ಕೊಲಂಬೊ:
ಶ್ರೀಲಂಕಾ ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದರೂ, ಮೂರು ಜಿಲ್ಲೆಗಳಲ್ಲಿ ಕೋಮು ಹಿಂಚಾಚಾರ ಭುಗಿಲೆದ್ದ ಕಾರಣ ಗಲಭೆಗೆ ಒಬ್ಬರು ಬಲಿಯಾಗಿದ್ದಾರೆ.
ಮುಸ್ಲಿಂ ಯುವಕನೊಬ್ಬನ ಫೇಸ್ಬುಕ್ ಪೋಸ್ಟ್ನಿಂದ ಹೊತ್ತಿಕೊಂಡ ಕೋಮು ಗಲಭೆಯ ಕಿಡಿ ಇದೀಗ ರಾಷ್ಟ್ರವ್ಯಾಪಿ ಹರಡಿದೆ. ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಕ್ರಿಶ್ಚಿಯನ್ನರು ಕಳೆದ ಕೆಲವು ದಿನಗಳಿಂದ ಮುಸ್ಲಿಮರಿಗೆ ಸೇರಿದ ಅಂಗಡಿ,ಮನೆ ಹಾಗೂ ಮಸೀದಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಪುಟ್ಟಲಂ ಜಿಲ್ಲೆಯಲ್ಲಿ 45ರ ಹರೆಯದ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆಯ ಗಂಭೀರತೆ ಅರಿತ ಸರ್ಕಾರ ಇದೀಗ ರಾಷ್ಟ್ರವ್ಯಾಪಿ ಕರ್ಫ್ಯೂ ಹೇರಿಕೆ ಮಾಡಿ ಆದೇಶಿಸಿದೆ. ಸೋಮವಾರ ರಾತ್ರಿ 9 ಗಂಟೆಗೆ ಕರ್ಫ್ಯೂ ಹೇರಲಾಗಿದ್ದು ಇಂದು ಸಂಜೆ 4 ಗಂಟೆವರೆಗೂ ಇರಲಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ