ಬೆಂಗಳೂರು:
ಸಂಪುಟ ವಿಸ್ತರಣೆಯ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿದೇಶ ಪ್ರವಾಸ ರದ್ದಾಗಿದೆ.
ಈ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಾನು ಬಹುಪಾಲು ವಿದೇಶಕ್ಕೆ ಹೋಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಅವಕಾಶ ಕೇಳಿದ್ದೇನೆ. ಈವರೆಗೆ ಸಮಯ ನಿಗಧಿಯಾಗಿಲ್ಲ. ಕೇಂದ್ರದ ವರಿಷ್ಠರಿಂದ ದಿನಾಂಕ ಲಭ್ಯವಾದರೆ ದೆಹಲಿಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.
ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಮಾಡಿಯೇ ವಿದೇಶ ಪ್ರವಾಸ ಕೈಗೊಳ್ಳಿ ಎಂಬ ಒತ್ತಡವನ್ನು ಅರ್ಹ ಶಾಸಕರು ಮುಂದಿಟ್ಟಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಅದು ಸುಲಭದ ಸಂಗತಿಯಲ್ಲ. ಹೀಗಾಗಿ, ಗೊಂದಲ ಇಟ್ಟುಕೊಂಡು ವಿದೇಶ ಪ್ರವಾಸ ಕೈಗೊಳ್ಳುವುದೇ ಬೇಡ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.
ಈ ತಿಂಗಳ 21ರಿಂದ ನಾಲ್ಕು ದಿನಗಳ ಕಾಲ ಮುಖ್ಯಮಂತ್ರಿಗಳು ಪ್ರವಾಸ ಕೈಗೊಳ್ಳಬೇಕಿತ್ತು. ಇದೇ ವೇಳೆ ಮುಖ್ಯಮಂತ್ರಿಗಳು ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆ ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಲು ಪ್ರಯತ್ನಿಸಲಿದ್ದಾರೆ.
ಅಲ್ಲದೇ ಸ್ವಿಜರ್ಲೆಂಡ್‌ನಲ್ಲಿ ಅತ್ಯಧಿಕ ಶೀತದ ವಾತಾವರಣ ಇರುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಪ್ರವಾಸ ಸರಿಯಲ್ಲ ಎಂಬ ಕಾರಣಕ್ಕಾಗಿ ಪ್ರವಾಸ ರದ್ದುಪಡಿಸಲು ಯಡಿಯೂರಪ್ಪ ಬಯಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
