ನವದೆಹಲಿ:
ಭಾರತದಲ್ಲಿ ನೆಲೆಸಿರುವ ಯಹೂದಿ ಮತ್ತು ಇಸ್ರೇಲ್ ಪ್ರಜೆಗಳನ್ನು ಗುರಿಯಾಗಿರಿಸಿಕೊಂಡು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾ(Al Qaeda) ಹಾಗೂ ಐಸಿಸ್(ISIS) ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಅನುಸರಿಸಿ, ಈ ಸಮುದಾಯಗಳು ಅಧಿಕವಾಗಿ ವಾಸಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ಜನಪ್ರಿಯ ಸ್ಥಳಗಳಾದ ಫ್ರೀಮಾಸನ್ ಟೆಂಪಲ್, ಸರ್ವೊಥಮಾಮ್ ಮೇಸೋನಿಕ್ ಟೆಂಪಲ್ ಮತ್ತು ಕೇರಳದ ಕೊಚ್ಚಿಯ ಕೋಡರ್ ಹಾಲ್ ಪ್ರದೇಶಗಳಲ್ಲಿ ಜಿಹಾದಿಗಳಿಂದ ತೀವ್ರ ಬೆದರಿಕೆ ಇದೆ ಎನ್ನಲಾಗಿದೆ.
ಅಲ್ ಖೈದಾ(Al Qaeda) ಹಾಗೂ ಐಸಿಸ್(ISIS) ಸಂಘಟನೆ ಜಿಹಾದಿ ಸಂಘಟನೆಯಿಂದ ಪ್ರಭಾವಿತಗೊಂಡಿದ್ದು, ಭಾರತದಲ್ಲಿ ಪ್ರವಾಸ ಕೈಗೊಂಡಿರುವ ಇಸ್ರೇಲ್ ಪ್ರವಾಸಿಗರನ್ನು ಅಪಹರಿಸುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿ ವಿವರಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕ್ರಮಕ್ಕೆ ಇಸ್ರೇಲ್ ಭಾರತವನ್ನು ಬೆಂಬಲಿಸಿದ್ದರಿಂದ, ಭಯೋತ್ಪಾದಕ ಸಂಘಟನೆಗಳು ಆ ದೇಶದೊಂದಿಗೂ ತಮ್ಮ ದ್ವೇಷ ತೀರಿಸಿಕೊಳ್ಳಲು ಮುಂದಾಗಿವೆ. ಹೀಗಾಗಿಯೇ ಭಾರತದಲ್ಲಿ ವಾಸಿಸುವ ಇಸ್ರೇಲಿಗರನ್ನು ಗುರಿಯಾಗಿಸಲು ಸಂಚು ರೂಪಿಸುತ್ತಿವೆ ಎಂದು ಏಜೆನ್ಸಿಗಳು ಎಚ್ಚರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ