ಪ್ರಜಾಪ್ರಗತಿ ಫಲಶೃತಿ ; ರಸ್ತೆಗೆ ಅಡ್ಡಲಾಗಿದ್ದ ಫ್ಲೆಕ್ಸ್ ಗಳ ತೆರವು!

ಕುಣಿಗಲ್ :

      ಸುಧೀರ್ಘ ನಿದ್ರೆಯಿಂದ ಎಚ್ಚೆತ್ತ ಪುರಸಭೆಯು ಮಂಗಳವಾರ ಪಟ್ಟಣದ ರಸ್ತೆಗಳ ಮಧ್ಯೆ ಅಡ್ಡಲಾಗಿ ಕಟ್ಟಿರುವ ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್‍ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿತು.

     ಬೆಳೆಯುತ್ತಿರುವ ಪಟ್ಟಣಕ್ಕೆ ಶಾಪವಾದ ಅಡ್ಡಾದಿಡ್ಡಿ ರಸ್ತೆ, ಕಾಣೆಯಾದ ಪುಟ್‍ಪಾತ್‍ಗಳು, ರಸ್ತೆ ದಾಟಲು ಹೋದರೆ ಪ್ರಾಣಕ್ಕೆ ಸಂಚಕಾರ ಎಂಬ ತಲೆ ಬರಹದಡಿ ಪ್ರಜಾಪ್ರಗತಿ ಪತ್ರಿಕೆಯು ಅ.26 ರ ಸೋಮವಾರದ ಸಂಚಿಕೆಯಲ್ಲಿ ಪಟ್ಟಣದ ಸಂಚಾರ ವ್ಯವಸ್ಥೆಯ ಕಥೆ-ವ್ಯಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ವರದಿಯ ಪರಿಣಾಮದಿಂದಾಗಿ ನಿದ್ರಾ ವ್ಯವಸ್ಥೆಯಲ್ಲಿದ್ದ ಪುರಸಭೆಯವರು ಅಂತು-ಇಂತು ಎಚ್ಚೆತ್ತು ಸುಮಾರು ಒಂದು ತಿಂಗಳಿನಿಂದ ಸಾರ್ವಜನಿಕರ ಸಂಚಾರಕ್ಕೆ ಬಾರಿ ತೊಂದರೆಯಾಗಿದ್ದ ಬ್ಯಾನರ್‍ಗಳನ್ನು ತಮ್ಮ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್‍ನೊಂದಿಗೆ ಆಗಮಿಸಿ ತೆರವುಗೊಳಿಸಿದರು.

ಪ್ರತ್ಯೇಕ ಜಾಗ ಮೀಸಲಿಡಲಿ :

      ಪುರಸಭೆಯ ಕಾರ್ಮಿಕರು ಅಗತ್ಯ ಸಾಧನ-ಸಲಕರಣೆ ಹಿಡಿದು ಹರಸಾಹಸ ಪಡುತ್ತಲೆ ಬ್ಯಾನರ್ ತೆರವುಗೊಳಿಸಿದರು. ಇದನ್ನು ನೋಡಿದ ನಾಗರಿಕರು ಮುಂದಿನ ದಿನಗಳಲ್ಲಿ ಬೇಕಾಬಿಟ್ಟಿ ಬ್ಯಾನರ್ ಕಟ್ಟಲು ಅವಕಾಶ ಕೊಡಬಾರದು, ಪುರಸಭೆಯವರು ಇದಕ್ಕಾಗಿ ಕೆಲವೊಂದಿಷ್ಟು ಜಾಗ ಗುರುತಿಸಿ ಆ ಸ್ಥಳದಲ್ಲಿ ಬ್ಯಾನರ್ ಕಟ್ಟುವವರಿಗೆ ಅವಕಾಶಮಾಡಿ ಇಂತಿಷ್ಟು ದಿನಕ್ಕೆ ಇಂತಿಷ್ಟು ಶುಲ್ಕ ಎಂದು ನಿಗದಿಪಡಿಸಲಿ ಎಂದು ಪುರಸಭೆಗೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಪುರಸಭೆಯು ಈ ಬಗ್ಗೆ ಎಚ್ಚರ ವಹಿಸುವುದೊ ಇಲ್ಲವೊ ಕಾದು ನೋಡಬೇಕಿದೆ.

ಪತ್ರಿಕೆಯ ಕಳಕಳಿಗೆ ಶ್ಲಾಘನೆ :

      ನಗರದ ಹೃದಯ ಭಾಗದಿಂದ ಎಪಿಎಂಸಿ ಯಾರ್ಡ್ ಕಡೆಗೆ ವಿದ್ಯುತ್ ಕಂಬಗಳಿಗೆ ಹಾಗೂ ಕ್ರಾಸಿಂಗ್ ಕಡೆ ಕಟ್ಡಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸಿ ಟ್ಯಾಕ್ಟರ್‍ಗೆ ತುಂಬಿ ಸಾಗಿಸುತ್ತಿದ್ದ ದೃಶ್ಯವು ನಾಗರಿಕರಲ್ಲಿ ಬಾರಿ ಕುತುಹಲ ಮೂಡಿಸಿತು. ಜನರು ಪತ್ರಿಕೆಯ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಚರ್ಚಿಸುತ್ತಿದ್ದ ದೃಶ್ಯವು ಪಟ್ಟಣದ ಅಂಗಡಿ ಮುಂಗಟ್ಟುಗಳ ಬಳಿ ಸಾಮಾನ್ಯವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link