ಗುಬ್ಬಿ
ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ಬಂಡವಾಳಶಾಹಿ ಕಂಪೆನಿಯ ಉದ್ದಾರಕ್ಕೆ ಎಪಿಎಂಸಿ ನಾಶ ಮಾಡುವ ಜತೆಗೆ ಗ್ರಾಹಕರಿಂದಲೂ ಲೂಟಿ ಮಾಡಲು ರಚಿತವಾದ ಎರಡು ಕಾಯಿದೆ ತಿದ್ದುಪಡಿ ಸರ್ಕಾರದ ಪೂರ್ವ ನಿಯೋಜಿತ ಷಡ್ಯಂತ್ರ ಎಂದು ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ವೆಂಕಟೇಗೌಡ ಆರೋಪ ಮಾಡಿದರು.
ಪಟ್ಟಣದ ಬಸ್‍ನಿಲ್ದಾಣ ಬಳಿ ಸೋಮವಾರ ಸಮನ್ವಯ ಸಮಿತಿ ನಡೆಸಿದ ಕೆಲ ಕಾಲ ರಸ್ತೆ ತಡೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ರೈತರಿಗಷ್ಟೇ ಜಮೀನು ಮಾರಾಟದ ಕಾನೂನು ಸಡಿಲಗೊಳಿಸಿ ಹಣವಂತರ ಬಳಿ ಇರುವ ಕಪ್ಪುಹಣವನ್ನು ಬಳಸಿಕೊಂಡು ಜಮೀನು ಖರೀದಿಗೆ ಅವಕಾಶ ಮಾಡಿಕೊಟ್ಟ ರಾಜಕಾರಣಿಗಳು ತಮ್ಮ ಬಳಿ ಇರುವ ಭ್ರಷ್ಟ ಹಣವನ್ನು ಜಮೀನು ಕೊಳ್ಳಲು ಬಳಸಲಿದ್ದಾರೆ.
ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ಕೊಡುವ ಜತೆಗೆ ತಮ್ಮ ಷೇರುದಾರ ವ್ಯವಹಾರಕ್ಕೆ ಮುಂದಾಗಿದ್ದಾರೆ. ರೈತರು ಹಾಗೂ ಸಾರ್ವಜನಿಕರಿಗೂ ಈ ಕಾಯಿದೆ ಪೆಟ್ಟು ನೀಡಲಿದೆ ಎಂದರು.ಈ ಕಾಯಿದೆ ತಿದ್ದುಪಡಿಗೆ ಬಲಿಯಾಗುವ ಸಣ್ಣ ಮತ್ತು ಮಧ್ಯಮ ರೈತರು ತಮ್ಮ ಜಮೀನು ಮಾರಾಟ ಮಾಡಿಕೊಂಡು ಪರ್ಯಾಯ ಉದ್ಯೋಗ ತಿಳಿಯದೇ ಪರದಾಡುವಂತಾಗುತ್ತದೆ. ಜಮೀನು ಕೊಳ್ಳುವ ಬಂಡವಾಳಶಾಹಿಗಳು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತಾರೆ.
ಕೃಷಿ ತೊರೆದು ರೈತ ನಿರುದ್ಯೋಗಿಯಾಗಿ ನಗರಕ್ಕೆ ವಲಸೆ ಹೋಗುತ್ತಾನೆ. ಆದರೆ ದೇಶದಲ್ಲಿ ಆಹಾರ ಕೊರತೆಗೆ ಸರ್ಕಾರವೇ ಹೊಣೆಯಾಗಲಿದೆ. ಇಡೀ ಕೃಷಿ ಚಟುವಟಿಕೆ ಸಿರಿವಂತರ ಕೈ ಸೇರಿ ಮನಬಂದಂತೆ ವರ್ತಿಸಿ ಮಾರುಕಟ್ಟೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಕೆಲಸಕ್ಕೆ ಎಪಿಎಂಸಿ ಕಾಯಿದೆ ಕೂಡಾ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ದೂರಿದರು.
ಹಸಿರುಸೇನೆ ಅಧ್ಯಕ್ಷ ಸಿ.ಟಿ.ಕುಮಾರ್ ಮಾತನಾಡಿ ರೈತ ಕುಟುಂಬಕ್ಕೆ ಮೊದಲು 56 ಎಕರೆ ಸೀಮಿತ ಪ್ರದೇಶ ಎನ್ನುವಂತಿದ್ದ ಕಾನೂನು ತಿದ್ದುಪಡಿ ಮಾಡಿ ನಾಲ್ವರ ಕುಟುಂಬಕ್ಕೆ 105 ಎಕರೆ, 5 ಕ್ಕಿಂತ ಅಧಿಕ ಕುಟುಂಬಕ್ಕೆ 216 ಎಕರೆ ಪ್ರದೇಶಕ್ಕೆ ಅನುವು ಮಾಡಿರುವ ಜತೆಗೆ ವಿದ್ಯುತ್ ಕಾಯಿದೆಯನ್ನೂ ತಿದ್ದುಪಡಿ ಮಾಡಿ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಿದ್ದಾರೆ. ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಎಲ್ಲವನ್ನೂ ಮೀಟರ್ ಅವಳಡಿಸಿ ಹಣ ವಸೂಲಿ ಮಾಡಲಿದ್ದಾರೆ ಎಂದ ಆರೋಪಿಸಿದರು.
ಹೈನುಗಾರಿಕೆ, ಕೋಳಿ ಕುರಿ ಸಾಕಾಣೆ ಸೇರಿದಂತೆ ಕೃಷಿ ಪೂರಕ ಎಲ್ಲಾ ಉದ್ದಿಮೆಗಳಿಗೂ ಕಂಪೆನಿಗಳು ಬರುವಿಕೆಗೆ ಕಾಯತ್ತಿವೆ. ಮುಂಗಡ ವ್ಯಾಪಾರದ ಮೂಲಕ ವ್ಯವಹಾರ ಆರಂಭಿಸಿ ಎಲ್ಲಾ ಹಂತದಲ್ಲೂ ಸ್ವಾಭಿಮಾನಿ ರೈತರನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಆಟವಾಡುತ್ತಾರೆ. ಈ ಬಗ್ಗೆ ರೈತರು ಸೂಕ್ಷ್ಮ ಅವಲೋಕನ ಮಾಡಬೇಕಿದೆ. ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಕೃಷಿ ಪರಿಕರಗಳನ್ನೂ ಕಾರ್ಪೋ ರೇಟರ್ ಕಂಪೆನಿಗಳ ನಿಗದಿಗೆಎ ತಲೆತೋಗಬೇಕಿದೆ ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅನುಸೂಯ ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಜಮಾಯಿಸಿದ ರೈತಸಂಘದ ಸದಸ್ಯರು, ಅಂಗನವಾಡಿ ನೌಕರರು, ಟೆಂಪೋ ಆಟೋ ಚಾಲಕರು, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಸರ್ಕಲ್ ತಲುಪಿ ನಂತರ ಬಸ್‍ನಿಲ್ದಾಣದ ಬಳಿ ಮಾವನ ಸರಪಳಿ ರಚಿಸಿ ಪ್ರತಿಭಟನಾ ಸಭೆ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದವು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ಜೆಡಿಎಸ್ ಅಧ್ಯಕ್ಷ ಗುರುರೇಣುಕಾರಾಧ್ಯ, ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ರೈತಸಂಘದ ಉಪಾಧ್ಯಕ್ಷ ಶಿವಕುಮಾರ್, ಮಂಜುನಾಥ್, ಕಾರ್ಯಾಧ್ಯಕ್ಷರಾದ ಗುರುಚನ್ನಬಸವಯ್ಯ, ಸಿ.ಜಿ.ಲೋಕೇಶ್, ಅಂಗನವಾಡಿ ನೌಕರರ ಸಂಘದ ಸರೋಜಮ್ಮ, ಮುಖಂಡರಾದ ಜಿ.ಬಿ.ಮಲ್ಲಪ್ಪ, ಜಿ.ವಿ.ಮಂಜುನಾಥ್, ಹೆಚ್.ಡಿ.ಯಲ್ಲಪ್ಪ, ನಾಗಸಂದ್ರ ವಿಜಯ್‍ಕುಮಾರ್, ವಿನಯ್, ಮಾರಯ್ಯ, ರಫಿ, ಬಸವರಾಜು, ರಮೇಶ್, ಜಗದೀಶ್, ಯತೀಶ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ