ಹಾವೇರಿ
ಕೇಂದ್ರ ಬರ ಅಧ್ಯಯನ ತಂಡ ಗುರುವಾರ ಹಾವೇರಿ ಜಿಲ್ಲೆಯಲ್ಲಿ ಪ್ರವಾಸಕೈಗೊಂಡು ಕುಡಿಯುವ ನೀರಿನ ಪೂರೈಕೆ, ಬೆಳೆಹಾನಿ, ಉದ್ಯೋಗ ಖಾತ್ರಿ ಹಾಗೂ ಜಾನುವಾರುಗಳಿಗೆ ಒಣಮೇವಿನ ದಾಸ್ತಾನು ಹಾಗೂ ಹಸಿರು ಮೇವು ಬೆಳೆ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಸರ್ಕಾರದ ಕೃಷಿ, ಸಹಕಾರ ಹಾಗೂ ರೈತ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳಾದ ಐ.ಎ.ಎಸ್. ಅಧಿಕಾರಿ ಡಾ.ಅಭಿಲಾಕ್ಷಾ ಲಿಖಿ ನೇತೃತ್ವದಲ್ಲಿ ಕೇಂದ್ರ ಕೃಷಿ ಮತ್ತು ಸಹಕಾರ ಹಾಗೂ ರೈತ ಕಲ್ಯಾಣ ಮಂತ್ರಾಲಯದ ಜಂಟಿ ನಿರ್ದೇಶಕರಾದ ಬಿ.ಕೆ.ಶ್ರೀವಾಸ್ತವ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಹಿರಿಯ ಸಮಾಲೋಚಕ ಎಸ್.ಸಿ.ಶರ್ಮಾ ಅವರನ್ನೊಳಗೊಂಡ ತಂಡ ಕ್ಷೇತ್ರ ಭೇಟಿಯ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳಿಂದ ಜಿಲ್ಲೆಯ ಬರಪರಿಸ್ಥಿತಿ ಕುರಿತಂತೆ ವಿವರವಾದ ಮಾಹಿತಿ ಪಡೆದು ನಂತರ ಜಿಲ್ಲೆಯ ಕರ್ಜಗಿ, ನೆಲೋಗಲ್ ಹಾಗೂ ಬುಡಪನಹಳ್ಳಿ ಹಾಗೂ ರಾಣೇಬೆನ್ನೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ನೆಗಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ಜಗಿ ಗ್ರಾಮ ಹಾಗೂ ಕರ್ಜಗಿ ರೈಲ್ವೆ ನಿಲ್ದಾಣ ಪ್ರದೇಶದಲ್ಲಿರುವ ವೃಷಬೇಂದ್ರಗೌಡ ಪಾಟೀಲ ಹಾಗೂ ಉದಯಗೌಡ ಪಾಟೀಲ ಅವರ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಉಭಯ ಗ್ರಾಮಗಳಿಗೆ ನೀರು ಪೂರೈಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು.
ಜಂಟಿ ಕಾರ್ಯದರ್ಶಿ ಡಾ.ಅಭಿಲಾಕ್ಷಾ ಲಿಖಿ ಅವರು ರೈತ ವೃಷಬೇಂದ್ರ ಗೌಡರಿಂದ ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆಯಲಾಗುತ್ತಿತ್ತು ಹಾಗೂ ಕೊಳವೆಬಾವಿಯ ನೀರಿನ ಇಳುವರಿ ಹಾಗೂ ಕೊಳವೆಬಾವಿಯಿಂದ ಹೇಗೆ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅವರು, ಬಾಡಿಗೆ ಆಧಾರದ ಮೇಲೆ ರೈತರಿಂದ ಕೊಳವೆಬಾವಿ ಪಡೆದು ಪೈಪ್‍ಲೈನ್ ಮೂಲಕ ಗ್ರಾಮಗಳಿಗೆ ನೀರು ಪೂರೈಸುತ್ತಿರುವ ಕುರಿತು ವಿವರಿಸಿದರು.
ಹಾವೇರಿ ತಾಲೂಕು ನೆಲೋಗಲ್ ಗ್ರಾಮದ ನಾಗಪ್ಪ ಬಣಕಾರ ಅವರ ಬಿಳಿಜೋಳದ ತಾಕಿಗೆ ಭೇಟಿ ನೀಡಿದ ತಂಡ ನೀರಿನ ಕೊರತೆಯಿಂದ ಕಾಳುಕಟ್ಟದೆ ಒಣಗಿದ ಜೋಳದ ಬೆಳೆಯನ್ನು ವೀಕ್ಷಿಸಿತು. ಈ ಸಂದರ್ಭದಲ್ಲಿ ಕೇಂದ್ರ ಬರ ತಂಡಕ್ಕೆ ರೈತರು ಬರದ ನೈಜ ಸ್ಥಿತಿಯನ್ನು ವಿವರಿಸಿದರು.
ರೈತರಾದ ನಾಗಪ್ಪ ಬಣಕಾರ ಹಾಗೂ ಶಾಂತಪ್ಪ ಬಣಕಾರ ಅವರು ಮಾತನಾಡಿ, ಉತ್ತಮ ಮಳೆಯಾಗಿದ್ದರೆ ಪ್ರತಿ ಎಕರೆಗೆ 10 ರಿಂದ 15 ಕ್ವಿಂಟಲ್ ಜೋಳ ಬೆಳೆಯಲಾಗುತ್ತಿತ್ತು. ಆದರೆ ಮಳೆ ಇಲ್ಲದ ಕಾರಣ ತೆನೆ ಕಾಳು ಕಟ್ಟುವ ಹಂತದಲ್ಲಿ ಬತ್ತಿಹೋಗಿದೆ. ಒಂದರಿಂದ ಒಂದೂವರೆ ಕ್ವಿಂಟಲ್ ಇಳುವರಿ ಬರುವುದು ಕಷ್ಟಸಾಧ್ಯವಾಗಿದೆ. ಅತ್ಯಂತ ಬೇಡಿಕೆ ಇರುವ ಎಂ35 ಮಾಲ್ದಂಡಿ ಬೆಳೆ ಇದಾಗಿದ್ದು, ಇಳುವರಿ ಹಾಗೂ ಮಾರುಕಟ್ಟೆ ದರವೂ ಈ ಜೋಳಕ್ಕೆ ಹೆಚ್ಚು. ಆದರೆ ಇಳುವರಿಯ ಕೊರತೆಯಿಂದ ನಾವು ತೀವ್ರ ಸಂಕಷ್ಟ ಎದುರಿಸುತ್ತೀದ್ದೇವೆ. ಒಂದೆಡೆ ಆರ್ಥಿಕವಾಗಿ ನಷ್ಟವಾದರೆ ಮತ್ತೊಂದೆಡೆ ಜಾನುವಾರುಗಳಿಗೆ ಮೇವಿನ ಕೊರತೆಯು ಕಾಡುತ್ತಿದೆ. ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಇದ್ದು ಪರಿಹಾರ ಹಣವನ್ನು ಹೆಚ್ಚಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಜನರಿಗೆ ಉದ್ಯೋಗ ನೀಡಲು ಉದ್ಯೋಗ ಖಾತ್ರಿ ಯೋಜನೆ ಅಡಿ ಬುಡಪನಹಳ್ಳಿ ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿದ ತಂಡ ಇಷ್ಟು ದೊಡ್ಡ ಪ್ರಮಾಣದ ಕೆರೆಯ ಹೂಳೆತ್ತುವ ಕಾಮಗಾರಿ ಉದ್ದೇಶ ಹಾಗೂ ನೀರು ತುಂಬಿಸುವ ಕ್ರಮದ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಕೂಲಿಕಾರರೊಂದಿಗೆ ಮಾತನಾಡಿ, ಉದ್ಯೋಗ ಚೀಟಿ ನೀಡಿದ ಬಗ್ಗೆ ಹಾಗೂ ಸಕಾಲಕ್ಕೆ ಕೂಲಿ ಹಣ ಪಾವತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಕೇಂದ್ರ ತಂಡಕ್ಕೆ 100 ರಿಂದ 150 ಕೆಲಸದ ದಿನ ಹೆಚ್ಚಿಸಲು ಬ್ಯಾಡಗಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿಕೊಂಡರು.
ಜಂಟಿ ನಿರ್ದೇಶಕ ಬಿ.ಕೆ.ಶ್ರೀವಾಸ್ತವ ಕೂಲಿಕಾರರ ಜಾಬ್ ಕಾರ್ಡ್‍ಗಳನ್ನು ಪರಿಶೀಲಿಸಿ ನೀವು 150 ದಿನಗಳ ಕೆಲಸದ ಬೇಡಿಕೆಯನ್ನು ಸಲ್ಲಿಸುತ್ತಿದ್ದೀರಿ. ಆದರೆ ಕೂಲಿಕಾರರ ಉದ್ಯೋಗ ಚೀಟಿ ನೋಡಿದರೆ ಕೇವಲ 50 ದಿನಗಳ ಕೂಲಿ ನೀಡಿರುವುದು ದಾಖಲಾಗಿದೆ. ಆರ್ಥಿಕ ವರ್ಷದ ಕೊನೆಯಲ್ಲಿದ್ದೇವೆ. ನಿಗಧಿತ 100 ದಿನದ ಉದ್ಯೋಗವನ್ನೇ ನೀಡಿಲ್ಲ. ಕೆಲಸದ ದಿನ ಹೆಚ್ಚಿಸುವುದು ಹೇಗೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲೀಲಾವತಿ ಅವರನ್ನು ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲೀಲಾವತಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ 393 ಕೆರೆಗಳ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿದೆ. ಬುಡಪನಹಳ್ಳಿ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿ 18 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಮೊದಲ ಸುತ್ತಿನಲ್ಲಿ 100 ದಿನಗಳ ಪೂರೈಸಿದ ತಂಡಗಳು ಇಂದು ಕೆಲಸಕ್ಕೆ ಹಾಜರಾಗಿಲ್ಲ. 100 ದಿನ ಪೂರೈಸದ ತಂಡಗಳು ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ರಾಣೇಬೆನ್ನೂರಿನ ಗಂಗಾಪುರ ರಸ್ತೆಯಲ್ಲಿರುವ ಮಲ್ಲಪ್ಪ ರಾಜೇನಹಳ್ಳಿ ಅವರ ಜಮೀನಿಗೆ ಭೇಟಿ ನೀಡಿ ಹಸಿರು ಮೇವು ಬೆಳೆಯನ್ನು ವೀಕ್ಷಿಸಿದರು ಹಾಗೂ ಹುಲ್ಲತ್ತಿ ತಾಣದ ಪ್ರಗತಿಪರ ರೈತ ಪ್ರವೀಣ ಪಾಟೀಲ ಅವರ ಡೈರಿಗೆ ಭೇಟಿ ನೀಡಿ ಪಶು ಇಲಾಖೆ ದಾಸ್ತಾನು ಮಾಡಿರುವ ಒಣಮೇವು ಹಾಗೂ ಹಸಿರು ಮೇವು ಬೆಳೆಯನ್ನು ವೀಕ್ಷಸಿದರು.
ಬರದ ಸ್ಥಿತಿ ಕುರಿತು ಕೇಂದ್ರಕ್ಕೆ ತಂಡಕ್ಕೆ ಎಲ್ಲ ಮಾಹಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಕುರಿತು ಜಂಟಿ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರ ಅಂಗವಾಗಿ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣಾ ಬಾಜಪೈ ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ವಿವರಿಸಿದರು.