ಬೆಂಗಳೂರು
ಮಾರ್ಚ್ 21ರಿಂದಲೇ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಜಂಟಿ ಸಮಿತಿ ಹೇಳಿದ್ದು . ಈ ಹಿನ್ನಲೆಯಲ್ಲಿ ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು ರಾಜೀ ಸಂಧಾನ ಸಭೆಯನ್ನು ಆಯೋಜನೆ ಮಾಡಿದೆ.
ಕಾರ್ಮಿಕ ಇಲಾಖೆ ಆಯುಕ್ತರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ., ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಮತ್ತು ಕೆ.ಕೆ.ಆರ್.ಟಿ.ಸಿ ಇವರು ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ದಿನಾಂಕ 24/3/2023ರಂದು ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ನೌಕರರ ಜಂಟಿ ಕ್ರಿಯಾ ಸಮಿತಿ ಎರಡೂ ಬಣಗಳು ಪ್ರತ್ಯೇಕವಾಗಿ ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಮುಷ್ಕರಕ್ಕೆ ಕರೆ ನೀಡಿರುವ ನೌಕರರ ಜೊತೆ ಸಾರಿಗೆ ಸಚಿವರು ನಡೆಸಿದ ಸಭೆ ಈಗಾಗಲೇ ವಿಫಲವಾಗಿದೆ. ಶೇಕಡ 20ರಷ್ಟು ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತಾಗಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.
ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೇ. 15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಸಾರಿಗೆ ನೌಕರರ ಸಂಘದವರು ಇದನ್ನು ಒಪ್ಪುತ್ತಿಲ್ಲ. 2020ರಿಂದ ವೇತನ ಪರಿಷ್ಕರಣೆ ಆಗಿಯೇ ಇಲ್ಲ. ಈಗ ಶೇ. 15ರಷ್ಟು ಹೆಚ್ಚಳ ಮಾಡಿದರೆ ಪ್ರಯೋಜನವಿಲ್ಲ. ವಿದ್ಯುತ್ ಕಂಪನಿ ನೌಕರರಿಗೆ ಶೇ. 20ರಷ್ಟು ಹೆಚ್ಚಳ ಮಾಡಿದ್ದಾರೆ. ನಮಗೇಕೆ ಕಡಿಮೆ ಹೆಚ್ಚಳ ಮಾಡುತ್ತಿರುವುದು? ಎಂದು ಪ್ರಶ್ನೆ ಮಾಡುತ್ತಿದ್ದಾರೆ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.