ನವದೆಹಲಿ:
ಮುಂದಿನ ವರ್ಷದ ಜನವರಿಯಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖೀಯಾಗಲಿವೆ. ಹೀಗಾಗಿ ಟೂರ್ನಿಯ ಮೊದಲ ಪಂದ್ಯವೇ ಹೈವೋಲ್ಟೇಜ್‌ನಿಂದ ಕೂಡಿರಲಿದೆ. ಪಂದ್ಯಾವಳಿಗಳು ಜ. 13ರಿಂದ 19ರ ವರೆಗೆ ನೋಯ್ಡಾದಲ್ಲಿ ನಡೆಯಲಿದೆ. ಒಟ್ಟು 24 ತಂಡಗಳು ಪಾಲ್ಗೊಳ್ಳಲಿದೆ. ಜ. 17ಕ್ಕೆ ಕ್ವಾರ್ಟರ್ ಫೈನಲ್, ಜ. 18ಕ್ಕೆ ಸೆಮಿಫೈನಲ್ ಮತ್ತು ಜ.19ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ʼಖೋ ಖೋ ಕ್ರಿಡೆಯ ಮೂಲ ಬೇರು ಭಾರತದಲ್ಲಿದೆ. ಈ ವಿಶ್ವಕಪ್ ಟೂರ್ನಿಯು ಖೋ ಖೋದ ಸಾಂಸ್ಕೃತಿಕ ಪರಂಪರೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಎತ್ತಿ ತೋರಿಸಲಿದೆ. ಕೆಸರಿನಲ್ಲಿ ಆರಂಭವಾಗಿ ಮ್ಯಾಟ್‌ಗೆ ಹೊರಳಿರುವ ಈ ಕ್ರೀಡೆಯು ಇಂದು 54 ದೇಶಗಳಲ್ಲಿ ಜನಪ್ರಿಯವಾಗಿದೆ’ ಎಂದು ಖೋ ಖೋ ವಿಶ್ವಕಪ್ ಸಿಇಒ ವಿಕ್ರಮ್ ದೇವ್ ಹೇಳಿದ್ದಾರೆ.
2032ರ ವೇಳೆಗೆ ಖೋ ಖೋ ಕ್ರೀಡೆಯನ್ನು ಪ್ರತಿಷ್ಠಿತ ಒಲಿಂಪಿಕ್ಸ್‌ಗೆ ಸೇರಿಸುವುದು ನಮ್ಮ ಗುರಿ. ಆ ಕನಸಿನತ್ತ ಸಾಗುವ ಮೊದಲ ಹೆಜ್ಜೆಯೇ ಈ ವಿಶ್ವಕಪ್ ಟೂರ್ನಿಯಾಗಿದೆ ಎಂದು ಕೆಕೆಎಫ್‌ಐ ಅಧ್ಯಕ್ಷ ಸುಧಾಂಶು ಮಿತ್ತಲ್ ಹೇಳಿದ್ದಾರೆ
ಏಷ್ಯಾ ಖಂಡದಿಂದ ಆತಿಥೇಯ ಭಾರತ ಸೇರಿದಂತೆ ಬಾಂಗ್ಲಾದೇಶ, ಭೂತಾನ್, ಇಂಡೊನೇಷ್ಯಾ, ಇರಾನ್, ಮಲೇಷ್ಯಾ, ನೇಪಾಳ, ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಲಿವೆ. ಇದಲ್ಲದೆ, ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್ಸ್, ಪೋಲೆಂಡ್, ಕೆನಡಾ, ಅಮೆರಿಕ, ಬ್ರೆಜಿಲ್, ಪೆರು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳೂ ಸ್ಪರ್ಧೆಯಲ್ಲಿ ಇರಲಿವೆ.
