವರದಿ ಸರ್ಕಾರದ ಬಳಿ ಇದ್ದರೆ ಮೀಸಲಾತಿ ನಿಗದಿ ಮಾಡಲು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತದೆ ಎಂದು ಮಾಡಿದ್ದೆವು. ಯಾವೆಲ್ಲ ಸಮುದಾಯಗಳು ಹಿಂದುಳಿದಿವೆ ಅವುಗಳಿಗೆ ಹೆಚ್ಚಿನ ಒತ್ತು ನೀಡಿ, ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ. ಈ ಸರ್ಕಾರಕ್ಕೆ ತಳ ಸಮುದಾಯಗಳ ಬಗ್ಗೆಯಾಗಲೀ, ಮೀಸಲಾತಿ ನೀಡುವ ವಿಚಾರದಲ್ಲಿಯಾಗಲೀ ಯಾವ ಆಸಕ್ತಿ ಇಲ್ಲ.

    ಹಿಂದೆ ಮೀಸಲಾತಿ ಜಾರಿ ಮಾಡುವಾಗ ಜೇನುಗೂಡಿಗೆ ಕೈಹಾಕಿ ಮಾಡಿದ್ದ? ಬೊಮ್ಮಾಯಿ ಅವರ ಸರ್ಕಾರ ಏನು ಹೊಸದಾಗಿ ಮೀಸಲಾತಿ ಜಾರಿ ಮಾಡಿದ್ದ? ಕೆಟಗರಿ 1, 2ಎ, 2ಬಿ, 3ಎ, 3ಬಿ ಇವುಗಳೆಲ್ಲ ಬೊಮ್ಮಾಯಿ ಅವರ ಸರ್ಕಾರದ ಕಾಲದಲ್ಲಿ ಮಾಡಿದ್ದ? ಹಿಂದೆಲ್ಲಾ ಮೀಸಲಾತಿ ನೀಡಿಲ್ವಾ?

     ಪ್ರಧಾನಿಗಳು ಸರ್ಕಾರಿ ಕಾರ್ಯಕ್ರಮಕ್ಕೆ ಹೇಗೆ ಬಂಡೀಪುರಕ್ಕೆ ಬರುತ್ತಾರೆ? ಅವರು ಬರುವುದಕ್ಕೆ ನಾನೇನು ಅಡ್ಡಿಪಡಿಸುವುದಿಲ್ಲ. ಅವರಿಗೆ ಚುನಾವಣಾ ಆಯೋಗದವರು ಅನುಮತಿ ನೀಡಿದ್ದಾರ?. ಅನುಮತಿ ಇಲ್ಲದೆ ಬಂದರೆ ನೀತಿ ಸಂಹಿತಿಯ ಉಲ್ಲಂಘನೆ ಮಾಡಿದಂತಾಗುತ್ತದೆ. ಪ್ರಧಾನಿಗಳಿಗೆ ಒಂದು, ಮುಖ್ಯಮಂತ್ರಿಗೆ ಒಂದು, ಮಂತ್ರಿಗಳಿಗೆ ಒಂದು, ಶಾಸಕರಿಗೆ ಒಂದು ಎಂದು ಬೇರೆ ಬೇರೆ ಕಾನೂನು ಇಲ್ಲ. ನೀತಿ ಸಂಹಿತಿ ಎಲ್ಲರಿಗೂ ಅನ್ವಯವಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link