ಬೈದವರಿಗೆಲ್ಲರಿಗೂ ಬ್ಯಾಟಲ್ಲೇ ಉತ್ತರ ನೀಡಿದ ಕೆಎಲ್ ರಾಹುಲ್

ದುಬೈ:

    ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 83 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು. 

   ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್​ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಮ್ ಇಂಡಿಯಾದ ಅಂದಿನ ಸೋಲಿಗೆ ಕೆಎಲ್ ರಾಹುಲ್ ಅವರೇ ಕಾರಣ ಎಂದು ಅನೇಕರು ಷರಾ ಬರೆದಿದ್ದರು.

   ರಾಹುಲ್ ಅವರನ್ನು ಟೀಕಿಸುವ ಭರದಲ್ಲಿ ಉಳಿದ ಬ್ಯಾಟರ್​ಗಳ ವೈಫಲ್ಯಗಳು ಕೂಡ ಮರೆಯಾಯಿತು. ಅಷ್ಟೇ ಯಾಕೆ ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ ಚಾನ್ಸ್ ನೀಡಬಾರದೆಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರಾಹುಲ್ ಯಶಸ್ವಿಯಾದರು.

   ಆದರೆ ಈ ಬಾರಿ ಕೆಎಲ್ ರಾಹುಲ್​ಗೆ ಸಿಕ್ಕಿದ್ದು 6ನೇ ಕ್ರಮಾಂಕ. ಕಳೆದ ನಾಲ್ಕೈದು ವರ್ಷಗಳಿಂದ 5ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕನ್ನಡಿಗನಿಗೆ ಹಿಂಬಡ್ತಿ ನೀಡಲಾಗಿತ್ತು. ಆದರೆ ಅದ್ಯಾವುದಕ್ಕೂ ರಾಹುಲ್ ತಲೆ ಕೆಡಿಸಿಕೊಳ್ಳಲಿಲ್ಲ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ದೃಢ ನಿರ್ಧಾರ ತೆಗೆದುಕೊಂಡರು.

  ಬಾಂಗ್ಲಾದೇಶ್ ವಿರುದ್ಧದ ಮೊದಲ ಪಂದ್ಯದಲ್ಲಿ 41 ರನ್​ಗಳ ಕೊಡುಗೆ ನೀಡಿ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 23 ರನ್​ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ತಲುಪಿಸಿದರು. ನಿರ್ಣಾಯಕವಾಗಿದ್ದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 42 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

   ಇನ್ನು ನ್ಯೂಝಿಲೆಂಡ್ ವಿರುದ್ದದ ಫೈನಲ್ ಪಂದ್ಯದಲ್ಲಿ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೆ ಮೇಲೆ ಹೊತ್ತುಕೊಂಡಂತೆ ಬ್ಯಾಟ್ ಬೀಸಿದರು. ಅಲ್ಲದೆ 33 ಎಸೆತಗಳಲ್ಲಿ ಅಜೇಯ 34 ರನ್ ಬಾರಿಸಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 

   ಈ ಮೂಲಕ ಕೆಎಲ್ ರಾಹುಲ್ 2023 ರಲ್ಲಿ ತನ್ನ ಬ್ಯಾಟಿಂಗ್ ನೋಡಿ ಬೈದಿದ್ದ ಪ್ರತಿಯೊಬ್ಬರಿಗೂ ಬ್ಯಾಟ್ ಮೂಲಕವೇ ಉತ್ತರ ನೀಡಿದರು. ಅಲ್ಲದೆ ಟೀಮ್ ಇಂಡಿಯಾಗೆ ತನ್ನ ಅವಶ್ಯಕತೆ ಯಾಕಿದೆ ಎಂಬುದನ್ನು ಇಡೀ ವಿಶ್ವಕ್ಕೆ ಸಾರಿ ಹೇಳಿದರು. ಈ ಮೂಲಕ ತನ್ನ ವಿರುದ್ಧ ಕೇಳಿ ಬರುತ್ತಿದ್ದ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಕನ್ನಡಿಗ ಫುಲ್ ಸ್ಟಾರ್ ಇಟ್ಟಿದ್ದಾರೆ.