ರಾತ್ರಿ ಮಲಗಿದ ಬಳಿಕ ಕಾಲುಗಳಲ್ಲಿ, ವಿಶೇಷವಾಗಿ ಮೀನಖಂಡದಲ್ಲಿ ಸೆಳೆದಂತೆ ನೋವಾಗುತ್ತಿದ್ದು ಕಾಲು ಮಡಚಿದಾಗ ಹೆಚ್ಚುತ್ತದೆಯೇ ಹಾಗೂ ರಾತ್ರಿಯಿಡೀ ನೋವು ನೀಡುತ್ತಾ ಸುಖನಿದ್ದೆಗೆ ಭಂತ ತರುತ್ತಿದೆಯೇ? ಹಾಗಾದರೆ ಈ ಲೇಖನವನ್ನು ನೀವು ಖಂಡಿತವಾಗಿಯೂ ಓದಲೇಬೇಕು. ದಿನದ ಅವಧಿಯಲ್ಲಿ ಇಲ್ಲದ ಈ ಸೆಡೆತ ರಾತ್ರಿಯ ಸಮಯದಲ್ಲಿಯೇ ಆಗಮಿಸುವ ಕಾರಣ ಇದನ್ನು ನಿಶಾಚರಿ ಕಾಲಿನ ಸೆಡೆತ ಎಂದೂ ಕರೆಯಬಹುದು.
ಸಾಮಾನ್ಯವಾಗಿ ಈ ಸೆಡೆತ ಮೀನಖಂಡ ಮತ್ತು ಪಾದಗಳಲ್ಲಿ ಉಂತಾಗುತ್ತದೆ. ಅಪರೂಪಕ್ಕೆ ತೊಡೆಯ ಸ್ನಾಯುಗಳೂ ಬಾಧೆಗೊಳಗಾಗಬಹುದು. ಸೆಡೆತಕ್ಕೊಳಗಾದ ಸ್ನಾಯು ಕಾಲನ್ನು ತೀವ್ರವಾಗಿ ಬಿಗಿಯಾಗಿಸಿ ಮಡಚುವಂತೆ ಸೆಳೆಯುತ್ತದೆ ಹಾಗೂ ಇದೇ ಭಂಗಿಯಲ್ಲಿ ಮಲಗಲು ಸಾಧ್ಯವಾಗದೇ ನಿದ್ದೆ ಬಾರದೇ ಹೋಗುತ್ತದೆ. ಕೆಲವು ಸಮಯ ಈ ಸೆಡೆತ ಕೆಲವು ನಿಮಿಷಗಳಲ್ಲಿ ತಾನಾಗಿಯೇ ಕಡಿಮೆಯಾದರೆ ಕೆಲವೊಮ್ಮೆ ಇಡಿಯ ರಾತ್ರಿ ಇರುತ್ತದೆ. ಈ ತೊಂದರೆಗೆ ಸಾಮಾನ್ಯವಾಗಿರುವ ಕಾರಣಗಳೇನು ಎಂಬುದನ್ನು ನೋಡೋಣ…
ಋತುಮಾನದ ಬದಲಾವಣೆ:
ಅಲ್ಬರ್ಟಾವಿಶ್ವವಿದ್ಯಾಲದಲ್ಲಿರುವ ಕುಟುಂಬ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಸ್ಕಾಟ್ ಗ್ಯಾರಿಸನ್ ರವರ ಪ್ರಕಾರ ಈ ಸೆಡೆತಗಳು ಚಳಿಗಾಲ ಮತ್ತು ಬೇಸಿಗೆಯಲ್ಲಿ ಸಾಮಾನ್ಯವಾಗಿ ಆಗಮಿಸುತ್ತವೆ. ಸಾಮಾನ್ಯವಾಗಿ ಸ್ನಾಯುಗಳ ಸೆಡೆತವೆಂದು ನಾವು ಕರೆದರೂ ಈ ಸೆಡೆತ ನರಗಳಿಂದ ಆಗಿದ್ದೇ ಹೊರತು ಸ್ನಾಯುವಿನಿಂದಲ್ಲ!
ಬೇಸಿಗೆಯ ಸಮಯದಲ್ಲಿ ಸೂರ್ಯನ ರಶ್ಮಿ ಪ್ರಖರವಾಗಿದ್ದು ವಿಟಮಿನ್ ಡಿ ಉತ್ಪಾದನೆಯೂ ಹೆಚ್ಚುವ ಕಾರಣ ಇವು ಗರಿಷ್ಟ ಮಟ್ಟಕ್ಕೇರುತ್ತವೆ ಹಾಗೂ ಈ ಹೆಚ್ಚುವರಿ ಪ್ರಮಾಣವನ್ನು ಗರಿಷ್ಟವಾಗಿ ಬಳಸಿಕೊಳ್ಳಲು ಹಾಗೂ ನೈಸರ್ಗಿಕವಾಗಿ ರಿಪೇರಿ ಮಾಡಿಕೊಳ್ಳುವ ಕಾರ್ಯ ತೀವ್ರಗತಿಯಲ್ಲಿ ಮುಂದುವರೆಯುವುದೇ ಈ ಸೆಡೆತಗಳಿಗೆ ಕಾರಣ.
ನಿರ್ಜಲೀಕರಣ:
ರಾತ್ರಿ ಹೊತ್ತು ಸೆಡೆತ ಎದುರಾಗಲು ನಿರ್ಜಲೀಕರಣವೂ ಒಂದು ಕಾರಣವಾಗಬಹುದು. ಏಕೆಂದರೆ ಈ ಮೂಲಕ ರಕ್ತದಲ್ಲಿ ಎಲೆಕ್ಟ್ರೋಲೈಟುಗಳ ಸಮತೋಲನ ಏರುಪೇರಾಗುತ್ತದೆ ಹಾಗೂ ಇದು ಸೆಡೆತಕ್ಕೆ ಕಾರಣವಾಗಬಹುದು. ಹಾಗಾಗಿ ಮುಂದಿನ ಬಾರಿ ಸ್ನಾಯು ಸೆಡೆತ ಎದುರಾಗಿ ಎಚ್ಚರಾದರೆ ಕೊಂಚ ನೀರನ್ನು ಕುಡಿಯಿರಿ
ಪೋಷಕಾಂಶಗಳ ಕೊರತೆ:
ಹಲವು ಸಂದರ್ಭಗಳಲ್ಲಿ ಸೆಡೆತಕ್ಕೆ ಕೆಲವು ಅವಶ್ಯ ಪೋಷಕಾಂಶಗಳ ಕೊರತೆಯೇ ಕಾರಣವಾಗಿರುತ್ತದೆ. ನಿಮ್ಮ ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಇದೆಯೇ ಎಂಬುದನ್ನು ಸೂಕ್ತ ಪರೀಕ್ಷೆಗಳಿಂದ ಖಚಿತಪಡಿಸಿಕೊಳ್ಳಿ ಹಾಗೂ ಕೊರತೆ ಇದ್ದರೆ ವೈದ್ಯರ ಸಲಹೆಯ ಔಷಧಿಗಳು ಮತ್ತು ಆಹಾರವನ್ನು ಸೇವಿಸಿ.
ಅತಿಯಾದ ವ್ಯಾಯಾಮ:
ವ್ಯಾಯಾಮದ ಹುಚ್ಚು ಅತಿಯಾಗಿ ಕಾಲುಗಳ ಸ್ನಾಯುಗಳನ್ನು ಅತಿಯಾಗಿ ದಂಡಿಸುವುದರಿಂದಲೂ ಸೆಡೆತ ಎದುರಾಗಬಹುದು. ಎಂಬ ಆರೋಗ್ಯ ಸಂಬಂಧಿ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಚಲನೆಗೆ ಅಗತ್ಯವಾದ ಯಾವುದೇ ಸ್ನಾಯುಗಳನ್ನು ಅತಿಯಾಗಿ ಬಳಸಿಕೊಳ್ಳುವ ಮೂಲಕ ಸುಸ್ತು ಮತ್ತು ಸೆಡೆತ ಎದುರಾಗಬಹುದು.
ಇಡಿಯ ದಿನ ನಿಂತೇ ಇರುವುದು:
ಕೆಲವು ಉದ್ಯೋಗಗಳಲ್ಲಿ ದಿನವಿಡೀ ನಿಂತೇ ಇರುವುದು ಅನಿವಾರ್ಯವಾಗಿರುತ್ತದೆ. ಒಂದು ವೇಳೆ ಈ ಅನಿವಾರ್ಯತೆ ಯಾವುದೇ ಕಾರಣದಿಂದ ಎದುರಾಗಿದ್ದರೆ ಅಂದು ರಾತ್ರಿ ಕಾಲುಗಳಲ್ಲಿ ನೋವು ಎದುರಾಗಬಹುದು. ಈ ವಿದ್ಯಮಾನಕ್ಕೆ ದೊರಕುವ ವಿವರಣೆ ಏನೆಂದರೆ: ಸಾಮಾನ್ಯವಾಗಿ ನಿಂತೇ ಇದ್ದಾಗ ಗುರುತ್ವದ ಪ್ರಭಾವದಿಂದ ರಕ್ತ ಮತ್ತು ನೀರು ದೇಹದ ಕೆಳಭಾಗದಲ್ಲಿ ಹೆಚ್ಚು ಸಂಗ್ರಹವಾಗುತ್ತದೆ ಹಾಗೂ ಇದರಿಂದ ದೇಹದ ದ್ರವದ ಸಮತೋಲನ ಏರುಪೇರಾಗುತ್ತದೆ ಹಾಗೂ ಇದೇ ಸೆಡೆತಕ್ಕೆ ಕಾರಣವಾಗುತ್ತದೆ.
ವಯಸ್ಸಾಗುವಿಕೆ:
ಒಂದು ವೇಳೆ ನಿಮಗೆ ಈಗಾಗಲೇ ಐವತ್ತು ದಾಟಿದ್ದು ಆಗಾಗ ಸ್ನಾಯುಗಳ ಸೆಡೆತ ಕಂಡುಬರುತ್ತಿದ್ದರೆ ಇದಕ್ಕೆ ನಿಮ್ಮ ವಯಸ್ಸನ್ನು ಧಾರಾಳವಾಗಿ ದೂರಬಹುದು. ಸಾಮಾನ್ಯವಾಗಿ ಐವತ್ತು ದಾಟಿದ ಬಳಿಕ ದೇಹದ ಮೋಟಾರ್ ನ್ಯೂರಾನ್ ಗಳೆಂಬ ಸೂಕ್ಷ್ಮ ನರತಂತುಗಳು ನಷ್ಟಗೊಳ್ಳುತ್ತಾ ಸಾಗುತ್ತವೆ ಹಾಗೂ ಇವುಗಳ ಕೊರತೆಯಿಂದ ಸೆಡೆತ ಆಗಾಗ ಕಾಣಿಸಿಕೊಳ್ಳುತ್ತದೆ.
ಆರೋಗ್ಯದ ಸ್ಥಿತಿ ಕೆಲವು ಅನಾರೋಗ್ಯಗಳಾದ ಸಂಧಿವಾತ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಖಿನ್ನತೆ ಮೊದಲಾದವು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಬಹುದು. ಈ ಬಗ್ಗೆ ನಡೆಸಿದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಈ ಆರೋಗ್ಯ ಸ್ಥಿತಿಗಳು ನರಗಳನ್ನು ಶಿಥಿಲಗೊಳಿಸಿ ದೇಹದ ಭಾರವನ್ನು ಹೊರುವ ಪ್ರಮುಖ ಸ್ನಾಯುವಾದ ಮೀನಖಂಡ ಮತ್ತು ಪಾದಗಳ ಸ್ನಾಯುವಿನಲ್ಲಿ ಸೆಡೆತವನ್ನುಂಟುಮಾಡುತ್ತದೆ.
ಗರ್ಭಾವಸ್ಥೆ:
ಒಂದು ವೇಳೆ ನೀವು ಗರ್ಭವತಿಯಾಗಿದ್ದರೆ ನಿಮ್ಮ ದೇಹದಲ್ಲಿ ಈಗಾಗಲೇ ಉಂಟಾಗಿರುವ ಹಲವಾರು ಬದಲಾವಣೆಗಳು, ಏರಿದ ತೂಕ ರಕ್ತಪರಿಚಲನೆಯನ್ನೂ ಬದಲಿಸಿರುತ್ತವೆ. ಈ ಸಮಯದಲ್ಲಿ ರಕ್ತ ಪರಿಚಲನೆ ಗರ್ಭಾಶಯದತ್ತ ಹೆಚ್ಚು ಹರಿಯುವ ಕಾರಣ ಕಾಲುಗಳಿಗೆ ಅಗತ್ಯ ಪ್ರಮಾಣದ ರಕ್ತ ದೊರಕದೇ ಹೋಗುವ ಮೂಲಕ ಸ್ನಾಯುಗಳು ಸೊರಗಿ ಸೆಡೆತವುಂಟಾಗಬಹುದು. ಅಮೇರಿಕಾದ American Pregnancy Association ಎಂಬ ಸಂಸ್ಥೆಯ ಪ್ರಕಾರ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ತೂಕವೂ ಹೆಚ್ಚುತ್ತಾ ಹೋದಂತೆ ತಾಯಿಯ ದೇಹದ ನರಗಳ ಮೇಲಿನ ಒತ್ತಡವೂ ಹೆಚ್ಚುತ್ತಾ ಹೋಗುತ್ತದೆ ಹಾಗೂ ಸೆಡೆತಕ್ಕೆ ಕಾರಣವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ