ತುಮಕೂರು ಗ್ರಾಮಾಂತರ :
ಕೊರಟಗೆರೆ ಕ್ಷೇತ್ರದ ಜಿಪಂ ಮತ್ತು ತಾಪಂಗೆ ನಿಗದಿ ಆಗಿರುವ ಮೀಸಲಾತಿಯೇ ಅವೈಜ್ಞಾನಿಕವಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಹೈಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಈಗಾಗಲೇ ತಿರ್ಮಾನ ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ತುಮಕೂರು ಜಿಲ್ಲೆಯ 64 ಜಿಪಂ ಕ್ಷೇತ್ರದಲ್ಲಿ ಕಾನೂನಿನ ಪ್ರಕಾರ 32 ಸ್ಥಾನ ಮಹಿಳೆಯರಿಗೆ 10 ತಾಲ್ಲೂಕಿಗೆ ಅನ್ವಯ ಆಗುವಂತೆ ಮೀಸಲು ನೀಡಬೇಕಿದೆ. ಆದರೆ ಕೊರಟಗೆರೆ ಕ್ಷೇತ್ರದ ವ್ಯಾಪಿಯ 8 ಜಿಪಂ ಸ್ಥಾನದಲ್ಲಿ 6 ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲು ನೀಡಲಾಗಿದೆ. ತಾಪಂ ಸ್ಥಾನದಲ್ಲಿ ಅರ್ಧಕ್ಕೂ ಹೆಚ್ಚು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಟ್ಟು ಪುರುಷರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಕೊರಟಗೆರೆ ಕ್ಷೇತ್ರದ ಮತದಾನ ಪ್ರಭು ಸೂಚಿಸುವ ಅಭ್ಯರ್ಥಿಗೆ ಜಿಪಂ ಮತ್ತು ತಾಪಂ ಟಿಕೆಟ್ ನೀಡುತ್ತೇನೆ. ಕಳೆದ ಬಾರಿ ಪ್ರತಿ ಗ್ರಾಪಂಗೆ 100 ಮನೆ ಮಂಜೂರು ಮಾಡಿಸಿದ್ದೇನೆ. ಈಗಲೂ ಸಹ ಪ್ರತಿ ಗ್ರಾಪಂಗೆ 100 ಮನೆಗಳನ್ನು ಮಂಜೂರು ಮಾಡಿಸುತ್ತೇನೆ. ಅಜ್ಜಗೊಂಡನಹಳ್ಳಿ ತ್ಯಾಜ್ಯ ಘಟಕದ ವಿರುದ್ದವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾನೇ ಖುದ್ದಾಗಿ ಪ್ರತಿಭಟನೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಕೈಗಾರಿಕೆ ಸ್ಥಾಪನೆಗೆ ಜಮೀನು ನೀಡಿರುವ ಸ್ಥಳೀಯ ಯುವಕರಿಗೆ ಕಾರ್ಖಾನೆ ಮಾಲೀಕರು ಉದ್ಯೋಗ ನೀಡಬೇಕಿದೆ. ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡಿದರೆ ಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ಪತ್ರ ಬರೆಯುತ್ತೇನೆ. ಸ್ಥಳೀಯ ಯುವಕರಿಗೆ ಏನಾದರೂ ಉದ್ಯೋಗ ನೀಡುವಲ್ಲಿ ಅನ್ಯಾಯವಾದರೆ ನೇರವಾಗಿ ನನ್ನನ್ನು ಭೇಟಿಯಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್ ಮಾತನಾಡಿ, ಕೋರಾ ಹೋಬಳಿ ಅಭಿವೃದ್ದಿಗೆ ನಮ್ಮ ಶಾಸಕರು ಬಹಳಷ್ಟು ಅನುದಾನ ನೀಡಿದ್ದಾರೆ. ಶಾಸಕ ಡಾ.ಜಿ.ಪರಮೇಶ್ವರ ಅವರ ಕೈ ಬಲಪಡಿಸಲು ಜಿಪಂ ಮತ್ತು ತಾಪಂಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗೆ ಒಟ್ಟಾಗಿ ಮತ ನೀಡಬೇಕಿದೆ. ಕೋರಾ ಹೋಬಳಿ ವ್ಯಾಪ್ತಿಯ ಎಲ್ಲಾ ರಸ್ತೆಯನ್ನು ಪೂರ್ಣಗೊಳಿಸಿ ಮತ್ತೆ ಚುನಾವಣೆಗೆ ಬರ್ತೀವಿ ಎಂದು ಆಶ್ವಾಸನೆ ನೀಡಿದರು.
ಕೋರಾ ಹೋಬಳಿ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಗ್ರಾಮದ 12 ಲಕ್ಷ ವೆಚ್ಚದ ಸಿಸಿ ರಸ್ತೆ, ಸಿಂಗ್ರಿಹಳ್ಳಿ ಗ್ರಾಮದಲ್ಲಿ 12 ಲಕ್ಷ ವೆಚ್ಚದ ವಾಲ್ಮೀಕಿ ಭವನ, ಕೋರಾ ಗ್ರಾಮದ ಡಾ.ಜಿ.ಪರಮೇಶ್ವರ ಬಡಾವಣೆಯಲ್ಲಿ 18 ಲಕ್ಷ ವೆಚ್ಚದ ಸಿಸಿ ರಸ್ತೆ ಸೇರಿ ಒಟ್ಟು 42 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿ ಇನ್ನಷ್ಟು ಅಭಿವೃದ್ದಿಗೆ ಆದ್ಯತೆ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೈಲಜಾ, ಕೋರಾ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷೆ ಮಧು, ಗ್ರಾಪಂ ಮಾಜಿ ಅಧ್ಯಕ್ಷ ನಜೀರ್, ಗ್ರಾಪಂ ಸದಸ್ಯರಾದ ಸಿದ್ದಲಿಂಗಸ್ವಾಮಿ, ಯೊಗೀಶ್, ಕಿರಣ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ