ಚಿತ್ರದುರ್ಗ:
ಶಂಕರಪ್ಪರವರ ಸಮಾಜಮುಖಿ ಸೇವೆಗೆ ಗೌರವ ನೊಂದ ಮಹಿಳೆಯರಿಗೆ ಆಸರೆ ಬರದ ನಾಡು ಎನ್ನುವ ಖ್ಯಾತಿಗೆ ಹೆಸರಾಗಿರುವ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಸಮಾಜಮುಖಿ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಿರುವ ಇಲ್ಲಿನ ಬಸವೇಶ್ವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ವಿ.ಶಂಕರಪ್ಪ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಟಿತ ಪ್ರಶಸ್ತಿ ಲಭಿಸಿದೆ
ವಿಕಲಚೇತನರ ಕ್ಷೇತ್ರದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಕೆ.ವಿ.ಶಂಕರಪ್ಪ ಅವರು ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವೆ ಜಯಮಾಲಾ ಅವರು ಪ್ರತಿಷ್ಟಿತ ಪ್ರಶಸ್ತಿಯನ್ನು ಶಂಕರಪ್ಪ ಅವರಿಗೆ ಪ್ರಧಾನ ಮಾಡಿದರು.
ಕೆ.ವಿ.ಶಂಕರಪ್ಪ ಅವರ ಸಾಧನೆ :ಚಿತ್ರದುರ್ಗದ ಗಾರೆಹಟ್ಟಿಯಲ್ಲಿ ಶಂಕರಪ್ಪ ಅವರು 1998-99ನೇ ಸಾಲಿನಲ್ಲಿ ಚಿಕ್ಕದಾಗಿ ಬಸವೇಶ್ವರ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದ್ದರು. ಅದೀಗ ಬೃಹದಾಕಾರವಾಗಿ ಬೆಳೆದು ಬಡವರು, ನಿರ್ಗತಿಕರು ಮತ್ತು ನೊಂದವರಿಗೆ ಆಶ್ರಯ ನೀಡುವ ಕೇಂದವಾಗಿದೆ.
ಆರಂಭದಲ್ಲಿ ಕೇವಲ ಐದು ಶಿಶುಪಾಲನಾ ಕೇಂದ್ರಗಳನ್ನು ತೆರೆದು ಮೂರರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಪೋಷಣೆ ಮಾಡುವ ಕಾಯಕ ಆರಂಭಿಸಿದರು. ಕೊಳಚೆ ಪ್ರದೇಶ ಮತ್ತು ತೀರಾ ಬಡವರು, ಕೂಲಿ ಕಾರ್ಮಿಕರು ವಾಸಿಸುವ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೆಳವರ್ಗದ ಮಕ್ಕಳ ಪೊಷಣೆಗೆ ಮುಂದಾದರು
ಬಳಕ 2003ರಲ್ಲಿ ಮಹಿಳಾ ಸಹಾಯವಾಣಿ ಕೇಂದ್ರವನ್ನು ಜಿಲ್ಲಾ ಮಟ್ಟದಲ್ಲಿ ತೆರೆದು ನೊಂದ ಮಹಿಳೆಯರ ಪಾಲಿಗೆ ದಾರಿದೀಪವಾದರು. ಗಂಡ, ಅತ್ತೆ ಮಾವಂದಿರುಗಳಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರು, ಅತ್ಯಾಚಾರಕ್ಕೆ ಒಳಗಾದವರು, ಇನ್ನಿತರೆ ದೌರ್ಜನ್ಯ, ಶೋಷಣೆಗೆ ಒಳಗಾದ ಮಹಿಳೆಯರಿಗೆ ರಕ್ಷಣೆ ಕೊಟ್ಟು ಅವರಿಗೆ ನ್ಯಾಯ ದೊರೆಕಿಸಿಕೊಡುವ ಉದ್ದೇಶವಿಟ್ಟುಕೊಂಡು ಈ ಮಹಿಳಾ ಸಹಾಯವಾಣಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ.
ಈ ಕೇಂದ್ರವನ್ನು ಹೊಸದುರ್ಗ, ಹೊಳಲ್ಕೆರೆ, ಬ್ಯಾಡಗಿ ತಾಲ್ಲೂಕಿನಲ್ಲಿಯೂ ವಿಸ್ತರಿಸಿ ಅಲ್ಲಿಯೂ 4 ಮಹಿಳಾ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದುವರೆಗೂ ನೂರಾರು ಪ್ರಕರಣಗಳಿಗೆ ಇಲ್ಲಿ ನ್ಯಾಯ ದೊರೆಕಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಸಮಾಜದಲ್ಲಿ ಶೋಷಣೆ, ನಿಂದನೆಗಳಿಗೆ ಒಳಗಾದ ಬಹಳಷ್ಟು ಮಹಿಳೆಯರಿಗೆ ಈ ಮೂಲಕ ರಕ್ಷಣೆಯನ್ನೂ ನೀಡಿ ಅವರಿಗೆ ನ್ಯಾಯ ಕಲ್ಪಿಸುವ ಕೆಲಸವನ್ನು ಶಂಕರಪ್ಪ ಅವರು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಸಂಗತಿ.
ಇದರ ಜೊತೆಗೆ2015ರಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರವನ್ನೂ ತೆರೆದು ಮಕ್ಕಳ ರಕ್ಷಣೆಗೂ ಮುಂದಾಗಿದ್ದಾರೆ. ಬಾಲ್ಯ ವಿವಾಹ, ಬಿಕ್ಷಾಟನೆ, ಶಾಲೆ ಬಿಟ್ಟಮಕ್ಕಳು, ಬಾಲ ಕಾರ್ಮಿಕರು ಹೀಗೆ ಅನೇಕ ತೊಂದರೆಯಲ್ಲಿರುವ ಮಕ್ಕಳಿಗೆ ರಕ್ಷಣೆ ನೀಡುವುದರ ಜೊತೆಗೆ ಅವರನ್ನೂ ಸಮಾಜದ ಮುಖ್ಯವಾನಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತಮ್ಮ ಸಂಸ್ಥೆಯ ಮೂಲಕ ಮಾಡಕೊಂಡು ಬಂದಿದ್ದಾರೆ.
ಇದರ ಜೊತೆ ಜೊತೆಗೆ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವೂ ಸಹ ಇಲ್ಲಿ ನಡೆಯುತ್ತಿದ್ದು, ತಮ್ಮ ಕುಟುಂಬದವರಿಂದ ತೊಂದರೆಗಳಿಗೆ ಒಳಗಾದ ಇಂತಹ ಹಿರಿಯ ನಾಗರೀಕರ ನೆರವಿಗೆ ನಿಲ್ಲುವ ಕೆಲಸವನ್ನೂ ಶಂಕರಪ್ಪ ಅವರು ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರದವತಿಯಿಂದ ಸಿಗಬಹುದಾದ ಸೌಲಬ್ಯಗಳನ್ನು ಈ ಹಿರಿಯ ಜೀವಗಳಿಗೆ ಕಲ್ಪಸಿಕೊಡಲಾಗುತ್ತಿದೆ.
ವಿಕಲಚೇತನರ ಬದುಕಿಗೆ ಆಸರೆಯಾಗಿ ನಿಂತಿರುವ ಶಂಕರಪ್ಪ ಅವರು, ಇವರನ್ನು ಸಮಾಜದಲ್ಲಿ ಎಲ್ಲರಂತೆ ಬದುಕುವ ಭರವಸೆಯನ್ನು ಹುಟ್ಟಿಸುವ ಪ್ರಯತ್ನವನ್ನು ಸಂಸ್ಥೆಯ ಮೂಲಕ ನೀಡುವ ಪ್ರಯತ್ನ ಸಾಗಿದೆ. ಈ ಕ್ಷೇತ್ರದಲ್ಲಿ ಅವರು ಅಪಾರ ಸೇವೆ ಮಾಡಿದ್ದಾರೆ.
ಮತ್ತೆ ಒಂದು ಅನಾಥ ಮಕ್ಕಳ ಕುಟೀರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ 50 ಮಕ್ಕಳಿಗೆ ಪ್ರತಿ ವರ್ಷ ಊಚಿತವಾಗಿ ಉಟ, ವಸತಿ ಹಾಗೂ ಶಿಕ್ಷಣವನ್ನು ನೀಡುವ ಕೆಲಸದಲ್ಲಿ ಈ ಸಂಸ್ಥೆ ತೊಡಗಿದೆ.

ಜೊತೆಗೆ ಸ್ತ್ರೀ ಸ್ಪಂದನ ಉಜ್ವಲ ಪುನರ್ವಸತಿ ಕೇಂದ್ರವನ್ನೂ ತೆರೆದು ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯ ನೀಡುವ ಕೆಲಸ ನಡೆಸಿಕೊಂಡು ಬರಲಾಗುತ್ತಿದೆ.
ಬಸವೇಶ್ವರ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಈ ಕೇಂದ್ರಗಳ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿ ಆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹೊಟೇಲ್, ಗ್ಯಾರೇಜ್ಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರನ್ನು ಗುರ್ತಿಸಿ ಅವರಿಗೆ ಮರಳಿ ಶಾಲೆಗೆ ಸೇರಿಸುವ ಕೆಲಸವನ್ನೂ ಶಂಕರಪ್ಪ ಅವರು ಮಾಡಿಕೊಂಡು ಬಂದಿದ್ದಾರೆ.
ಅವರ ಇಂತಹ ಸಮಾಜಮುಖಿ ಸೇವಾ ಕಾರ್ಯಗಳನ್ನು ಗುರ್ತಿಸಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಮತ್ತು ಮಠಗಳಲ್ಲಿ ಗೌರವಿಸಲಾಗಿದೆ. ಜಿಲ್ಲಾಡಳಿತವೂ ಶಂಕರಪ್ಪ ಅವರ ಸೇವಾ ಕಾರ್ಯವನ್ನು ಗುರ್ತಿಸಿ ಗೌರವಿಸಿದೆ.








