ಬೆಂಗಳೂರು
ಕಾಂಗ್ರೆಸ್ ಜತೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರ ರಚಿಸಿ ಅವಧಿಗೆ ಮುನ್ನವೇ ಅಧಿಕಾರ ಕಳೆದುಕೊಂಡಿದ್ದಾರೆ. ಹೀಗಾಗಿ ಅಳೆದು ತೂಗಿ ಕೊನೆಯ ನಿರ್ಧಾರವೆಂಬಂತೆ ಬಿಜೆಪಿಯ ಕಡೆಗೆ ಒಲವು ತೋರಿ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದು, ಈ ಚುನಾವಣೆ ಜೆಡಿಎಸ್ ಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಹೆಚ್.ಡಿ.ದೇವೇಗೌಡರ ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಟೀಕಿಸುತ್ತಾ ಬರುತ್ತಿದ್ದಾರೆಯಾದರೂ ಅದರಿಂದ ರಾಜಕೀಯವಾಗಿ ಕಾಂಗ್ರೆಸ್ ಗೆ ಲಾಭವಾದಂತೆ ಕಾಣುತ್ತಿಲ್ಲ. ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದೇ ನಾವು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರಾದರೂ ಇವತ್ತಿನ ಮಟ್ಟಿಗೆ ರಾಜಕೀಯದಲ್ಲಿ ಶತ್ರುಗಳಾಗಿಯೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾರು ಏನೇ ಹೇಳಿದರೂ ದೇವೇಗೌಡರನ್ನು ಒಕ್ಕಲಿಗರು ಬಿಟ್ಟು ಕೊಡಲಾರರು. ಅಷ್ಟರ ಮಟ್ಟಿಗೆ ಅವರು ಸಂಬಂಧವನ್ನು ಉಳಿಸಿಕೊಂಡಿದ್ದಾರೆ.
ಇದುವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅದರಲ್ಲೂ ನರೇಂದ್ರಮೋದಿ ಅವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಎದುರಿಸಿದ 2014ರ ಚುನಾವಣೆ ಮತ್ತು ಪ್ರಧಾನಿಯಾದ ಬಳಿಕದ 2019ರ ಚುನಾವಣೆಗಳಲ್ಲಿ ಹೆಚ್.ಡಿ.ದೇವೇಗೌಡರು ಬಿಜೆಪಿಯನ್ನು ಕಠೋರವಾಗಿಯೇ ಟೀಕಿಸಿದ್ದಲ್ಲದೆ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದರು. ಹಿಂದಿನ ಚುನಾವಣೆಯಲ್ಲಿ ನೇರವಾಗಿ ಮೋದಿಯನ್ನೇ ಟಾರ್ಗೆಟ್ ಮಾಡಿದ್ದಲ್ಲದೆ, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವ ಹೇಳಿಕೆ ನೀಡಿದ್ದರು. ಆದರೆ 2019ರ ಚುನಾವಣೆಯಲ್ಲಿ ಸ್ವತಃ ದೇವೇಗೌಡರೇ ಸೋಲು ಕಾಣುವಂತಾಯಿತು.
ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುತ್ತಾ ಚುನಾವಣೆ ಎದುರಿಸುವುದು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಾಗಿತ್ತು. ಅದಕ್ಕಿಂತ ಹೆಚ್ಚಾಗಿ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡು ಇಡೀ ರಾಜ್ಯ ಸುತ್ತಾಡಿದರೂ ನಿರೀಕ್ಷಿತ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲಲಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಜೆಡಿಎಸ್ ಮತವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಸೆಳೆದುಕೊಂಡಿತ್ತು. ರಾಜ್ಯದಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ನಿಧಾನವಾಗಿ ಬಿಜೆಪಿ ಗಟ್ಟಿಯಾಗುತ್ತಿರುವುದನ್ನು ಗಮನಿಸಿದರೆ ಭವಿಷ್ಯದಲ್ಲಿ ಜೆಡಿಎಸ್ ಗೆ ಶತ್ರು ಕಾಂಗ್ರೆಸ್ ಅಲ್ಲ ಬಿಜೆಪಿಯೇ ಎನ್ನುವುದು ಮನದಟ್ಟಾಗಿತ್ತು.
ಇದೆಲ್ಲ ಕಾರಣಗಳಿಂದ ಮತ್ತು ರಾಜ್ಯದಲ್ಲಿ ಜೆಡಿಎಸ್ ಅಸ್ಥಿತ್ವ ಉಳಿಸಿಕೊಳ್ಳಬೇಕಾದರೆ ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟವನ್ನು ಸೇರುವುದು ಜೆಡಿಎಸ್ ಗೆ ಅಗತ್ಯವಾಗಿತ್ತು. ಹೀಗಾಗಿ ಈ ಬಾರಿ ಬಿಜೆಪಿ ಜತೆಗೆ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಸದ್ಯ ಜೆಡಿಎಸ್ ಗೆ ಮೂರು ಸ್ಥಾನವನ್ನು ಬಿಟ್ಟುಕೊಡಲಾಗಿದೆ. ಬಿಟ್ಟುಕೊಡಲಾಗಿರುವ ಕ್ಷೇತ್ರಗಳ ಪೈಕಿ ಮಂಡ್ಯ ಮತ್ತು ಹಾಸನ ಕ್ಷೇತ್ರಗಳು ಜೆಡಿಎಸ್ ಪ್ರಾಬಲ್ಯಕ್ಕೆ ಒಳಪಟ್ಟ ಕ್ಷೇತ್ರಗಳಾಗಿದ್ದು, ಕೋಲಾರದಲ್ಲಿ ಜೆಡಿಎಸ್ ಗೆ ಮತ ಬ್ಯಾಂಕ್ ಇದೆಯಾದರೂ ಸದ್ಯ ಅದು ಬಿಜೆಪಿ ಹಿಡಿತದಲ್ಲಿದೆ.
ಈ ಬಾರಿ ಜೆಡಿಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡ ಬಳಿಕ ರಾಜ್ಯದ ಮಟ್ಟಿಗೆ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಇದು ಬಿಜೆಪಿಯಲ್ಲಿ ರಾಜಕೀಯ ಕೆಸರು ಎರಚಾಟ, ಅಸಮಾಧಾನ, ಬಂಡಾಯ ಹೀಗೆ ಹಲವು ಬೆಳವಣಿಗೆಗೆ ಕಾರಣವಾಗಿದೆ. ಆದರೆ ಯಾರು ಏನೇ ಮಾತನಾಡಿದರೂ ಹೈಕಮಾಂಡ್ ಮುಂದೆ ಮಂಡಿಯೂರಲೇ ಬೇಕಾಗಿದೆ. ಹೀಗಾಗಿ ಕೆಲವರು ಒಳಗೆ ಅಸಮಾಧಾನವಿದ್ದರೂ ಹೊರಗೆ ಏನೂ ಆಗಿಯೇ ಇಲ್ಲ ಎಂಬಂತೆ ಇದ್ದಾರೆ. ಇವತ್ತು ಬಿಜೆಪಿ ಉಚ್ಛ್ರಾಯ ಸ್ಥಿತಿಯಲ್ಲಿದೆ. ಹೀಗಾಗಿ ಒಬ್ಬರೋ ಇಬ್ಬರೋ ನಾಯಕರು ಬಂಡಾಯವೆದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಂಬಲಾಗದು.
ಹೆಚ್ಚು ಕಡಿಮೆ ರಾಜ್ಯದಲ್ಲಿ ಎರಡು ಪಕ್ಷದಲ್ಲಿ ಸೀಟು ಹಂಚಿಕೆ ಮುಗಿದಿದೆ. ಒಂದೆರಡು ಕ್ಷೇತ್ರದಲ್ಲಿ ಬಾಕಿಯಿದೆ. ಅದು ಶೀಘ್ರವೇ ಮುಗಿಯಲಿದ್ದು, ಆ ಬಳಿಕ ನಾಮಪತ್ರ ಸಲ್ಲಿಕೆ ಪ್ರಚಾರ ಹೀಗೆ ಎಲ್ಲ ಕಾರ್ಯಚಟುವಟಿಕೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಹೇಗಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಬಿಜೆಪಿ ವಿರುದ್ಧ ಸಮರ ಸಾರಿದ್ದವು. ಈ ಬಾರಿ ಉಲ್ಟಾ ಆಗಿದೆ. ಜೆಡಿಎಸ್ ಬಿಜೆಪಿ ಒಂದಾಗಿವೆ. ಕಾಂಗ್ರೆಸ್ ಇವರನ್ನು ಎದುರಿಸಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಪಂಚ ಗ್ಯಾರಂಟಿಯನ್ನು ಅನುಷ್ಠಾನಗೊಳಿಸಿದ ಸಂಭ್ರಮದಲ್ಲಿದೆ
ಕರ್ನಾಟಕದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳು ರಾಜ್ಯ ಕಾಂಗ್ರೆಸ್ ನಾಯಕರ ಕೈಹಿಡಿದಿದ್ದು, ರಾಜ್ಯದಲ್ಲಿ ಅಧಿಕಾರ ಪಡೆಯುವಂತಾಗಿದೆ. ಹಾಗೆಯೇ ತೆಲಂಗಾಣದಲ್ಲಿಯೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಗೆ ಅಧಿಕಾರ ತಂದುಕೊಟ್ಟಿದೆ. ಹೀಗಾಗಿ ಇದನ್ನೇ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ, ರಾಷ್ಟ್ರಮಟ್ಟದಲ್ಲಿ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯುವ ಆಲೋಚನೆಯನ್ನು ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ ಮಾಡುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹತ್ತು ಹಲವು ರೀತಿಯ ಕುತೂಹಲವನ್ನು ಕೆರಳಿಸಿದ್ದಂತು ನಿಜ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ