ಕಿಯೋನಿಕ್ಸ್ ಪ್ರಕರಣ : ಉಡಾಫೆ ಬಿಟ್ಟು, ಬಾಕಿ ಬಿಲ್‌ ಚುಕ್ತಾ ಮಾಡಿ: HDK

ಬೆಂಗಳೂರು:

   ಉಡಾಫೆ ಮಾತುಗಳನ್ನಾಡುವುದು ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್ ಗಳ ಬಾಕಿ ಬಿಲ್ ಗಳನ್ನು ಚುಕ್ತಾ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ತರಾಟೆಗೆ ತೆಗೆದುಕೊಂಡರು.

   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಮಧ್ಯಸ್ಥಿಕೆ ವಹಿಸುವಂತೆ ಕಿಯೋನಿಕ್ಸ್ ವೆಂಡರ್ಸ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್‌ಗಳ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಸರ್ಕಾರದ ಆಂತರ್ಯ ಏನೆಂಬುದು ಎಲ್ಲರೂ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್‌ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು. ಅವರೇನೂ ಭಿಕ್ಷುಕರಲ್ಲ ಎಂದು ಹೇಳಿದರು.

   ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆಂದು ತಿಳಿಸಿದರು.

   ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಲ್ಲರ ಮೇಲೆ ಬೇಕಾಬಿಟ್ಟಿ ಮಾತನಾಡುವ ಖರ್ಗೆ ಅವರು, ಸಬೂಬು ಹೇಳುವುದನ್ನು ಬಿಡಬೇಕು. ಈವರೆಗೆ ಗುತ್ತಿಗೆದಾರರ ಎಲ್‌ಓಸಿಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಚಿವರು ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯ ಮಾಡಿದರು.

  ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಹಣ ನಿಮಗೆ ಕೊಡಲೇಬೇಕು. ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ? ನೀವು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಸರ್ಕಾರ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ಮಾಡಿ. ನಿಮಗೆ ಸಿಕ್ಕಿರುವ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಮಾಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕುತ್ತೀರಿ. ಅಂತಹ ಮನಸ್ಥಿತಿಯಿಂದ ಹೊರಬನ್ನಿ. ಕೆಲಸವನ್ನೇ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡೆದ ಎಷ್ಟೋ ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಇದ್ದಾರೆ. ಸರಿಯಾದ ಕೆಲಸ ಮಾಡಿದ್ದರೆ ನೀವು ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.

   ನಾನು 2 ಬಾರಿ ಮುಖ್ಯಮಂತ್ರಿ ಆಗಿದ್ದೆ. ಯಾವತ್ತೂ ಯಾರಿಗೂ ತೊಂದರೆ ಕೊಡುವ ಕೆಲಸ ಮಾಡಿಲ್ಲ. ಗುತ್ತಿಗೆದಾರರಿಗೆ ಒಂದು ಮನವಿ ಮಾಡುತ್ತೇನೆ. ಮೊದಲು ಒಗ್ಗಟ್ಟಾಗಿ, ನಿಮ್ಮ ನಿಮ್ಮಲ್ಲಿಯೇ ಗುಂಪುಗಳನ್ನು ಮಾಡಿಕೊಂಡರೆ ಅದನ್ನು ಸರಕಾರ ದುರುಪಯೋಗ ಮಾಡಿಕೊಳ್ಳುತ್ತದೆ. ನಿಮ್ಮಲ್ಲಿ ಒಡಕು ಬರಬೇಕು ಎಂದು ಸರ್ಕಾರ ಬಯಸುತ್ತದೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಒಂದು ವರ್ಷ ಯಾರು ಕೆಲಸ ಮಾಡಬೇಡಿ. ಅಕ್ಕಪಕ್ಕದ ರಾಜ್ಯಗಳವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಲಿ. ಬರಲಿ, ಯಾರು ಬಂದು ಕೆಲಸ ಮಾಡುತ್ತಾರೋ ನೋಡೋಣ. ಹೇಗೂ ಇವರು ಕೆಲಸವನ್ನು ಕೊಡುತ್ತಿಲ್ಲ. ನೀವು ಕೇಳುತ್ತಿರುವುದು ಹಿಂದಿನ ದುಡ್ಡು ಕೇಳುತ್ತಿದ್ದೀರಿ ಎಂದು ಕಿವಿಮಾತು ಹೇಳಿದರು.

   ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ. ಸರಕಾರ ನಿಮ್ಮ ಹಣ ನಿಮಗೆ ಕೊಡಲೇಬೇಕು. ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ? ನೀವು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಸರಕಾರ. ಸರಕಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ಮಾಡಿ ಎಂದರು.

   ಈ ನಡುವೆ ಜಂಟಿ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಅವರು, ಮಾರಾಟಗಾರರ ಬಿಲ್ ತೆರವು ವಿಳಂಬಕ್ಕೆ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಎನ್.ಅಶ್ವಂತ್ ನಾರಾಯಣ್ ನೇರ ಕಾರಣ ಎಂದು ಆರೋಪಿಸಿದರು.

  ಭ್ರಷ್ಟಾಚಾರದೆಡೆಗಿನ ನಮ್ಮ ಸರ್ಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರಿಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು ‘ಕಿರುಕುಳ’ ಎಂದು ಹೆಸರು ಕೊಡುವುದು ಎಷ್ಟು ಸರಿ? ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ ಎಂದು ಕಿಡಿಕಾರಿದರು.

   ಕಿಯೋನಿಕ್ಸ್ ಸಂಸ್ಥೆಯಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ಟೆಸ್ಟ್ ಆಡಿಟ್ ತಪಾಸಣೆ ವರದಿಯಲ್ಲೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಕಿಯೊನಿಕ್ಸ್ ಸಂಸ್ಥೆಗೆ ಸಂಬಂಧಿಸಿದ ಸರಬರಾಜುದಾರರು ಹಾಗೂ ಪಾಲುದಾರರು ತಮಗೆ ಪಾವತಿಯಾಗಬೇಕಾದ ಹಣಕ್ಕೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಅವರ ಮನವಿಗಳನ್ನು ಆದ್ಯತೆಯ ಮೇಲೆ ಮತ್ತು ಲೆಕ್ಕಪರಿಶೋಧನೆಯ ಅವಲೋಕನಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link