ಬೆಂಗಳೂರು
ರಾಜಸ್ಥಾನ, ಉತ್ತರಪ್ರದೇಶ,ಮಧ್ಯಪ್ರದೇಶ, ಮಹಾರಾಷ್ಟ್ರದ ಮೂಲಕ ರಾಜ್ಯವನ್ನು ಬಹು ಭಕ್ಷಕ ಮಿಡತೆಗಳು ಪ್ರವೇಶಿಸುತ್ತಿದ್ದು, ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾದ ಬೆನ್ನಲ್ಲೇ ಕೋಲಾರದಲ್ಲೂ ಮಿಡತೆಗಳು ಆತಂಕ ಸೃಷ್ಟಿಸಿವೆ.
ಕೋಲಾರದ ದಿಂಬ ಗ್ರಾಮದ ಬಳಿ ತಿಳಿ ಹಸಿರು ಬಣ್ಣದಿಂದ ಕೂಡಿದ್ದ ಮಿಡತೆಗಳು ನಿನ್ನೆ ಕಾಣಿಸಿಕೊಂಡಿದ್ದು ಅವು ಕುಳಿತ ಗಿಡಗಳ ಎಲೆಯನ್ನು ತಿಂದು ಹಾಕಿದ್ದವು. ಈ ಮಿಡತೆಗಳು ಬೆಳೆಗಳನ್ನು ನಾಶ ಮಾಡುತ್ತವೆ ಎನ್ನುವ ಭೀತಿಯಲ್ಲಿ ರೈತರು ಮಿಡತೆಗಳಿಗೆ ಬೆಂಕಿಯಿಟ್ಟು ನಾಶ ಮಾಡಿದ್ದಾರೆ.
ತಡರಾತ್ರಿ ಸ್ಥಳಕ್ಕೆ ಆಗಮಿಸಿದ ತೋಟಗಾರಿಕಾ ಇಲಾಖೆ ತಜ್ಞರು, ಇದು ಹಾನಿಕಾರಕ ಲೋಕಸ್ಟ್ ಮಿಡತೆಗಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.ಇನ್ನೂ ಮಹಾರಾಷ್ಟ್ರದ ಗಡಿ ಭಾಗದ ಜಿಲ್ಲೆ ಗಳಲ್ಲಿ ದಾಳಿ ಯಿಡುವ ಮಿಡತೆಗಳನ್ಮು ನಿಗ್ರಹಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಆಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ
ಮಹಾರಾಷ್ಟ್ರದ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿ ಗುಂಪಿನಲ್ಲಿ ಬರುತ್ತಿರುವ ಮಿಡತೆಗಳು ಒಂದು ದಿನದಲ್ಲಿ 150 ಕಿಲೋ ಮೀಟರ್‍ವರೆಗೂ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಮಿಡತೆ ಒಂದು ದಿನದಲ್ಲಿ ತನ್ನಷ್ಟೇ ತೂಕದ ಆಹಾರ ಸೇವಿಸುತ್ತದೆ. ಮಿಡತೆಗಳ ಸೈನ್ಯ ಒಂದು ದಿನದಲ್ಲಿ ಸುಮಾರು 35,000 ಮಂದಿ ತಿನ್ನುವಷ್ಟು ಆಹಾರ ಧಾನ್ಯವನ್ನು ತಿಂದು ಮುಗಿಸುವ ಆತಂಕ ಎದುರಾಗಿದೆ.
ನಿರ್ದಿಷ್ಟ ಹವಾಮಾನದ ಸಂದರ್ಭದಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಬಿರು ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದರೆ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸುತ್ತವೆ. ಉಷ್ಣಾಂಶ ಏರಿಕೆಯಾದರೆ, ಇವು ಉಗ್ರ ಸ್ವರೂಪ ಪಡೆದು ದುಪ್ಪಟ್ಟು ಆಹಾರ ಸೇವಿಸಲಿದ್ದು. 3ರಿಂದ 5 ತಿಂಗಳು ಬದುಕಿರುತ್ತವೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದ ನಾಗಪುರ ಹಾಗೂ ಅಮರಾವತಿ ಜಿಲ್ಲೆಯಲ್ಲಿ ರಣ ಬಿಸಿಲಿನ ಮಧ್ಯೆಯೇ ಅಕಾಲಿಕ ಮಳೆ ಸುರಿದಿದೆ. ಹೀಗಾಗಿ ಇವುಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.ಮಿಡತೆಗಳ ಹಾವಳಿ ತಪ್ಪಿಸಲು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಡ್ರೋಣ್‍ಗಳ ಮೂಲಕ ಮಲಾತಿಯಾನ್ ಎನ್ನುವ ಆರ್ಗಾನೋಫಾಸ್ಫೇಟ್ ಕ್ರಿಮಿನಾಶಕ ಸಿಂಪಡಿಸುವುದು ಸೂಕ್ತ. ಬೆಳೆ ಇರುವ ಪ್ರದೇಶದಲ್ಲಿ ಕ್ಲೋರೋಪಿರಿಫಾಸ್ ಅನ್ನು ಸಿಂಪಡಿಸಬಹುದಾಗಿದೆ ಎಂದು ಸಂಸ್ಥೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.ಕೇಂದ್ರ ಸರ್ಕಾರ ಈಗಾಗಲೇ ಮಿಡತೆ ಎಚ್ಚರಿಕೆ ಸಂಸ್ಥೆ (ಎಲ್‍ಡಬ್ಲ್ಯುಒ)ಯನ್ನು ಸ್ಥಾಪಿಸಿದೆ. ಈ ಸಂಸ್ಥೆ ಕೃಷಿ ಇಲಾಖೆ ಮೂಲಕ ಆಯಾ ರಾಜ್ಯಗಳಿಗೆ ಮಾಹಿತಿ ರವಾನಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
