ಕುಣಿಗಲ್
ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬರದಂತೆ ಸಮರ್ಪಕವಾಗಿ ನಿಬಾಯಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿಯನ್ನ ರಚಿಸುವ ಮೂಲಕ ಉತ್ತಮ ಸೇವೆ ನೀಡಲು ಸದಾ ಸನ್ನದ್ಧರಾಗಿರುವುದಾಗಿ ನೂತನ ತಹಸೀಲ್ದಾರ್ ವಿ.ಆರ್.ವಿಶ್ವನಾಥ್ ತಿಳಿಸಿದರು.
ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಈ ತಾಲ್ಲೂಕನ್ನು ಈ ಬಾರಿಯು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಆದ್ದರಿಂದ ಕುಡಿಯುವ ನೀರು, ಜಾನುವರುಗಳಿಗೆ ಮೇವು ಸೇರಿದಂತೆ ಯಾವುದೆ ಸಮಸ್ಯೆ ಉಲ್ಬಣಿಸದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿಯನ್ನ ರಚನೆ ಮಾಡಲಾಗಿದ್ದು, ಇದರಲ್ಲಿ ತಹಸೀಲ್ದಾರ್, ಇ.ಒ., ಪುರಸಭಾ ಸಿಇಒ, ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ, ಗ್ರಾಮೀಣ ಕುಡಿಯುವ ನೀರಿನ ಎಇಇ ಹಾಗೂ ತಾಲ್ಲೂಕಿನ ಎಲ್ಲ ಪಿಡಿಒಗಳು ಇದ್ದು, ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸದಾ ಎಚ್ಚರಿಕೆ ವಹಿಸುವ ಮೂಲಕ ಉತ್ತಮ ಸೇವೆ ನೀಡಲು ಮುಂದಾಗಿದ್ದೇವೆ ಎಂದರು.
ಕುಡಿಯುವ ನೀರು ಬೇಕೆ ಸಂಪರ್ಕಿಸಿ :
ಜ.25ರಿಂದ ಅಮೃತೂರು ಹೋಬಳಿ 1-2 ಹಾಗೂ 3ನೇ ಬ್ಲಾಕ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಆ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಕೈಗೊಳ್ಳಲಾಗಿದೆ. ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿಯ ಗೊಲ್ಲರಹಟ್ಟಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇಲ್ಲೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲ್ಲೂಕು ಆಡಳಿತವೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ 24 ಘಂಟೆಯೂ ಸಹಾಯವಾಣಿ ಕೇಂದ್ರವನ್ನ ತೆರೆಯಲಾಗಿದೆ.
ನೀರಿನ ಸಮಸ್ಯೆ ಉಂಟಾದರೆ ಕೂಡಲೇ ತಹಸೀಲ್ದಾರ್-08132-220239,ಇ.ಒ. 08132-220929,ಪುರಸಭೆ-08132-220225 ಈ ದೂರವಾಣಿಗಳಿಗೆ ಫೋನ್ ಮಾಡಲು ತಿಳಿಸಿದ್ದಾರೆ. ಅಲ್ಲದೆ ಪ್ರತಿ ಗ್ರಾಮದಲ್ಲೂ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಿಡಿಒ, ಎಇಇ ಸೇರಿದಂತೆ ಅಧಿಕಾರಿಗಳು ಸಮಸ್ಯೆಯನ್ನ ಬಗೆಹರಿಸಬೇಕೆಂದರು. ಈಗಾಗಲೇ ಗ್ರಾಮೀಣ ಕುಡಿಯುವ ನೀರು ಯೋಜನೆಯ 21 ಕಾಮಗಾರಿಗಳನ್ನು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಪೈಪ್‍ಲೈನ್ ಸೇರಿದಂತೆ ಇತರೆ ಕಾರ್ಯವನ್ನ ಕೈಗೊಳ್ಳಲಾಗಿದೆ ಎಂದರು. ತಾಲ್ಲೂಕಿನಲ್ಲಿ ಜಾನುವಾರುಗಳಿಗೆ 36 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯತೆ ಇದೆ ಎಂದು ಈಗಾಗಲೇ ಪಶುಸಂಗೋಪನಾ ಇಲಾಖೆ ತಿಳಿಸಿದೆ ಎಂದರು.
ಯುವ ಮತದಾರರ ನೋಂದಣಿಗೆ ಪ್ರಾಂಶುಪಾಲರೆ ಹೊಣೆ : ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವೂ ಮುಗಿದಿದ್ದು, ಅಂತಿಮ ಪಟ್ಟಿಯನ್ನ ಪ್ರಕಟಿಸಲಾಗಿದೆ. 18 ವರ್ಷ ಪೂರ್ಣಗೊಂಡ ಯುವ ಮತದಾರರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೂಡಲೇ ತಮ್ಮ ಹೆಸರನ್ನ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆ ಅರಿವು ಮೂಡಿಸಿದ್ದು ಜವಾಬ್ದಾರಿಯನ್ನ ಆಯಾಯ ಡಿಗ್ರಿ ಮತ್ತು ಪಿಯುಸಿಯ ವಿದ್ಯಾರ್ಥಿಗಳ ಪ್ರಾಂಶುಪಾಲರಿಗೆ ವಹಿಸುವ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ. ಹೊಸ ಮತದಾರರ ನೋಂದಣಿಗಾಗಿ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿ 08132-220139 ಕರೆಮಾಡಲು ಕೋರಿದೆ.
ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆ
1-1-2019ಕ್ಕೆ 18 ವರ್ಷ ತುಂಬಿರುವ ಎಲ್ಲರೂ ಮತದಾನದ ಹಕ್ಕು ಪಡೆದಿದ್ದು ಈಗಲೂ ಸಹ ನೋಂದಣಿ ಮಾಡಿಸಿಕೊಳ್ಳಬಹುದು. ಇದು ನಿರಂತರವಾಗಿದೆ ಎಂದ ಅವರು, ಮುಂಬರುವ ಚುನಾವಣೆಗೆ ಆಯೋಗದ ಆದೇಶದಂತೆ ಪೂರ್ವ ಸಿದ್ಧತೆಯನ್ನ ತಾಲ್ಲೂಕು ಆಡಳಿತವೂ ಮಾಡಿಕೊಂಡಿದ್ದು, 264 ಮತಗಟ್ಟೆಗಳಿದ್ದು, 21ಸೆಕ್ಟರ್ ವಲಯ ಅಧಿಕಾರಿಗಳನ್ನ ನಿಯೋಜನೆ ಮಾಡಲಾಗಿದೆ. ಇವರುಗಳು ಎಲ್ಲ ಮತ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುತ್ತಾರೆಂದರು.
ಗುರುತಿನ ಚೀಟಿಯ ಬಗ್ಗೆ ತಿಳಿಯಲು ಮೊಬೈಲ್ ಆಪ್ ಬಳಸಿ : ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದರೂ ಚುನಾವಣಾ ಆಪ್‍ನಲ್ಲಿ ಮಾಹಿತಿ ಸಿಗುತ್ತದೆ. ಅದನ್ನು ಇಂದಿನ ಮೊಬೈಲ್‍ಗಳಲ್ಲಿಯೇ ವೀಕ್ಷಿಸಿ ಸಮಸ್ಯೆಗಳನ್ನ ಅಧಿಕಾರಿಗಳೊಂದಿಗೆ ಬಗೆಹರಿಸಿಕೊಳ್ಳುವ ಉತ್ತಮ ಅವಕಾಶ ನೀಡಿಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಮುಖ್ಯಾಧಿಕಾರಿ ರಮೇಶ್, ಕೃಷಿ ಸಹಾಯಕ ನಿರ್ದೇಶಕ ಹೊನ್ನದಾಸೇಗೌಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
