ಕೊರಟಗೆರೆ
ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ರೈತರ ಮೇಲೆ ಕರಡಿ ಪ್ರತ್ಯೇಕವಾಗಿ ಎರಡು ಕಡೆ ದಾಳಿ ನಡೆಸಿ ಇಬ್ಬರೂ ತೀವ್ರವಾಗಿ ಗಾಯ ಗೊಂಡಿರುವ ಘಟನೆ ಮಂಗಳವಾರ ತಾಲ್ಲೂಕ್ ವ್ಯಾಪ್ತಿಯಲ್ಲಿ ಜರುಗಿದೆ.
ತಾಲ್ಲೂಕಿನ ತೋವಿನಕೆರೆ ಹೋಬಳಿಯ ಬೋರಯ್ಯನ ಹಟ್ಟಿಯ ಪೂಜಾರ್ ಸಣ್ಣಪ್ಪ ಹಾಗೂ ದಾಸಾಲುಕುಂಟೆ ಗ್ರಾಮದ ಸುಮಂಗಲಮ್ಮ ಎಂಬುವರಿಬ್ಬರು ಅವರವರ ಜಮೀನುಗಳ ಬಳಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕರಡಿ ಏಕಾಏಕಿ ದಾಳಿ ನಡೆಸಿ, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಬೋರಯ್ಯನಹಟ್ಟಿಯ ಪೂಜಾರ್‍ಸಣ್ಣಪ್ಪ ತನ್ನ ತೋಟದಲ್ಲಿ ನೀರಾಯಿಸುವ ಸಂದರ್ಭದಲ್ಲಿ ಹಿಂಬದಿಯಿಂದ ಕರಡಿ ದಾಳಿ ನಡೆಸಿದ್ದು, ಕೈಯ ತೋಳ್ಬಾಗದಲ್ಲಿ ತೀವ್ರ ಗಾಯವಾಗಿರುವುದಲ್ಲದೆ, ಮೂಳೆ ಮುರಿದಿದೆ. ಇದಲ್ಲದೆ ದಾಸಾಲುಕುಂಟೆಯ ಸುನಂದಮ್ಮ ಹೂ ಬಿಡಿಸುತ್ತಿದ್ದ ಸಮಯದಲ್ಲಿ ಹೂ ತೋಟದಲ್ಲಿ ಕರಡಿ ದಾಳಿ ನಡೆಸಿದ್ದು, ಈ ಮಹಿಳೆಗೂ ಸಹ ತೀವ್ರವಾಗಿ ಗಾಯವಾಗಿದ್ದು, ಸಾರ್ವಜನಿಕರು ತತ್‍ಕ್ಷಣ ಧಾವಿಸಿದ ಕಾರಣ ಇಬ್ಬರೂ ಕರಡಿ ದಾಳಿಯಾಗಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಇದೇ ಮಾದರಿಯಲ್ಲಿ ಕರಡಿ ದಾಳಿ ನಡೆದಿದ್ದು, ಇತ್ತೀಚೆಗೆ ಜೋನಿಗರಹಳ್ಳಿಯ ಚಿಕ್ಕಣ್ಣ ಎಂಬುವರ ಮೇಲೆ ಬೆಳ್ಳಂಬೆಳಗ್ಗೆ ತನ್ನ ತೋಟದ ಮನೆಯ ಸಮೀಪ ಕರಡಿ ಮೈಮೇಲೆ ದಾಳಿ ನಡೆಸಿದ್ದು, ಚಿಕ್ಕಣ್ಣ ಜೋರಾಗಿ ಕೂಗಿಕೊಂಡು ಮನೆಯ ಕಡೆ ಪರಾರಿಯಾಗಿ ತಪ್ಪಿಸಿಕೊಂಡಿದ್ದಾರೆ. . ಇನ್ನೂ ತೋವಿನಕೆರೆಯ ವರ್ತಕ ಅಜೀಮುಲ್ಲಾ ತಮ್ಮ ತೋಟದಲ್ಲಿ ತೆಂಗಿನ ಕಾಯಿಗಳನ್ನು ಆಯುತ್ತಿದ್ದ ವೇಳೆ ಕರಡಿ ಮತ್ತೆ ಪ್ರತ್ಯಕ್ಷವಾಗಿದೆ.
ಅದನ್ನು ನೋಡಿ ಇತರೆ ರೈತರ ಜೊತೆ ಸೇರಿ ಜೋರಾಗಿ ಶಬ್ದ ಮಾಡಿ ಕರಡಿಯನ್ನು ಓಡಿಸಿದ್ದಾರೆ ಎನ್ನಲಾಗಿದ್ದು, ಸಿದ್ದರಬೆಟ್ಟದ ಅರಣ್ಯ ಕಾವಲುಗಾರ ವೆಂಕಟರಾಮಯ್ಯನ ಮೇಲೂ ಕರಡಿ ದಾಳಿ ನಡೆದಿದೆ. ಇತ್ತೀಚಿನ ದಾಳಿಯಿಂದ ಸಾರ್ವಜನಿಕರು ಆತಂಕಗೊಂಡಿರುವುದು ಕಂಡು ಬರುತ್ತಿದ್ದು, ಅರಣ್ಯ ಇಲಾಖೆಯ ಸತೀಶ್‍ಚಂದ್ರ ಕರಡಿಯಿಂದ ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
