ಜಗ್ಗೇಶ್ ಜನ್ಮದಿನಕ್ಕೆ ಪ್ರಧಾನಿ ಮೋದಿಯಿಂದ ಹಾರೈಕೆ ಪತ್ರ….!

ಬೆಂಗಳೂರು:

    ನವರಸ ನಾಯಕ ಜಗ್ಗೇಶ್‌  ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ  ಅವರು ಜಗ್ಗೇಶ್​ಗೆ ಶುಭಾಶಯ  ಕೋರಿ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಬರೆದ ಪತ್ರವನ್ನು ಶೇರ್ ಮಾಡಿಕೊಂಡಿರೋ ಜಗ್ಗೇಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಅವರಿಗೆ ಇಂದು 62ನೇ ಜನ್ಮದಿನವಾಗಿದೆ. ಪುನೀತ್‌ ಜನ್ಮದಿನವೇ ಜಗ್ಗೇಶ್‌ ಅವರ ಬರ್ತ್‌ಡೇ ಕೂಡ ಇರುವುದು ಕನ್ನಡ ಸಿನಿಮಾಭಿಮಾನಿಗಳಿಗೆ ಹಿಗ್ಗು ತಂದಿದೆ.

   ಮೋದಿ  ಬರ್ತ್‌ಡೇ ಹಾರೈಕೆ ಪತ್ರ ಹಂಚಿಕೊಂಡಿರುವ ಜಗ್ಗೇಶ್ ಅವರು, “ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ. ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕ ನರೇಂದ್ರ ಮೋದಿ ಅವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ’ ಎಂದು ಬರೆದುಕೊಂಡಿದ್ದಾರೆ. ‘ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದ ಮೇಲೂ ನೆನಪಿಡುವ ಸಾಧನೆಯ ಓಟ ಆಗಿರಬೇಕು. ನನ್ನ ಸಲಹುತ್ತಿರುವ ಪ್ರೀತಿಪಾತ್ರರು ಸರ್ವರಿಗೂ ಧನ್ಯವಾದ” ಎಂದು ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಅವರಿಗೆ ರಾಜಕೀಯ ನಾಯಕರು ಹಾಗೂ ಸಿನಿಮಾ ರಂಗದವರ ಕಡೆಯಿಂದಲೂ ಶುಭಾಶಯಗಳು ಬಂದಿವೆ.

    ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಜಗ್ಗೇಶ್‌ ಹೀರೋ ಆಗಿ, ಕಾಮಿಡಿಯನ್ ಆಗಿ, ವಿಲನ್ ಆಗಿ ಹಲವು ರೀತಿಯ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಜಗ್ಗೇಶ್ ಅಭಿಮಾನಿ ಬಳಗ ಸಾಕಷ್ಟು ದೊಡ್ಡದಿದೆ. ರಾಜಕೀಯದಲ್ಲೂ ಸಕ್ರಿಯರಾಗಿರುವ ಜಗ್ಗೇಶ್‌ ರಾಜ್ಯಸಭೆ ಸದಸ್ಯರು. ಬಿಜೆಪಿ ಮುಖಂಡರಾಗಿ ಪ್ರಧಾನಿ ಮೋದಿಯವರ ಒಡನಾಟವನ್ನೂ ಹೊಂದಿದ್ದಾರೆ.