ಆಟೋದಲ್ಲಿ ಹೆಚ್ಚು ಪ್ರಯಾಣಿಕರು : ಕಟ್ಟುನಿಟ್ಟಿನ ಕ್ರಮದ ಸೂಚನೆ

 ಹೊಳವನಹಳ್ಳಿ : 

     ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಘಾತಗಳೂ ಹೆಚ್ಚಾಗುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ ಎಂದು ಕೊರಟಗೆರೆ ಎಎಸೈ ಯೋಗೇಶ್ ತಿಳಿಸಿದರು.

      ಅವರು ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಕೊರಟಗೆರೆ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದಡಿ ಆಟೋಚಾಲಕರನ್ನು ಉದ್ದೇಶಿಸಿ ಮಾತನಾಡಿದರು.

      ಗ್ರಾಮದ ಆಟೋಚಾಲಕರು ತಮ್ಮ ವಾಹನಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದು, ಅಂತಹ ವಾಹನಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಪದೇ ಪದೇ ಸಂಚಾರಿ ನಿಯಮವನ್ನು ಯಾರು ಉಲ್ಲಂಘಿಸುತ್ತಾರೊ, ಅಂತಹವರ ವಾಹನವನ್ನು ವಶಕ್ಕೆ ಪಡೆದು, ಅವರ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

      ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‍ನ್ನು ಧರಿಸಬೇಕು. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನವಾದರೂ ಪರವಾನಗಿ ಇಲ್ಲದೆ ವಾಹನ ಚಾಲನೆ ಕಾನೂನು ಬಾಹಿರವಾಗಿರುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಡಬೇಡಿ. ಚಾಲಕರು ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡಿದರೆ, ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಭಾರತದಾದ್ಯಂತ ಪ್ರತಿ ವರ್ಷ ರಸ್ತೆ ಅಪಘಾತದಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಸುಮಾರು 660ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಿಂದ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಅದರಿಂದ ಆಟೋಚಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಚಾಲನೆ ಮಾಡಬೇಕು ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ಹೊಳವನಹಳ್ಳಿ ಪೋಲೀಸ್ ಕಾನ್‍ಸ್ಟೇಬಲ್ ಅಕ್ರಂಪಾಷ, ಆಟೋಚಾಲಕರಾದ ಕೃಷ್ಣ, ಹೇಮಂತ್, ಸೋಮಣ್ಣ, ದಾಸಣ್ಣ, ಬಾಬು, ರಿಜ್ವಾನ್, ಮಂಜನಾಥ್, ಜರಿಹಿರ್, ನಾರಾಯಣಪ್ಪ, ನಾಸೀರ್, ಕುಂಬಿ, ರಾಮಣ್ಣ, ಅಬ್ಜಾಲ್, ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link