ಸಿರಿಧಾನ್ಯ : ಬಳಕೆ ಹೆಚ್ಚು – ಉತ್ಪಾದನೆ ಕಡಿಮೆ

ತುಮಕೂರು :

      ಸುಲಭವಾಗಿ ಬೆಳೆಯಬಹುದಾದ, ಪರಿಶ್ರಮ ಇಲ್ಲದ ಉತ್ಪಾದನಾ ಬೆಳೆಗೆ ಹೆಚ್ಚು ಮಹತ್ವ ಇದ್ದು, ಕಠಿಣ ಪರಿಶ್ರಮ ಹಾಕುವ ಬೆಳೆಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಭತ್ತದ ಬಿಳಿಅಕ್ಕಿ ಬಳಕೆ ಹೆಚ್ಚಿದಂತೆಲ್ಲಾ ಸಿರಿಧಾನ್ಯಗಳನ್ನು ಬೆಳೆಯುವ ಮತ್ತು ಉಪಯೋಗಿಸುವ ಜನರು ಕಡಿಮೆಯಾದರು.

ಸಿರಿಧಾನ್ಯಗಳನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿವೆ. ಈ ಧಾನ್ಯಗಳ ಪರಿಷ್ಕರಣೆ ಮತ್ತು ಮಾರಾಟ ಪ್ರಮುಖವಾಗಿ ಎದ್ದು ಕಾಣುವ ಸಮಸ್ಯೆ. ಬೆಳೆಯುವ ರೈತರೇನೋ ಸಿಗುತ್ತಾರೆ. ಆದರೆ ಅದನ್ನು ಪರಿಷ್ಕರಿಸಿ ಮಾರಾಟ ಮಾಡುವ ಪ್ರಕ್ರಿಯೆಗಳು ಅಷ್ಟು ಸುಲಭವಲ್ಲ. ಇದಕ್ಕಾಗಿ ವ್ಯವಸ್ಥೆಗಳೂ ನಮ್ಮಲ್ಲಿಲ್ಲ. ಒಬ್ಬ ರೈತ ಭತ್ತ ಬೆಳೆದರೆ, ಜೋಳ ಬೆಳೆದರೆ ಅಥವಾ ರಾಗಿಯೆ ಆಗಲಿ ಇದೆಲ್ಲದಕ್ಕೂ ಆಧುನಿಕ ತಂತ್ರಜ್ಞಾನದ ಸಂಸ್ಕರಣಾ ವ್ಯವಸ್ಥೆ, ಮಾರಾಟದ ವ್ಯವಸ್ಥೆ ಎಲ್ಲವೂ ಇದೆ. ಆದರೆ ಸಿರಿಧಾನ್ಯಗಳ ವಿಷಯದಲ್ಲಿ ನಾವಿನ್ನೂ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮಟ್ಟಕ್ಕೆ ದಾಪುಗಾಲು ಹಾಕಿಲ್ಲ.

ಹಾರಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕೊಯ್ಲು ನಂತರ ಹಾರಕಕ್ಕೆ ಮಣ್ಣು ಕಟ್ಟಿ ಅದನ್ನು ಬೀಸುವ ಕಲ್ಲಿನಿಂದ ಬೇರ್ಪಡಿಸುವ ಹಿಂದಿನ ಪದ್ಧತಿಯನ್ನು ಅನುಸರಿಸಲು ಈಗ ಯಾರೂ ಸಿದ್ಧರಿಲ್ಲ. ರಾಗಿ, ಜೋಳ ಆದರೆ ಸುಲಭವಾಗಿ ಚೀಲದಲ್ಲಿ ಹಿಟ್ಟಿನ ಗಿರಣಿ ಇರುವ ಕಡೆಗೆ ಕೊಂಡೊಯ್ದು ನಿಮಿಷಾರ್ಧದಲ್ಲಿ ಹಿಟ್ಟು ಮಾಡಿಸಿಕೊಂಡು ಬರಬಹುದು. ಸಿರಿಧಾನ್ಯಗಳ ವಿಷಯದಲ್ಲಿ ಹಾಗಿಲ್ಲ. ಇದು ರೈತರಿಗೆ ಎದುರಾಗುತ್ತಿರುವ ತೊಂದರೆ. ಸಿರಿಧಾನ್ಯಗಳಲ್ಲಿ ಸಿಪ್ಪೆ ತೆಗೆಯದೆ ಹಿಟ್ಟು ಮಾಡಿಸಲು ಸಾಧ್ಯವಿಲ್ಲ.

ಈ ಆಧುನಿಕ ಪದ್ಧತಿಯ ನಡುವೆಯೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುವವರೂ ಇದ್ದಾರೆ. ಸಾಂಪ್ರದಾಯಿಕವಾಗಿ ಬೆಳೆಯುವ ರೈತರು ಒಂದು ಕಡೆಯಾದರೆ, ಈ ಬೆಳೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲವು ಪ್ರಗತಿಪರ ರೈತರು ಮುಂದಾಗಿರುವುದು ಮತ್ತೊಂದು ಉದಾಹರಣೆಯಾಗಿ ಕಂಡುಬರುತ್ತದೆ.

      ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಪಾಲನಹಳ್ಳಿ ಇದಕ್ಕೊಂದು ತಾಜಾ ಉದಾಹರಣೆ. ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗದಲ್ಲಿ ಸುಮಾರು 12 ಕಿ.ಮೀ. ಅಂತರದಲ್ಲಿ ಗೋಪಾಲನಹಳ್ಳಿ ಸಿಗುತ್ತದೆ. ಇಲ್ಲಿ ಕೆಲವು ರೈತರು ಬಹಳ ವರ್ಷಗಳಿಂದ ಹಾರಕ, ನವಣೆ, ಸಜ್ಜೆ ಇತ್ಯಾದಿಗಳನ್ನು ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆಯುತ್ತಾ ಬಂದಿದ್ದಾರೆ. ಹಾರಕ ಬೆಳೆಗಾರರ ಸಂಘ ಕಟ್ಟಿಕೊಂಡಿದ್ದಾರೆ. ಈ ಸಂಘದ ಯುವಕರು ಸೇರಿ ಧಾನ್ಯ ಸಂಸ್ಕರಿಸುವ ಯಂತ್ರವನ್ನು ಅಳವಡಿಸಿದ್ದಾರೆ.

ಸಿರಿಧಾನ್ಯಗಳನ್ನು ಸಂಸ್ಕರಿಸಿ ಬೇರ್ಪಡಿಸುವ ಗಿರಣಿ ಯಂತ್ರಗಳು ಜಿಲ್ಲೆಯಲ್ಲಿ ತೀರಾ ಅಪರೂಪ. ಗೋಪಾಲನಹಳ್ಳಿಯಲ್ಲಿ ಸೀಮಿತವಾಗಿ ಇದನ್ನು ಬಳಕೆ ಮಾಡಲಾಗುತ್ತಿದೆ. ರಾಗಿ, ಜೋಳದ ಹಿಟ್ಟು ಮಾಡಿದಂತೆ ಈ ಯಂತ್ರದಲ್ಲಿ ಬಳಕೆ ಮಾಡಲಾಗದು. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬಳಿಯೂ ಆಧುನಿಕ ಸಿರಿಧಾನ್ಯ ಸಂಸ್ಕರಣಾ ಘಟಕವಿದೆ. ಶಿರಾ ತಾಲ್ಲೂಕು ಯರಗುಂಟೆಯಲ್ಲಿ ರೈತರಿಂದ ಸಿರಿಧಾನ್ಯಗಳನ್ನು ಖರೀದಿಸಿ ಆನಂತರ ಅಲ್ಲಿಯೇ ಮಾರಾಟಕ್ಕೆ ಸಿದ್ಧಪಡಿಸುವ ತಯಾರಿಕಾ ಘಟಕವೂ ಇದೆ. ಈ ಘಟಕ ರಾಜ್ಯ ಮಾತ್ರವಲ್ಲದೆ, ಇಡೀ ದೇಶದಲ್ಲಿ ಹೆಸರು ಮಾಡಿದೆ. ಅಲ್ಲಿನ ಉತ್ಪನ್ನಗಳು ಬೇರೆ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿವೆ.
ಹೀಗೆ ಕೆಲವೇ ಪ್ರದೇಶಗಳನ್ನು ಹೊರತುಪಡಿಸಿದರೆ ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳು, ಹಿಟ್ಟಿನ ಗಿರಣಿಗಳು, ಮಾರುಕಟ್ಟೆ ವ್ಯವಸ್ಥೆ ಅಷ್ಟಕಷ್ಟೆ.

      ಸರ್ಕಾರ 2019 ರಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಿಸುವ ಯೋಜನೆ ಘೋಷಿಸಿತು. ಆದರೆ ಅನುಷ್ಠಾನಕ್ಕೆ ಬಂದಿಲ್ಲ. ಕೃಷಿ ಇಲಾಖೆ ಮೂಲಕ ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸುವ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕಡೆಗೆ ಗಮನ ಹರಿಸುವುದು ಒಳಿತು.
ಹಾರಕ ಬೆಳೆಗಾರರ ಸಂಘವನ್ನು ಕಟ್ಟಿ ಬೆಳೆಸಿರುವ ಪ್ರಸ್ತುತ ಉಪನ್ಯಾಸಕರೂ ಆಗಿರುವ ಗೋಪಾಲನಹಳ್ಳಿಯ ರಘು ಕಳೆದ 20 ವರ್ಷಗಳಿಂದ ಸಿರಿಧಾನ್ಯಗಳ ಮಹತ್ವವನ್ನು ಸಾರುತ್ತಲೇ ಬಂದಿದ್ದಾರೆ. ಇವರು ಕೇವಲ ಉಪನ್ಯಾಸಕತ್ವಕ್ಕೆ ಸೀಮಿತವಾಗಿಲ್ಲ.

      ಪ್ರಾಯೋಗಿಕವಾಗಿ ತಮ್ಮ ಜಮೀನಿನಲ್ಲೇ ಸಿರಿಧಾನ್ಯ ಬೆಳೆದಿದ್ದಾರೆ. ಇತರರನ್ನೂ ಬೆಳೆಯಲು ಪ್ರೋತ್ಸಾಹಿಸಿದ್ದಾರೆ. ಸಂಘದ ಮೂಲಕ ನಾಡು ಸುತ್ತಿದ್ದಾರೆ. ಸಾಕಷ್ಟು ಕಡೆ ಸಿರಿಧಾನ್ಯಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಇವರು ಮತ್ತು ಇವರ ತಂಡದ ಆಸೆ ಎಂದರೆ ಸಿರಿಧಾನ್ಯಗಳು ಮೂಲೆಗುಂಪಾಗಬಾರದು. ಇದನ್ನು ಎಲ್ಲರೂ ಬೆಳೆಯುವಂತಾಗಬೇಕು ಎಂಬುದು.

      ಆರೋಗ್ಯ ಕೈಕೊಟ್ಟಾಗ ಎಲ್ಲರೂ ಸಿರಿಧಾನ್ಯಗಳತ್ತ ಮುಖ ಮಾಡುತ್ತಾರೆ. ಈ ಸಿರಿಧಾನ್ಯಗಳನ್ನು ಬೆಳೆಯುವ ರೈತರನ್ನು ಉತ್ತೇಜಿಸುವ ಕಾರ್ಯ ಆಗಬೇಕು. ಈ ಧಾನ್ಯಗಳಿಂದ ಸಾಕಷ್ಟು ಉತ್ಪನ್ನಗಳನ್ನು ತಯಾರು ಮಾಡಬಹುದು. ಬೇಕರಿ ಉತ್ಪನ್ನಗಳಂತೆ ವಿವಿಧ ರೀತಿಯ ಸಿಹಿ ಹಾಗೂ ಖಾರದ ತಿಂಡಿಗಳನ್ನು ತಯಾರು ಮಾಡಬಹುದು. ಆದರೆ ಪ್ರೋತ್ಸಾಹ ಸಿಗಬೇಕಷ್ಟೆ. ಸಿರಿಧಾನ್ಯಗಳನ್ನು ಬೆಳೆಯುವ ಪ್ರಕ್ರಿಯೆ ಗುಡಿ ಕೈಗಾರಿಕೆಯ ಲಕ್ಷಣವಾಗಿದ್ದು, ರೈತರು ಇತ್ತ ಒಲವು ತೋರಬೇಕು. ಸುಲಭವಾಗಿ ಬೆಳೆ ತೆಗೆಯುವ ಕಡೆಗೆ ಮನಸ್ಸು ಹರಿಯಬಿಡದೆ ಕಷ್ಟಪಟ್ಟಾದರೂ ಈ ಬೆಳೆ ತೆಗೆಯುವೆ ಎಂಬ ಮನಸ್ಥಿತಿ ರೈತರಲ್ಲಿ ಮೂಡಬೇಕು. ಮಾರುಕಟ್ಟೆಯ ವ್ಯವಸ್ಥೆಯೂ ಉತ್ತಮವಾಗಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಜಿಕೆವಿಕೆ, ಕೆವಿಕೆ ಮೊದಲಾದ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಸಿರಿಧಾನ್ಯಗಳನ್ನು ಬೆಳೆಯುವವರಿಗೆ ಪ್ರೋತ್ಸಾಹ ನೀಡುತ್ತಿದೆ. ನಾವೂ ಸಹ ಬಹಳಷ್ಟು ವರ್ಷಗಳಿಂದ ಅವರ ಜೊತೆಯಲ್ಲಿ ಅರಿವಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. ಇನ್ನು ಮುಂದೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಂತಹ ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಇರುವ ಅಡೆತಡೆಗಳನ್ನು ನಿವಾರಿಸುವತ್ತ ಮುಂದಾದರೆ ಮುಂದಿನ ದಿನಗಳಲ್ಲಿ ಬೆಳೆಗಾರರು ಹೆಚ್ಚಾಗಬಹುದು.

-ಜಿ.ಎಸ್.ರಘು, ಸಂಸ್ಥಾಪಕರು, ಹಾರಕ ಬೆಳೆಗಾರರ ಸಂಘ ಹಾಗೂ ಸಿರಿಧಾನ್ಯ ಪ್ರಚಾರಕರು.

ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap