ಹೊಸಪೇಟೆ :
ಪ್ರಧಾನಿ ಮೋದಿ ಹಾಗು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಾರೆ. ಮೋದಿ, ಅಮಿತ್ ಶಾ ಅಲ್ಲ, ಅವರಪ್ಪ, ಅವರ ತಾತ ಬಂದರೂ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂದು ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತ ಪಡಿಸಿದರು.
ಇಲ್ಲಿನ ಪಟೇಲನಗರದ ಶಾಸಕ ಆನಂದಸಿಂಗ್ ಅವರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ “ಕಾಂಗ್ರೆಸ್ ಅಭಿವೃದ್ದಿ ಅಭಿಯಾನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗು ಅಮಿತ್ ಶಾ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿದ್ದೇ ಹೇಳಿದ್ದು.
ಪರಿಸ್ಥಿತಿ ಈಗೇನಾಗಿದೆ ? ಎಲ್ಲಾ ಕಡೆ ಜನ ಇವರನ್ನು ತಿರಸ್ಕರಿಸುತ್ತಾ ಬರುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ದೇಶದ ಜನರೇ ಇವರನ್ನು ಮುಕ್ತ ಮಾಡಲು ಕಾತರದಿಂದ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಶ್ವದಲ್ಲಿ ವಚನಭ್ರಷ್ಟ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಚುನಾವಣೆಗೆ ಮುಂಚೆ ಕಪ್ಪುಹಣ ವಾಪಾಸ್, ನಿರುದ್ಯೋಗಿಗಳಿಗೆ ವರ್ಷಕ್ಕೆ 2ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಯಾವುದಾದರೂ ಒಂದೇ ಒಂದು ಭರವಸೆ ಈಡೇರಿಸಿದ್ದಾರಾ ? ಇವರ ಯೋಗ್ಯತೆಗೆ 15 ಪೈಸೆ ಕೂಡ ಹಾಕೋಕೆ ಆಗಿಲ್ಲ.
ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ. ಇವರನ್ನು ಕೇಳಿ ಯುವಕರು ಪಕೋಡ ಮಾರಬೇಕಾ ? ನಾಚಿಕೆಯಾಗಲ್ವಾ ಇವರಿಗೆ ? ವಿಶ್ವದಲ್ಲಿ ವಚನಭ್ರಷ್ಟತೆಗೆ, ಸುಳ್ಳಿಗೆ ನೋಬೆಲ್ ಪ್ರೈಜ್ ಏನಾದರೆ ಕೊಡುವುದಿದ್ದರೆ ಅದು ಮೋದಿಯವರಿಗೇ ಕೊಡಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಎಸ್‍ಸಿ, ಎಸ್‍ಟಿ, ಒಬಿಸಿ ಹಾಗು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡುತ್ತಾ ಬಂದಿದೆ. ಅದರಂತೆ ದೇವರಾಜು ಅರಸು ಸರ್ಕಾರ ಕೂಡ ರಾಜ್ಯದಲ್ಲಿ ಮೀಸಲಾತಿ ನೀಡಿದೆ. ಬಿಜೆಪಿ ಸರ್ಕಾರ ನಿಮಗೆ ತಾಕತ್ತಿದ್ದರೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿ ನೋಡೋಣ ? ಎಂದು ಸವಾಲೆಸೆದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗಿನಿಂದ ಬಿಜೆಪಿಯವರು ಈ ಸರ್ಕಾರ ಈಗ ಬಿದ್ದು ಹೋಗುತ್ತದೆ. ಆಗ ಬಿದ್ದು ಹೋಗುತ್ತದೆ ಅಂತಾ ತಿರುಕನ ಕನಸು ಕಾಣ್ತಾನೇ ಇದ್ದಾರೆ.
ಆದರೆ ಈ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಸರ್ಕಾರ ಸುಭದ್ರವಾಗಿದೆ. ಯಾರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ. ಬಿಜೆಪಿಯವರು ಜ್ಯೋತಿಷಿಗಳಂತೆ ಇಂಥ ಅನೇಕ ಡೆಡ್‍ಲೈನ್‍ಗಳನ್ನು ಕೊಡುತ್ತಾ ಬರುತ್ತಿದ್ದಾರೆ. ಅವೆಲ್ಲ ಠುಸ್ಸಾಗಿವೆ. ಇವರು ಪದೇ ಪದೇ ಇದೇ ಕೆಲಸಕ್ಕೆ ಇಳಿದರೆ ಜನರೇ ಇವರಿಗೆ ಆಪರೇಷನ್ ಮಾಡುವ ದಿನಗಳು ದೂರವಿಲ್ಲ ಎಂದರು.
ರೈತರು, ಕಾರ್ಮಿಕರು, ಯುವಕರು, ಮಹಿಳೆಯರಿಗೆ ಇವರ ಕೊಡುಗೆ ಏನು ಇಲ್ಲ. ಅಭಿವೃದ್ದಿಯಲ್ಲಿ ಇವರ ಸಾಧನೆ ದೊಡ್ಡ ಸೊನ್ನೆ. ಬರೀ ಸುಳ್ಳು ಹೇಳಿದ್ದೇ ಇವರ ಸಾಧನೆ. ಹೀಗಾಗಿ ಮೋದಿಯವರನ್ನು ಮನೆಗೆ ಕಳಿಸಲು ಕಾಯ್ತಾ ಇದ್ದಾರೆ. ಮುಂಬರುವ ದಿನಗಳಲ್ಲಿ ರಾಹುಲ್‍ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಂಪಿ ಉತ್ಸವಕ್ಕೆ ಸಮ್ಮಿಶ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬಿಜೆಪಿಯವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನೇನು ಕೇಳಿ ಮಾಡಬೇಕ್ರೀ ನಾವು ?. ನಮಗೆ ಗೊತ್ತಿದೆ. ಈಗಾಗಲೇ ನಾವು ಈ ಕುರಿತು ಚರ್ಚಿಸಿದ್ದೇವೆ. ಮುಂದಿನ ಫೆ.ತಿಂಗಳು 15, 16 ಮತ್ತು 17ಕ್ಕೆ ಹಂಪಿ ಉತ್ಸವ ಆಚರಿಸುತ್ತೇವೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಅನೇಕ ಜನಪರ ಯೋಜನೆಗಳನ್ನು ಜನ ನೆನೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ದಿಗೆ ಆದ್ಯತೆ ನೀಡುತ್ತಿದೆ. ಯಾವತ್ತು ಅಭಿವೃದ್ದಿ ಮುಂದಿಟ್ಟುಕೊಂಡು ಚುನಾವಣೆ ಎzರಿಸುತ್ತೆ. ಆದರೆ ಮೋದಿ ಸರ್ಕಾರ ಅಭಿವೃದ್ದಿಯಲ್ಲಿ ಶೂನ್ಯ ಸಾಧನೆ ಬಿಟ್ಟರೆ ಬರೀ ಮಾತು. ಹೀಗಾಗಿ ಅವರ ವೈಫಲ್ಯಗಳು ಜನರಿಗೆ ಮನವರಿಕೆಯಾಗಿವೆ. ಇವರು ಅಭಿವೃದ್ದಿ ಮರೆಮಾಚಿ ಬರೀ ಮಠ, ಮಂದಿರ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಮಾಡೋದು ಬಿಟ್ಟರೆ ಇವರಿಗೆ ಹೇಳಿಕೊಳ್ಳೋದಕ್ಕೆ ಯಾವುದೇ ಸಾಧನೆ ಇಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಸದಸ್ಯ ಗುಜ್ಜಲ ರಘು, ಸಂದೀಪಸಿಂಗ್ ಮಾತನಾಡಿದರು.
ಮಾಜಿ ಶಾಸಕರಾದ ರತನ್‍ಸಿಂಗ್, ಗುಜ್ಜಲ ಜಯಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಎಲ್.ಸಿದ್ದನಗೌಡ, ಕೆ.ಎಂ.ಹಾಲಪ್ಪ, ಇಮಾಮ್ ನಿಯಾಜಿ, ಕವಿತಾಸಿಂಗ್, ಪ.ಪಂ.ಅಧ್ಯಕ್ಷ ಬಿ.ಆರ್.ಮಳಲಿ, ಎಪಿಎಂಸಿ ಅಧ್ಯಕ್ಷ ಜೆ.ಪರಶುರಾಮಪ್ಪ, ನಿಂಬಗಲ್ ರಾಮಕೃಷ್ಣ, ಎನ್.ವೆಂಕಟೇಶ, ವಿ.ಸೋಮಪ್ಪ, ಮಧುರ ಚೆನ್ನಶಾಸ್ತ್ರಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
