ಹಾವೇರಿ:
ತಾಂಡಾ ಅಭಿವೃದ್ಧಿ ನಿಗಮಕ್ಕೆ ರೂ.100 ಕೋಟಿ ಅನುದಾನ ನೀಡಲಾಗಿದೆ. ಪ್ರತಿ ತಾಂಡಾಗಳಲ್ಲಿ ಸಿಮೆಂಟ್ ರಸ್ತೆ, ಸಮುದಾಯ ಭವನ ನಿರ್ಮಿಸುವ ಮೂಲಕ ಪರಿಣಾಮಕಾರಿ ಬದಲಾವಣೆ ಹಾಗೂ ಬೆಳವಣಿಗೆ ತರುವಲ್ಲಿ ತಾಂಡಾ ಅಭಿವೃದ್ಧಿ ನಿಗಮ ಪ್ರಮುಖಪತ್ರ ವಹಿಸಿದೆ ಎಂದು ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಅವರು ಹೇಳಿದರು.
ದೇವಗಿರಿ-ಯಲ್ಲಾಪೂರ ಬಳಿ ಇಂದು ಜಿಲ್ಲಾ ಬಂಜಾರ ಭವನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಾನ್ಯ ಮುಖ್ಯವಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಯಿತು. ತಾಂಡಾ ಜನರ ಜೀವನ ಗುಣಮಟ್ಟದ ಸುಧಾರಿಸಲು ಹಾಗೂ ಸರ್ಕಾರದ ಯೋಜನೆಗಳು ಈ ಸಮಾಜಕ್ಕೆ ಸಮರ್ಪಕವಾಗಿ ತಲುಪಿಸಲುವ ನಿಟ್ಟಿನಲ್ಲಿ ತಾಂಡಾ ಅಭಿವೃದ್ಧಿ ನಿಯಮ ಕಾರ್ಯಪ್ರವೃತ್ತವಾಗಿದೆ. ತಾಂಡಾ ಅಭಿವೃದ್ಧಿ ನಿಗಮದಿಂದ ಸಮಾಜ ಸಣ್ಣ ನೆಲೆ ಕಂಡುಕೊಂಡಿದೆ. ಆದರೆ ಬದುಕಿನ ಹೋರಾಟ ಮುಂದುವರೆದಿದೆ ಎಂದು ಹೇಳಿದರು.
‘ಬಂಜಾರ ಭವನ’ ಈ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಭವನ ಕಟ್ಟಡವಲ್ಲ, ಸಮಾಜದ ಜಾಗೃತಿ, ಚಿಂತನೆ, ಹೊಸ ದಿಕ್ಸೂಚಿ ಸಂಕೇತವಾಗಿದೆ. ಉತ್ತಮ ಕಾರ್ಯಕ್ರಮಗಳ ಯೋಜನೆ ಮೂಲಕ ಮುಂದಿನ ದಿನಗಳಲ್ಲಿ ಸಾರ್ಥಕತೆ ಕಾಣಲಿ.ಈ ಸಮಾಜದ ಬಗ್ಗೆ ವಿಶೇಷ ಪ್ರತಿ, ವಿಶ್ವಾಸವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಬಂಜಾರ ಸಮಾಜವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಮಾಜ ಭಾರತದ ಅಖಂಡತೆ ಹಾಗೂ ಏಕತೆ ಸಂಸ್ಕøತಿ ಜೋಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತಾಂಡಾಗಳಿಗೆ ಭೇಟಿ ನೀಡಿದ ಸಮಯದಲ್ಲಿ ಸಿಗುವ ಸ್ವಾಗತ, ಪ್ರೀತಿ ಹಾಗೂ ಎಲ್ಲರೊಂದಿಗೆ ಬರೆಯುವ ಸ್ಪೂರ್ತಿ ಈ ದೇಶದಲ್ಲಿ ಮಾತ್ರ ಸಾಧ್ಯ.
ಸಮಾಜದ ಬಗ್ಗೆ ಹೆಮ್ಮೆ ಪಡಬೇಕು, ನಮ್ಮ ಬಗ್ಗೆ ಅರಿವು ಇದ್ದಾಗ ಮಾತ್ರ ಪ್ರಮುಖ ಪಾತ್ರ ವಹಿಸುವ ವಿಚಾರ ಮಾಡಬಹುದು. ನಾವು ಶ್ರಮಜೀವಿಗಳು, ಬುದ್ಧಿವಂತರು ಎಂಬ ಭಾವನೆ ಸಮಾಜ ಯುವ ಜನತೆಯಲ್ಲಿ ಬರಬೇಕು. 2014ರಲ್ಲಿ ನಡೆದ 14 ಜನ ನ್ಯಾಯಾಧೀಶರ ನೇಮಕಾತಿಯಲ್ಲಿ ನಾಲ್ಕು ನ್ಯಾಯಾಧೀಶರು ಬಂಜಾರ ಸಮುದಾಯದವರು. ಡಾಕ್ಟರ್, ಇಂಜನೀಯರ ಹೀಗೆ ಹಲವು ಹುದ್ದೆಗಳನ್ನು ಈ ಸಮಾದವರು ಪಡೆದುಕೊಂಡಿದ್ದಾರೆ. ನೀವು ಈ ಸಾಧನೆಯನ್ನು ಮಾಡಬೇಕು. ಈ ಹಿಂದೆ ಭೂಮಿ ಹಾಗೂ ಹಣ ಇದ್ದವರು ಆಡಳಿತ ನಡೆಸುತ್ತಿದ್ದರು. ಇಂದು ಜ್ಞಾನ ಇದ್ದವರ ಕಾಲ, ಬಂಜಾರ ಸಮುದಾಯ 21ನೇ ಶತಮಾನದಲ್ಲಿ ಸವಾಲು ಸ್ವೀಕಾರಮಾಡಿ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಸ್ಥಳೀಯ ಬಂಜಾರ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಬಂಜಾರ ಸಮುದಾಯ ಹೆಚ್ಚಿರುವ ಪ್ರತಿ ತಾಲೂಕಿನಲ್ಲಿ 20 ರಿಂದ 25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳನ್ನು ತೆರೆಯಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ಸಾಮ್ಯತ್ವ ಯೋಜನೆ ಸೆಟಲೈಟ್ ಸರ್ವೇ ಮಾಡಲಾಗುವುದು. ತಾಂಡಾಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಸೆಪ್ಟೆಂಬರ್ ಎರಡನೇ ವಾರದಲ್ಲಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಲಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೆಡಿಕಲ್ ಕಾಲೇಜು ಆರಂಭಕ್ಕೆ ತಾತ್ಕಾಲಿಕವಾಗಿ ಸರ್ಕಾರಿ ಇಂಜನೀಯರ್ ಕಾಲೇಜು ಕಟ್ಟಡ ಗುರುತಿಸಲಾಗಿದೆ. ಮುಂದಿನ ಒಂದುವರೆ ವರ್ಷದಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ಕಟ್ಟಡ ಹಾಗೂ ಜಿಲ್ಲಾ ಆಸ್ಪತ್ರೆ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ನೆಹರು ಓಲೇಕಾರ ಅವರು ಮಾತನಾಡಿ, ಬಂಜಾರ ಸಮಾಜದ ಏಳ್ಗೆಗೆ ಸರ್ಕಾರ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಅನೇಕ ಯೋಜನೆಗಳನ್ನು ರೂಪಿಸಿದೆ. ರೂ.3.50 ಕೋಟಿ ಭವನ ಸಮಾಜಕ್ಕೆ ಕೊಡುಗೆಯಾಗಿದೆ. ಈ ಭವನದಲ್ಲಿ ಸಮಾಜದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಜೊತೆಗೆ ಶುಚಿತ್ವ ಕಾಯ್ದುಕೊಳ್ಳಬೇಕು. ತಾಂಡಾ ನಿವಾಸಿಗಳು ಶ್ರಮಜೀವಿಗಳು, ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಗ್ರಾಮಗಳಿಗಿಂತ ತಾಂಡಾಗಳು ಕಡಿಮೆ ಇಲ್ಲ ಎಂದು ತೋರಿಸಬೇಕು ಎಂದು ಕರೆ ನೀಡಿದರು. ಭವನದ ಕಂಪೌಂಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಸಚಿವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗೊಟಗೋಡಿ ಜಾನಪದ ವಿವಿಯಿಂದ ಹೊರತರಲಾದ ವಿವಿಧ ಪುಸ್ತಕಗಳನ್ನು ಸಚಿವರು, ಶಾಸಕರು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ತಿಪ್ಪೇಶ್ವರಸ್ವಾಮೀಜಿ, ಕುಡಚಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ.ರಾಜೀವ್, ಶಾಸಕರಾದ ಅರುಣಕುಮಾರ ಗುತ್ತೂರ, ಜಿಲ್ಲಾ ಪಂಚಾಯತ್ ಸದಸ್ಯರಾದ ವಿರುಪಾಕ್ಷಪ್ಪ ಕಡ್ಲಿ, ಶ್ರೀಮತಿ ಲಕ್ಷ್ಮವ್ವ ಚವ್ಹಾಣ, ತಾ.ಪಂ.ಸದಸ್ಯ ಸತೀಶ್ ಸಂದಿಮನಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಜಾನಪದ ವಿವಿ ಕುಲಪತಿ ಡಿ.ವಿ.ನಾಯಕ್, ಮಾಜಿ ಸಚಿವರು ಹಾಗೂ ಸೂರಗೊಂಡನಕೊಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಅಧ್ಯಕ್ಷರಾದ ರುದ್ರಪ್ಪ ಲಮಾಣಿ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀಮತಿ ಸವಿತಾಬಾಯಿ ಶಿವಕುಮಾರ್ ನಾಯ್ಕ ಇತರರು ಉಪಸ್ಥಿತರಿದ್ದರು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಶಂಕರ ನಾಯ್ಕ ಎಲ್ ಅವರು ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ