ಶಾಸಕರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಎಸ್ ಆರ್ ಪಾಟೀಲ್

ಬ್ಯಾಡಗಿ:

      ಶಾಸಕರಾಗಿ ಆಯ್ಕೆಗೊಂಡು ವರ್ಷ ಕಳೆಯುತ್ತಾ ಬಂದರೂ ಪುರಸಭೆಯ ಅಭಿವೃದ್ಧಿಯ ವಿಷಯದಲ್ಲಿ ನಯಾಪೈಸೆಯಷ್ಟು ಅನುದಾನವನ್ನು ತರಲು ಸಾಧ್ಯವಾಗದ ನೀವು ಎಷ್ಟು ಅಸಮರ್ಥ ಶಾಸಕರೆಂದು ಜನತೆಗೆ ತೋರಿಸುವಂತಾಗಿದೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರನ್ನು ಲೇವಡಿ ಮಾಡಿದರು.

      ಅವರು ಸೋಮವಾರ ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಆದರೆ ಈ ಬಗ್ಗೆ ಬೇಜವಾಬ್ದಾರಿ ತೋರುತ್ತಾ ಅಸಮರ್ಪಕ ಹೇಳಿಕೆಗಳನ್ನು ನೀಡುವುದು ನಿಮ್ಮ ಹುದ್ಧೆಗೆ ಘನತೆ ತೋರುವಂತದ್ದಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಅವುಗಳ ಪರಿಹಾರಕ್ಕೆ ಮುಂದಾಗಬೇಕಾಗಿರುವುದು ಒಳಿತೆಂದರು.

     ರಾಜಕೀಯ ಸನ್ಯಾಸ: ಪುರಸಭೆಯ ವ್ಯಾಪ್ತಿಯ ಬಸವೇಶ್ವರ ನಗರ ನಿವೇಶನಕ್ಕೆ ಸಂಬಂಧ ಪಟ್ಟಂತೆ ತಾವು ಯಾವುದೇ ಹಸ್ತಕ್ಷೇಪವನ್ನು ಮಾಡಿಲ್ಲ. 1914 ರಲ್ಲಿ ಪುರಸಭೆಯನ್ನು ಅಭಿವೃದ್ಧಿ ಮಾಡಬೇಕೆನ್ನೂವ ಉದ್ದೇಶದಿಂದ ಅಲ್ಲಿನ ನಿವೇಶನಗಳನ್ನು ಲೀಜ್ ಆಧಾರದ ಮೇಲೆ 60 ಹಾಗೂ 80 ವರ್ಷಗಳ ಕಾಲಾವಧಿಗೆ ನೀಡಲಾಗಿತ್ತು, ಅದಕ್ಕೆ ಸಂಬಂಧಿಸಿದಂತೆ ಎಲ್ಲ ತೆರಿಗೆಗಳನ್ನು ಸಕಾಲಕ್ಕೆ ತುಂಬಲಾಗಿದೆ.

      ಕಳೆದ 30 ವರ್ಷದ ಹಿಂದೆ ಅಲ್ಲಿನ ನಿವಾಸಿಗಳಿಗೆ ಅವರಿರುವ ಜಾಗೆಯನ್ನು ಖರೀಧಿ ಮಾಡಿಕೊಡುವ ಉದ್ದೇಶದಿಂದ ನಿರ್ಧಿಷ್ಟ ದರವನ್ನು ನಿಗಧಿ ಪಡಿಸಿ ಪುರಸಭೆಯ ಮುಖಾಂತರ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಿ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿತ್ತು.

       ಆದರೆ ಕೆಲವರಿಂದ ಇದಕ್ಕೆ ಅಡ್ಡಿಯುಂಟಾಗಿ ಮರು ಪ್ರಸ್ತಾವನೆ ಸಲ್ಲಿಸಲು ಪುರಸಭೆ ಮುಂದಾಗಿದೆ. ಈ ಬಗ್ಗೆ ಸರಿಯಾಗಿ ಅರಿತುಕೊಳ್ಳದ ಮಾಜಿ ಪುರಸಭಾ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ ಅವರು ಬಸವೇಶ್ವರ ನಗರದ ಸಮಸ್ಯೆ ಕಗ್ಗಂಟಾಗಲು ತಾವೇ ಕಾರಣರೆಂದು ಹೇಳಿರುವುದು ಕ್ಷುಲ್ಲಕ ವಿಷಯವೆಂದರು. ಒಂದು ವೇಳೆ ಈ ಸಮಸ್ಯೆಗೆ ತಾವೇ ಅಡ್ಡಿಗಾಲು ಎಂದು ಸಾಭಿತು ಪಡಿಸಿದರೇ ತಾವು ರಾಜಕೀಯ ಸನ್ಯಾಸ ಪಡೆದುಕೊಳ್ಳುವುದಾಗಿ ಎಸ್.ಆರ್.ಪಾಟೀಲರು ಛತ್ರದ ಅವರಿಗೆ ಸವಾಲು ಹಾಕಿದರು.

ದೇವರಗುಡ್ಡ ಜಾಗೆ:

        ಚುನಾವಣೆ ಸಂದರ್ಭದಲ್ಲಿ ಪಟ್ಟಣದ ಹಳೆ ಮೆಣಸಿನಕಾಯಿ ಪೇಟೆಯಲ್ಲಿರುವ ದೇವರಗುಡ್ಡದ ಜಾಗೆಯಲ್ಲಿರುವ ನಿವಾಸಿಗಳಿಗೆ ನೀವು ವಾಸವಾಗಿರುವ ಜಾಗೆಯನ್ನು ಉಚಿತವಾಗಿ ತಮಗೆ ಮಂಜೂರ ಮಾಡಿಸಿಕೊಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದ್ದಾರೆ. ಆದರೇ ಇತ್ತೀಚೆಗೆ ನಾನು ಈ ಬಗ್ಗೆ ಹೇಳಿಯೇ ಇಲ್ಲ. ನಾನು ಹೇಳಿರುವುದು ಉಚಿತ ನೋಂದಣಿ ಮಾಡಿಕೊಡುವುದಾಗಿ ಅಂತಾ ಹೇಳಿದ್ಧೇನೆ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ಶಾಸಕರ ಇಬ್ಬಗೆಯ ನೀತಿಯನ್ನು ಎತ್ತಿ ತೋರಿಸುತ್ತಲಿದೆ ಎಂದು ಪಾಟೀಲ ವ್ಯಂಗ್ಯವಾಡಿದರು.

ಕಾನೂನು ಕ್ರಮ ಕೈಕೊಳ್ಳಲಿ:

         ಅಪ್ಪು ಕ್ರೀಡಾ ಸಂಸ್ಥೆಯ ನಿವೇಶನ ದುರ್ಬಳಕೆ ಕುರಿತಂತೆ ಸ್ಪಷ್ಟೀಕರಣ ನೀಡಲು ನಿರಾಕರಿಸಿದ ಎಸ್.ಆರ್.ಪಾಟೀಲರು ನಿವೇಶನ ದುರುಪಯೋಗವಾಗಿದ್ದರೇ ಪುರಸಭೆಯು ಕಾನೂನು ಕ್ರಮ ಕೈಗೊಳ್ಳಲಿ ಎಂದರು. ಈ ಸಂದರ್ಭದಲ್ಲಿ ತಾಲುಕಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಎಚ್.ಬುಡ್ಡನಗೌಡ್ರ, ಬೀರಪ್ಪ ಬಣಕಾರ, ಮಂಜುನಾಥ ಭೋವಿ, ರಮೇಶ ಮೋಟೆಬೆನ್ನೂರ, ಬಿ.ಪಿ.ಚೆನ್ನಗೌಡ್ರ, ಖಾದರಸಾಬ ದೊಡ್ಡಮನಿ, ಬಸವರಾಜ ಬಳ್ಳಾರಿ, ಹನುಮಂತಪ್ಪ ನಾಯಕರ, ಮಹೇಶ ಉಜನಿ, ನಜೀರಅಹ್ಮದ ಶೇಖ ಸೇರಿದಂತೆ ಇನ್ನಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link