ಕೊರೋನಾಗೆ ಬಲಿ : ಅಂತ್ಯಸಂಸ್ಕಾರಕ್ಕೆ ಕುಟುಂಬರಸ್ಥರಿಲ್ಲದ ದಾರುಣ ಸ್ಥಿತಿ

ಕೊರಟಗೆರೆ :

      ತಾಲ್ಲೂಕಿನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ದಿನಂಪ್ರತಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಲ್ಲದೆ, ಭಾನುವಾರ ಒಂದೆ ದಿನ 4 ಸಾವು ಆಗುವ ಮೂಲಕ ಕೊರೊನಾ ರಣಕೇಕೆ ಹಾಕಿದೆ.

       ತಾಲ್ಲೂಕಿನಲ್ಲಿ ಕೊರೊನಾ ಎರಡನೆ ಅಲೆಗೆ ಜನ ತತ್ತರಗೊಳ್ಳುತ್ತಿದ್ದು, ಒಂದೇ ಕುಟುಂಬದ ಗಂಡ-ಹೆಂಡತಿ ಮೃತಪಟ್ಟಿದ್ದಾರೆ. ಮತ್ತೊಂದು ಮಹಿಳಾ ಮೃತ ದೇಹಕ್ಕೆ ನೆಂಟನಿಷ್ಟರು ಅಂತ್ಯಕ್ರಿಯೆ ನಡೆಸಿದ್ದಾರೆ. ಮಗದೊಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗುವ ಮೂಲಕ ಭಾನುವಾರ ಒಂದೇ ದಿನ ನಾಲ್ಕು ಸಾವಿನ ಮೂಲಕ ಕೊರೊನಾ ರಾಕ್ಷಸಿ ರೂಪ ತಾಳಿದೆ.

      ತಾಲ್ಲೂಕಿನ ಕೋಳಾಲ ಹೋಬಳಿಯ ಯಲಚಿಗೆರೆ ಬಳಿಯ ಯಂಗ್ರಾಮನಹಳ್ಳಿ ಗ್ರಾಮದ ಅರಸಪ್ಪ ಮತ್ತು ಮುತ್ತಕ್ಕ ಎಂಬ ಗಂಡ ಹೆಂಡತಿ ಕೊನೆಯುಸಿರೆಳೆದರೆ, ಕೊರಟಗೆರೆ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ವೆಂಕಟೇಶರವರ ತಾಯಿ ಕುಟುಂಬ ಸಮೇತ ಎಂಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ, ತಾಯಿ ನಂಜಮ್ಮ ಸಾವಿಗೀಡಾಗಿ ಅಂತ್ಯಕ್ರಿಯೆಗೆ ಕುಟುಂಬ ವರ್ಗ ಭಾಗವಹಿಸದ ಪರಿಸ್ಥಿತಿ ನಿರ್ಮಾಣವಾದರೆ, ತೋವಿನಕೆರೆ ಹೋಬಳಿಯ ಬೆಂಡೋಣೆ ಗ್ರಾಮದ ಹನುಮಂತರಾಯಪ್ಪ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

      ತಾಲ್ಲೂಕಿನಲ್ಲಿ ಒಂದೆ ದಿನ ಕೊರೊನಾ 2ನೇ ಅಲೆಗೆ 4 ಸಾವು ಸಂಭವಿಸಿದ್ದು, ಯಲಚಿಗೆರೆ ಬಳಿ ಇರುವ ಯಂಗ್ರಾಮನಹಳ್ಳಿಯ ಗಂಡ-ಹೆಂಡತಿಯ ಸಾವಿನಿಂದ ಇಡೀ ಕುಟುಂಬ ಕೊರೊನಾ ಸುಳಿಗೆ ಸಿಲುಕಿದ್ದು, ದು:ಖದ ಮಡುವಿನಲ್ಲಿ ಮುಳುಗಿದೆ. ಕೊರಟಗೆರೆ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ವೆಂಕಟೇಶ್ ಸ್ವತಃ ತಾವು, ತಮ್ಮ ಹೆಂಡತಿ, ಇಬ್ಬರು ಮಕ್ಕಳು ಸೇರಿದಂತೆ ತಂದೆ-ತಾಯಿ ಸಹಿತ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ವಿಷಮ ಸನ್ನಿವೇಶದಲ್ಲಿ ವೆಂಕಟೇಶ್ ತಾಯಿ ಸಾವಿಗೀಡಾಗಿದ್ದು, ಅನಾಥ ರೀತಿಯಲ್ಲಿ ಗಂಡ, ಮಗ, ಸೊಸೆಯರಿಲ್ಲದೆ, ಅನ್ಯರಿಂದ ಅಂತ್ಯಕ್ರಿಯೆ ನಡೆಯಿತು. ಈ ದೃಶ್ಯವು ನೋಡುಗರ ಕಣ್ಣು ತೇವವಾಗಿಸಿತ್ತು. ಜೊತೆಗೆ ಊರಿನ ಜನ ಕೊರೊನಾ ರೋಗಿಗಳನ್ನು ಮುಟ್ಟದ ಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆದಿರುವುದು ಹೃದಯವೇದನೆ ಉಂಟು ಮಾಡಿತ್ತು. ಮತ್ತೊಂದು ಬೆಂಡೋಣೆಯ ಹನುಮಂತರಾಯಪ್ಪನ ಸ್ಥಿತಿಯೂ ಭಿನ್ನವಾಗಿರಲಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೆ, ಇವರ ಅಂತ್ಯ ಸಂಸ್ಕಾರದಲ್ಲೂ ಸಾರ್ವಜನಿಕರು ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದ ದೃಶ್ಯ ಹೃದಯ ವಿದ್ರಾವಕವಾಗಿತ್ತು.

      ತಾಲ್ಲೂಕಿನಲ್ಲಿ ಕೊರೊನಾ 2 ನೇ ಅಲೆ ಯಮ ರೂಪಿಯಾಗುತ್ತಿದ್ದು, ದಿನಂಪ್ರತಿ ಅರ್ಧಶತಕವಿರುತ್ತಿದ್ದ ಕೊರೊನಾ ಪ್ರಕರಣಗಳು ಕಳೆದ 3-4 ದಿನಗಳಿಂದ ಶತಕದ ಅಂಚಿಗೆ ಬಂದಿವೆ. ಪ್ರತಿ ಗ್ರಾಮಗಳಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಕೊರೊನಾ ಬಂದರೆ, ಪೂರಾ ಕುಟುಂಬಕ್ಕೆ ಒಂದೆ ದಿನ ಆವರಿಸುವಂತಹ ಭೀಕರತೆ ಕಾಣುತ್ತಿದೆ. ಯಾಮಾರಿದರೆ ಮುಂದಿದೆ ಮಾರಿಹಬ್ಬ ಎಂಬಂತೆ ರಣರೂಪಿಯಾಗುತ್ತಿರುವುದು, ಭವಿಷ್ಯದಲ್ಲಿ ಊಹೆಗೂ ನಿಲುಕದ ಮಟ್ಟಕ್ಕೆ ತಲುಪುವಂತಿರುವುದು ಆಘಾತಕಾರಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap