ಕೆ ಎಸ್‌ ಆರ್‌ ಟಿ ಸಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ….!

ಬೆಂಗಳೂರು

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ  ನೌಕರರ ಬಹುದಿನಗಳ ಕನಸು ನನಸಾಗಿದೆ. ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ ಕಾರ್ಡ್​​)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು. ಸರ್ಕಾರಿ ಒಡೆತನದ ಸಾರಿಗೆ ಸಂಸ್ಥೆಗಳ ಪೈಕಿ ಮೊದಲನೆಯ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 

    ಕರ್ನಾಟಕ ಸರ್ಕಾರ ರಾಜ್ಯದ ಖಾಸಗಿ ಮತ್ತು ಆಯುರ್ವೇದಿಕ್ ಸೇರಿದಂತೆ 250ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಯಂತೆ ಕೆಎಸ್​ಆರ್​ಟಿಸಿ ನೌಕರರು, ಕಾರ್ಮಿಕರು ಈ ಆಸ್ಪತ್ರೆಗಳಲ್ಲಿ ನಗದು ಇಲ್ಲದೆ ಚಿಕಿತ್ಸೆ ಪಡೆಯಬಹುದಾಗಿದೆ. ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಸಾಮಾನ್ಯ ಆಸ್ಪತ್ರೆಯಲ್ಲೂ ಕೆಎಸ್​ಆರ್​ಟಿಸಿ ನೌಕರರು, ಸಿಬ್ಬಂದಿಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ. 

    ಆರೋಗ್ಯ ಕಾರ್ಡ್​ ಮೂಲಕ ಸಿಬ್ಬಂದಿಯ ಕುಟುಂಬದ ಸದಸ್ಯರು (ಪತಿ, ಪತ್ನಿ, ಮಕ್ಕಳು, ತಂದೆ, ತಾಯಿ) ಈ ಸೌಲಭ್ಯವನ್ನು ಪಡೆಯಬಹುದು. ಒಟ್ಟಾರೆಯಾಗಿ, ಕುಟುಂಬದ ಆರು ಸದಸ್ಯರಿಗೆ ನಗದು ರಹಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ನೌಕರರು ನಿವೃತ್ತಿಯಾಗುವವರೆಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

    ಕೆಎಸ್ಆರ್ಟಿಸಿ ಆರೋಗ್ಯ ಕಾರ್ಡ್​ಗಾಗಿ ನೌಕರರು ಪ್ರತಿ ತಿಂಗಳು 650 ರೂಪಾಯಿ ಪಾವತಿ ಮಾಡಬೇಕು. ಕೆಎಸ್ಆರ್​​ಟಿಸಿ ನಿಗಮ 600 ರೂಪಾಯಿ ಪಾವತಿ ಮಾಡುತ್ತದೆ. ಇದರಿಂದ ವರ್ಷಕ್ಕೆ ಒಟ್ಟು 46 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ ಎಂದು ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಹೇಳಿದರು.