ಬೋಳಿಯಾರ್‌ ಪ್ರಕರಣ : ಬೇರೆಯವರ ಮಧ್ಯ ಪ್ರವೇಶ ಅವಶ್ಯಕತೆ ಇಲ್ಲ : ಯು ಟಿ ಖಾಧರ್‌

ಮಂಗಳೂರು:

    ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಗ್ರಾಮ ಸೌಹಾರ್ದಕ್ಕೆ ಮಾದರಿಯಾಗಿದ್ದು, ಅಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ಪ್ರಕರಣವನ್ನು ಬಗೆಹರಿಸಲಿದ್ದಾರೆ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಶುಕ್ರವಾರ ಹೇಳಿದ್ದಾರೆ.

   ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ಕೆಲವೇ ಕೆಲವು ಯುವಕರಿಂದ ಕೆಟ್ಟ ಹೆಸರು ಬಂದಿದೆ. ಅದಕ್ಕಾಗಿ ಹೊರಗಿನವರು ಅಲ್ಲಿ ರಾಜಕೀಯ ಮಾಡಿ ಅಲ್ಲಿನ ವಾತಾವರಣವನ್ನು ಮತ್ತಷ್ಟು ಕೆಡಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದು ಹೇಳಿದರು.

   ಬೋಳಿಯಾರು ವಿಚಾರದಲ್ಲಿ ರಾಜಕೀಯ ಮಾಡಿದರೆ ಯಾರಿಗೂ ಒಂದು ಮತವೂ ಹೆಚ್ಚಾಗದು. ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷದವರು ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಆಗಿಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು.

   ಭಾರತ್ ಮಾತಾಕಿ ಜೈ ಎಂದು ಯಾರೂ ಹೇಳಬಹುದು. ಅದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ, ಅಲ್ಲಿ ಏನೋ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದನ್ನು ಪೊಲೀಸರು ಸಿಸಿಟಿವಿ ಕ್ಯಾಮರಾದ ಮೂಲಕ ತನಿಖೆ ನಡೆಸುತ್ತಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೂವರು ಬೈಕಿನಲ್ಲಿ ಬಂದು ಪ್ರಚೋದನಕಾರಿ ಘೋಷಣೆ ಕೂಗುವ ಉದ್ದೇಶವೇನು? ಇದು ತಪ್ಪು, ಅದಕ್ಕೆ ಪ್ರತಿಯಾಗಿ ಅವರನ್ನು ಹಿಂಬಾಲಿಸಿಕೊಂಡು ಹಲ್ಲೆ ಮಾಡಿರುವ ಕೃತ್ಯವೂ ತಪ್ಪೇ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕಾನೂನು ಪ್ರಕಾರ ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.

   ಅಲ್ಲಿ ಪ್ರಚೋದನಕಾರಿ ಮಾತುಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಬಗ್ಗೆ ಹೊರಗಿನವರು ಬಂದು ಮಾತನಾಡುವ ಅಗತ್ಯ ಇಲ್ಲ. ಪೊಲೀಸ್ ಇಲಾಖೆಯಿಂದ ನ್ಯಾಯ ದೊರಕಿಲ್ಲ ಎಂದು ನನ್ನ ಬಳಿ ಬಂದರೆ ಈ ಬಗ್ಗೆ ಖಂಡಿತಾ ನಾನು ಪರಿಶೀಲಿಸುತ್ತೇನೆ. ನನಗೆ ಅಂತಹ ಯಾವುದೇ ದೂರು ಬಂದಿಲ್ಲ. ವಾಟ್ಸ್ ಆ್ಯಪ್ ವಾಯ್ಸ್ ಮೆಸೇಜ್ ಮೂಲಕ ಯಾರೋ ಹೇಳಿಕೊಂಡು ತಿರುಗಾಡುತ್ತಿದ್ದರೆ ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ. ನಿರಪರಾಧಿಗಳಿಗೆ ಪೊಲೀಸರು ತೊಂದರೆ ನೀಡಬಾರದು. ಆದರೆ,. ಪ್ರಕರಣದಲ್ಲಿ ಭಾಗಿಯಾಗಿದ್ದವರು ತಲೆಮರೆಸಿಕೊಂಡಾಗ ವಿಚಾರಣೆಗಾಗಿ ಪೊಲೀಸರು ಕರೆದರೆ ಅದನ್ನು ದೊಡ್ಡ ವಿಚಾರ ಮಾಡಬೇಕಾಗಿಲ್ಲ ಎಂದು ಹೇಳಿದರು.

   ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಧ್ವನಿ ಸಂದೇಶ ಹಾಕಿ ಜನರನ್ನು ದಾರಿತಪ್ಪಿಸುವವರ ಮೇಲೂ ಪೊಲೀಸರು ಕ್ರಮ ವಹಿಸಬೇಕು. ಇಂತಹ ಘಟನೆಗಳ ಸಂದರ್ಭ ರಾಜಕಾರಣಿಗಳು ಅಲ್ಲಿ ಭೇಟಿ ನೀಡಿದಾಗ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಭೇಟಿ ನೀಡಿಲ್ಲ. ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿಸಿದವರನ್ನು ನಾವು ನೋಡಬೇಕೇ ಎಂದು ಪ್ರಶ್ನಿಸಿದರು.

   ಅಲ್ಲಿನ ಜನರನ್ನು ಅವರಷ್ಟಕ್ಕೆ ಬಿಡಿ. ಪೊಲೀಸರು ಹಾಗೂ ಜನರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಇಂತಹ ವಿಚಾರಗಳಿಗೆ ತಲೆಹಾಕಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ, ತಪ್ಪು ಮಾಡಿದವರಿಗೆ ಬೆಂಬಲ ನೀಡುವುದಿಲ್ಲ. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡುವುದು ಎಲ್ಲಾ ಮಾಡಿದರೆ, ಮತ್ತೆ ಗೊಂದಲ ಆಗುತ್ತದೆ. ನಾನೂ ಸೇರಿ ರಾಜಕೀಯದವರು ಅಲ್ಲಿಗೆ ಹೋಗಲೇಬಾರದು ಎಂದು ತಾಕೀತು ಮಾಡಿದರು.

    ಸ್ಪೀಕರ್ ಸ್ಥಾನದ ಬದಲಾಗಿ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಹಣೆ ಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ನಾನು ಹಿಂದೆ ಎಣಿಸಿದ್ದೆ, ನಮ್ಮ ಶ್ರಮ ನಮ್ಮನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು. ಆದರೆ, ಈಗ ನನಗೆ ಅಶೀರ್ವಾದ ಕೂಡ ಹೆಚ್ಚಾಗಿ ಬೇಕು ಎಂಬುದು ಗೊತ್ತಾಗಿದೆ. ಶಾಸಕ, ಮಂತ್ರಿ, ಸ್ಪೀಕರ್ ಎಲ್ಲದರಲ್ಲೂ ನಾನು ಖುಷಿಯಾಗಿದ್ದೇನೆ. ನನಗೆ ಸ್ಥಾನ ಮುಖ್ಯವಲ್ಲ, ನಾವು ಕೆಲಸ ಮಾಡೋದು‌ ಮುಖ್ಯ. ನಾನು ಮಾಜಿಯಾದ್ರೂ ಬಹಳ ಸಂತೋಷವಾಗಿ ಕೆಲಸ ಮಾಡ್ತೇನೆ. ನಾನು ಎಲ್ಲರ ಆಶೀರ್ವಾದದಿಂದ ಸ್ಪೀಕರ್ ಆಗಿ ಖುಷಿಯಾಗಿದ್ದೇನೆ. ಮೇಲೆ ಹೋದರೂ ಕೆಳಗೆ ಇಳಿದರೂ ನಾನು ಖುಷಿಯಲ್ಲಿ ಇದ್ದೇನೆ. ಅಧಿಕಾರ ಶಾಶ್ವತ ಅಲ್ಲ ಎಂಬುದು ನನಗೆ ಪ್ರತೀ ನಿತ್ಯ ಗೊತ್ತಿದೆ ಎಂದರು. 

    ಕ್ಷೇತ್ರದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಬಗ್ಗೆ ಚುನಾವಣೆ ವೇಳೆ ಭರವಸೆ ನೀಡಿದ್ದೆ. ಇದರ ಮೊದಲ ಹಂತದ ಕೆಲಸ ಈಗ ಪೂರ್ಣಗೊಂಡಿದೆ. ಇಡೀ ಉಳ್ಳಾಲ ನಗರಕ್ಕೆ 70 ಲಕ್ಷ ಲೀಟರ್ ನೀರಿನ ಸಿಂಗಲ್ ಟ್ಯಾಂಕ್ ಆಗಿದೆ. ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರೂಪಾಯಿಯ ಕೆಲಸ ಆಗಿದೆ. ಇನ್ನು ಮನೆ ಮನೆಗಳಿಗೆ ನೀರು ಪೂರೈಕೆ ಕೆಲಸ ಆಗಬೇಕಿದೆ. ಇದಕ್ಕಾಗಿ 386 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಚಾಲನೆಗೆ ಸಿಎಂ ಸಿದ್ದರಾಮಯ್ಯ ಬರುತ್ತಾರೆ. ಶೀಘ್ರದಲ್ಲೇ ಸಿಎಂ ಇದರ ಉದ್ಘಾಟನೆ ಮಾಡಲಿದ್ದಾರೆ ಎಂದರು.

    ರಸ್ತೆ, ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನದ ಕೆಲಸ ಅಗಲಿದೆ. ಕಡಲ್ಕೊರೆತ ಸಂಬಂಧ ಎನ್ಐಟಿಕೆ ಅಧ್ಯಯನದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಅದರ ಮೇಲೆ ಸರ್ಕಾರದ ಜೊತೆ ಮಾತನಾಡಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

     ಬಾಂಬೆಯಿಂದ ಕೊಚ್ಚಿ ಹೋಗುವ ಕ್ರೂಸ್​​ಗೆ ಮಂಗಳೂರಿನಲ್ಲಿ ನಿಲುಗಡೆಗೆ ವ್ಯವಸ್ಥೆ ಬೇಕಾಗಿದೆ. ಸೋಮೇಶ್ವರದಲ್ಲಿ ಟೂರಿಸಂ ಬಂದರು ನಿರ್ಮಾಣದ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಎಲ್ಲಾ ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ಬಂದ್ ಮಾಡಿಸಿದ್ದೇನೆ.

    ತುಂಬಾ ಒತ್ತಡ ಇದ್ದರೂ ನಾನು ಎಲ್ಲ ಅಕ್ರಮಗಳನ್ನು ಬಂದ್ ಮಾಡಿಸಿದ್ದೆ. ನಾನು ಸಚಿವ ಆಗಿದ್ದಾಗ ಎಲ್ಲವೂ ಸಂಪೂರ್ಣ ಬಂದ್ ಆಗಿತ್ತು. ಆದರೆ, ಹೊಸ ಸರ್ಕಾರ ಬಂದು ಮತ್ತೊಬ್ಬರು ಸಚಿವರಾದರು. ಆಗ ಯಾರು ಅದನ್ನ ನಿಲ್ಲಿಸೋ ಕೆಲಸ ಮಾಡಿಲ್ಲ. ಈಗ ನನ್ನ ಕ್ಷೇತ್ರದಲ್ಲಿ ಅದನ್ನ ನಿಲ್ಲಿಸಿದ್ದೇನೆ, ಯಾವುದೇ ಅಕ್ರಮ ಇಲ್ಲ. ಉಳಿದಂತೆ‌ ಬೇರೆ ಕಡೆ ಇದ್ದರೆ ಅದಕ್ಕೆ ನಾನು ಏನು ಮಾಡುವುದು? ನಾನು ಅಧಿಕಾರ ಇದ್ದಾಗ ಸಂಪೂರ್ಣ ಕೆಲಸ ಮಾಡಿದ್ದೇನೆ ಎಂದು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap