ಹೊಸದಿಲ್ಲಿ:
‘ಚೌಕೀದಾರ್ ಚೋರ್ ಹೈ’ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದು ತಪ್ಪಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೊನೆಗೂ ಸರ್ವೋಚ್ಛ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಹೋದಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿರಿಸಿ ಚೌಕೀದಾರ ಕಳ್ಳ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸುತ್ತಿದ್ದರು. ಅಲ್ಲದೇ ಸುಪ್ರೀಂ ಕೋರ್ಟೇ ಇದನ್ನು ದೃಢಪಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದಕ್ಕಾಗಿ ಮತ್ತು ಮತದಾರರ ಹಾದಿ ತಪ್ಪಿಸುವುದಕ್ಕಾಗಿಯೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ನ್ಯಾಯಾಲಯದ ಮೊರೆ ಹೋಗಿತ್ತು.
ಮೊದಲು ಎರಡು ಬಾರಿಯೂ ಅವರು ವಿಷಾದ ವ್ಯಕ್ತಪಡಿಸಿ, ನ್ಯಾಯಾಂಗ ನಿಂದನೆ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಈ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಕ್ಷಮೆ ಕೋರಿರಲಿಲ್ಲ.
ಅನಗತ್ಯವಾಗಿ ರಾಜಕೀಯ ಉದ್ದೇಶಕ್ಕೆ ಸುಪ್ರೀಂಕೋರ್ಟ್ ಹೆಸರನ್ನು ಬಳಸಿಕೊಂಡಿದ್ದಕ್ಕೆ ಸುಪ್ರೀಂಕೋರ್ಟ್ ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದು, ತಪ್ಪು ಒಪ್ಪಿಕೊಳ್ಳಿ ಎಂದು ರಾಹುಲ್ ಗೆ ಸುಪ್ರೀಂ ಸೂಚಿಸಿತ್ತು.
ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಬಲಗೊಳ್ಳುವ ಸೂಚನೆ ಅರಿತ ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ಗೆ ಕ್ಷಮೆಯಾಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ