ಬೆಂಗಳೂರು:
ಬಿಜೆಪಿ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತು ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ನಡೆಯನ್ನು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ಧರಾಮಯ್ಯ ಸದನದ ಬಾಗಿಲನ್ನೇ ಒದ್ದಿದ್ದರು. ಆಗ ಅವರನ್ನು ಅಮಾನತು ಮಾಡಲಾಗಿತ್ತೇ.? ಪೇಪರ್ ಹರಿದು ಹಾಕೋದು ಈಗ ಕಾಮನ್ ಆಗಿಬಿಟ್ಟಿದೆ. ಸ್ಪೀಕರ್ ಪೀಠಕ್ಕೆ ಹೋಗಿ ಅವರಿಗೆ ದೈಹಿಕವಾಗಿ ಹಲ್ಲೆ ಮಾಡಿದ್ದರೆ ಅಮಾನತು ಮಾಡಬಹುದಿತ್ತು. ಆದರೆ ಯಾರದೋ ಮಾತು ಕೇಳಿ ಆರು ತಿಂಗಳು ಅಮಾನತು ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ,
ಸದನದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಸ್ಪೀಕರ್ ಅವರ ಕರ್ತವ್ಯ. ಅಲ್ಲದೇ ಯಾವುದೇ ಸದಸ್ಯರು ಅಶಿಸ್ತು ಪ್ರದರ್ಶಿಸಿದರೆ ಅವರನ್ನು ಸದನದಿಂದ ಅಮಾನತು ಮಾಡುವ ಅಧಿಕಾರ ಕೂಡ ಅವರಿಗಿದೆ. ಆದರೆ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡಿಸಿದ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ನಡೆ ಸರಿಯಲ್ಲ ಎಂದು ಹೇಳಿದರು.
ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ವಹಿಸದಿರಲು ರಾಜ್ಯ ಸರ್ಕಾರ ಭಂಡತನ ತೋರಿದ್ದೇ ಬಿಜೆಪಿ ಶಾಸಕರ ಪ್ರತಿಭಟನೆಗೆ ಕಾರಣವಾಗಿದೆ. ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಪಕ್ಷ ಶಾಸಕರನ್ನು ಸ್ಪೀಕರ್ ಅವರು ತಮ್ಮ ಕಚೇರಿಗೆ ಕರೆಸಿ ಬುದ್ಧಿವಾದ ಹೇಳಬಹುದಿತ್ತು. ಆದರೆ, ಈ ರೀತಿ ಏಕಾಏಕಿ 18 ಬಿಜೆಪಿ ಶಾಸಕರ ಅಮಾನತು ಆದೇಶ ಹೊರಿಡಿಸಿರುವದನ್ನು ನೋಡಿದರೆ, ಇದರ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎಂಬುದು ಅನುಮಾನ ಮೂಡಿಸುತ್ತಿದೆ ಎಂದು ತಿಳಿಸಿದರು.
“ಬಿಜೆಪಿ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತು ಮಾಡಿರುವುದು ಖಂಡನೀಯ. ಈ ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಸದನದ ಬಾಗಿಲನ್ನೇ ಒದ್ದಿದ್ದರು. ಆಗ ಅವರನ್ನು ಅಮಾನತು ಮಾಡಿರಲಿಲ್ಲ. ಆದರೆ, ಈಗ ಸ್ಪೀಕರ್ ಮುಂದೆ ಕಾಗದ ಹರಿದು ಹಾಕಿದ್ದಾರೆ ಎಂಬ ನೆಪವೊಡ್ಡಿ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಪೇಪರ್‌ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸುವುದು ಈಗ ಸಾಮಾನ್ಯ ಸಂಗತಿ ಎಂದರು.
ಒಂದು ವೇಳೆ ಬಿಜೆಪಿ ಶಾಸಕರು ಸ್ಪೀಕರ್ ಪೀಠಕ್ಕೆ ನುಗ್ಗಿದ್ದರೆ ಅಥವಾ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾಗಿದ್ದರೆ, ಇಂತಹ ಕಠಿಣ ಕ್ರಮ ಕೈಗೊಳ್ಳಬಹುದಿತ್ತು. ಅದಕ್ಕೆ ನಾವ್ಯಾರೂ ತಕರಾರು ಕೂಡ ಮಾಡುತ್ತಿರಲಿಲ್ಲ. ಆದರೆ, ಕೇವಲ ಸ್ಪೀಕರ್ ಪೀಠದ ಮುಂದೆ ಕಾಗದ ಹರಿದು ಹಾಕಿದ್ದಾರೆ ಎಂಬ ಕಾರಣಕ್ಕೆ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವ ಮಾದರಿಯಲ್ಲಿಲ್ಲ ಎಂದು ಕಿಡಿಕಾರಿದರು.
“ಸ್ಪೀಕರ್ ಯುಟಿ ಖಾದರ್ ಅವರು ತಮ್ಮ ನಿರ್ಧಾರವನ್ನು ಸ್ವಯಂಪ್ರೇರಣೆಯಿಂದ ಹಿಂಪಡೆಯಬೇಕು. ಶಾಸಕರು ಯಾವುದೇ ಮೀಟಿಂಗ್‌ನಲ್ಲೂ ಭಾಗವಹಿಸಬಾರದು ಎಂದು ಹೇಳಿದರೆ ಅವರ ಹಕ್ಕುಗಳನ್ನು ಕಿತ್ತುಕೊಂಡಂತಾಗುವುದಿಲ್ಲವೇ? ಸ್ಪೀಕರ್ ಅವರ ಅಮಾನತು ಆದೇಶದ ಹಿಂದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಅವರೇ ಸ್ಪೀಕರ್ ಅವರಿಗೆ ಹೇಳಿ ಅಮಾನತು ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹಾವೇರಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದರು.
ಸ್ಪೀಕರ್ ನಡೆ ಪ್ರಜಾಪ್ರಭುತ್ವ ವಿರುದ್ಧವಾಗಿದೆ. ಕರ್ನಾಟಕದಲ್ಲಿ ಮಾತ್ರ ಅರಾಜಕತೆ ಇದೆ. ಸರ್ಕಾರದಲ್ಲಿರುವ ಸಚಿವರನ್ನು ಹನಿ ಟ್ರ್ಯಾಪ್ ಮಾಡಲಾಗುತ್ತಿದೆ. ಸರ್ಕಾರದ ವಿರುದ್ಧವೇ ಆರೋಪಗಳನ್ನು ಎತ್ತಲಾಗುತ್ತಿದೆ. ಸಿಎಂ ಎರಡೂ ಕಡೆಯಿಂದ ಆಟವಾಡುತ್ತಿದ್ದಾರೆ. ನಾವು ವಿಧಾನಸಭೆಯಲ್ಲಿ ಇದನ್ನು ಪ್ರಶ್ನಿಸಿದಾಗ, ನಮ್ಮ ಶಾಸಕರನ್ನು ಹೊರಹಾಕಲಾಗಿದೆ ಎಂದು ಕಿಡಿಕಾರಿದರು.
ಆದರೆ, ಬಿಜೆಪಿ ಆರೋಪವನ್ನು ತಿರಸ್ಕರಿಸಿರುವ ಸ್ಪೀಕರ್ ಯುಟಿ.ಖಾದರ್ ಅವರು, ಬಿಜೆಪಿ ನಾಯಕರ ಅಮಾನತು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸದನದ ಘನತೆಯನ್ನು ಎತ್ತಿಹಿಡಿಯುವುದು ಅಗತ್ಯವಿದೆ ಎಂದು ಹೇಳಿದ್ದಾರೆ.
