ಸಿಎಎ ಹಿಂಸಾಚಾರ : ಗುಪ್ತಚರ ಸಿಬ್ಬಂದಿಯ ಶವ ಮೋರಿಯಲ್ಲಿ ಪತ್ತೆ!

  ನವದೆಹಲಿ :

      ಪೌರತ್ವದ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಹೊತ್ತು ಉರಿಯುತ್ತಿದ್ದು, ಈ ನಡುವೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಶವವೊಂದು ದೆಹಲಿಯ ಮೋರಿಯಲ್ಲಿ ಪತ್ತೆಯಾಗಿದೆ.

     ದಾಳಿಗೆ ತುತ್ತಾದ ವ್ಯಕ್ತಿಯನ್ನು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ 26ರ ಹರೆಯದ ಅಂಕಿತ್ ಶರ್ಮಾ ಎಂದು ಗುರುತಿಸಲಾಗಿದೆ. ಜನರ ಗುಂಪೊಂದು ಅಂಕಿತ್ ಮನೆಯಿರುವ ಬೀದಿಗೆ ಧಾವಿಸಿ ಬಂದು ಕಲ್ಲು ತೂರಾಟ ನಡೆಸಲಾರಂಭಿಸಿದ್ದರು. ಈ ವೇಳೆ ಮನೆಯವರು ಅಂಕಿತ್‌ಗೆ ಕರೆ ಮಾಡಿ, ರಕ್ಷಣೆಗಾಗಿ ತಕ್ಷಣ ಬರುವಂತೆ ಹೇಳಿದ್ದರು. ಓಡೋಡಿ ಬಂದರೂ, ಮನೆಯ ಸಮೀಪ ಬಂದಾಗ ಈ ಗುಂಪು ತಡೆದು ನಿಲ್ಲಿಸಿತು. ಅಂಕಿತ್‌ಗೆ ಥಳಿಸಿದ ಈ ಗುಂಪು ಅವರನ್ನು ಎಳೆದೊಯ್ದಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

      ಯುವ ಅಧಿಕಾರಿ ಅಂಕಿತ್ ಶರ್ಮಾ ಅವರ ದೇಹದಲ್ಲಿ ಗುಂಡೇಟಿನ ಗಾಯವಿದೆ. ಮರಣೋತ್ತರ ಪರೀಕ್ಷೆಗಾಗಿ ಗುರು ತೇಗ್ ಬಹಾದೂರ್ (ಜಿಟಿಬಿ) ಆಸ್ಪತ್ರೆಗೆ ಒಯ್ಯಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

      ಕಳೆದ ಎರಡು ದಿನಗಳ ಹಿಂದೆ ಉಂಟಾದ ಈ ಸಂಘರ್ಷದಲ್ಲಿ 20 ನಜನ ಸಾವನ್ನಪ್ಪಿದ್ದಾರೆ. ಸೋಮವಾರ ಎರಡು ಗುಂಪುಗಳ ನಡುವೆ ಉಂಟಾದ ಸಂಘರ್ಷದಲ್ಲಿ 42 ವರ್ಷದ ಹೆಡ್​ ಕಾನ್ಸ್​ಟೇಬಲ್​ ರತನ್​ ಲಾಲ್​ ಸಾವನ್ನಪ್ಪಿದ್ದರು.

      ಸದ್ಯ ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು, ನಿನ್ನೆಗಿಂತ ಕೊಂಚ ಗಲಭೆ ಕಡಿಮೆಯಾಗಿದೆ. ಈಶಾನ್ಯ ದೆಹಲಿಯುದ್ದಕ್ಕೂ ಪ್ಯಾರಾ ಮಿಲಿಟರಿ ಮತ್ತು ರಿಸರ್ವ್​ ಪೊಲೀಸ್​ ಪಡೆ ಗಸ್ತು ತಿರುಗುತ್ತಿದ್ದು, ಸೈನ್ಯವನ್ನೂ ನಿಯೋಜಿಸುವ ಸಾಧ್ಯತೆಯಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ