ಬಡವರ ಹೆಸರಲ್ಲಿ ಗುತ್ತಿಗೆದಾರರಿಂದ ಮರಳು ಲೂಟಿ

 ಕೊಡಿಗೇನಹಳ್ಳಿ : 

     ಮರಳು ನೈಸರ್ಗಿಕ ಸಂಪತ್ತು. ನದಿಗಳು ಸಾರ್ವಜನಿಕ ಆಸ್ತಿಗಳಾಗಿದ್ದು ಪ್ರತಿಯೊಬ್ಬ ನಾಗರಿಕ ಮುಂದಿನ ಪೀಳಿಗೆಗೆ ರಕ್ಷಿಸಬೇಕಾದ ಜಲ ಸಂರಕ್ಷಣೆಯಲ್ಲಿ ಮರಳಿನ ಪಾತ್ರ ಮುಖ್ಯ. ಇಂತಹ ಮರಳನ್ನು ಕೊಡಿಗೇನಹಳ್ಳಿ ಬಳಿ ಜಯಮಂಗಲಿ ನದಿ ಒಡಲಿನಲ್ಲಿರುವ ಮರಳು ಬಡವರ ಮನೆಗಳಿಗೆ ಎಂಬ ನೆಪದಲ್ಲಿ ಅಕ್ರಮವಾಗಿ ಗುತ್ತಿಗೆದಾರರ ಪಾಲಾಗುತ್ತಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ. ಕೊಡಿಗೇನಹಳ್ಳಿ ಬಳಿಯ ಜಯಮಂಗಲಿ ನದಿ ತಟದಲ್ಲಿನ ಹೆಸರು ಹೇಳಲು ಇಚ್ಛಿಸದ ರೈತ ಮಹಿಳೆ, ನಾವುಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಅಕ್ರಮವಾಗಿ ನದಿಯಲ್ಲಿನ ಮರಳನ್ನು ಲೂಟಿ ಮಾಡುತ್ತಿದ್ದಾರೆ. ಒಬ್ಬಂಟಿಯಾಗಿ ತಡೆಯಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.

      ನದಿಯಲ್ಲಿನ ಮರಳನ್ನು ಅಕ್ರಮವಾಗಿ ಸಾಗಿಸಿ, ನದಿಯ ಒಡಲನ್ನು ಬರಿದು ಮಾಡುತ್ತಿರುವುದರಿಮದ ಇದೇ ಜಯಮಂಗಲಿ ನದಿಯನ್ನು ನಂಬಿರುವ ರೈತರು ಅನೇಕ ಕಷ್ಟ-ನಷ್ಟಗಳಿಗೆ ಒಳಗಾಗುತ್ತಿದ್ದೇವೆ. ಈ ಭಾಗದಲ್ಲಿ 1000 ದಿಂದ 1200 ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗದೆ, ಅಂತರ್ಜಲ ಪಾತಾಳ ಕಂಡು ಕುಸಿದಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ವ್ಯವಸಾಯ ಉದ್ದೇಶಕ್ಕೆ ತಂದ ಟ್ರ್ಯಾಕ್ಟರ್‍ಗಳಲ್ಲಿ ಮರಳು ಸಾಗಿಸುತ್ತಿರುವುದರಿಂದ ಟ್ರ್ಯಾಕ್ಟರ್‍ಗಳನ್ನು ವಾಣಿಜ್ಯ ಬಳಕೆಗೆಂದು ಪರಿವರ್ತಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಮತ್ತು ಜಯಮಂಗಲಿ ತಟದಲ್ಲಿನ ರೈತರ ಆಗ್ರಹವಾಗಿದೆ.

     ಅಕ್ರಮವಾಗಿ ಮರಳು ಗುತ್ತಿಗೆದಾರರ ಪಾಲಾಗುತ್ತಿದ್ದು ಇದನ್ನು ತಡೆಯಬೇಕು. ಬಡವರ ಮನೆಗಳ ನಿರ್ಮಾಣಕ್ಕೆ 10-15 ಬಾಣಲಿ ಮರಳು ಬೇಕಾದರೆ ತುಂಬಿಸದೆ ಜಗಳ ಮಾಡುವ ಆಸಾಮಿಯೊಬ್ಬ, ಇಂದು ಗುತ್ತಿಗೆ ಕಾಮಗಾರಿಗೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ಸರ್ಕಾರಿ ಕಾಮಗಾರಿಗೆ ಎಂ-ಸ್ಯಾಂಡ್ ಬಳಸದೆ ಇರುವ ಗುತ್ತಿಗೆದಾರರಿಗೆ ಸಹಕರಿಸುತ್ತಿರುವುದು ಯಾವ ನ್ಯಾಯ? ನಮ್ಮ ಭಾಗದ ರೈತರ ಜಮೀನು ಕ್ಷಾರದಿಂದ ಕೂಡಿದ್ದು, ರೈತರ ಜಮೀನುಗಳಿಗೆ ಅಗತ್ಯವಾಗಿ ಮರಳು ಬೇಕಾಗಿದೆ. ಗುತ್ತಿಗೆದಾರರ ಪಾಲಾಗುತ್ತಿರುವ ಮರಳನ್ನು ಉಳಿಸಬೇಕಾಗಿದೆ.

-ಲಕ್ಕರೆಡ್ಡಿ, ರೈತ.

      ಬಡವರ ಮನೆ ನಿರ್ಮಾಣಕ್ಕೆ ಮರಳು ಬಳಸಲು ಯಾವುದೇ ಅಡ್ಡಿ ಇರುವುದಿಲ್ಲ. ಮರಳನ್ನು ಎತ್ತಿನಗಾಡಿಯಲ್ಲಿ ಇಲ್ಲವೆ ವಿಶೇಷ ಸಮಯದಲ್ಲಿ ಲಘು ವಾಹನಗಳನ್ನು ಬಳಸಿ ಸಾಗಿಸಬಹುದು. ಸರ್ಕಾರದ ಮರಳು ನೀತಿಯನ್ನು ಪಾಲಿಸಬೇಕು. ಜಿಲಾ ಮಟ್ಟದ ಮರಳು ಸಮಿತಿ, ತಾಲ್ಲೂಕು ಮಟ್ಟದ ಮರಳು ಸಮಿತಿ, ಅದೇಶಗಳನ್ನು ಪಾಲಿಸುತ್ತಾ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆಗಳ ಜೊತೆ ಸೇರಿ ಮರಳು ಸಮಿತಿಯನ್ನು ರಚಿಸಿ ಅಕ್ರಮ ಮರಳು ಸಾಗಣಿಕೆಯನ್ನು ತಡೆಯಲಾಗುವುದು.

-ಸತ್ಯನಾರಾಯಣ, ಪಿಡಿಓ, ಗ್ರಾಮ ಪಂಚಾಯತಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap