ಬಳ್ಳಾರಿ
ನೀರಿನ ಉಳಿತಾಯ ಮತ್ತು ಹೆಚ್ಚಿನ ಇಳುವರಿ ನೀಡುವ ಹಾಗೂ ನೀರನ್ನು ಹೆಚ್ಚಾಗಿ ಅವಲಂಬಿಸದ ಕೂರಿಗೆ ಭತ್ತ ಬಿತ್ತನೆಗೆ ಹೆಚ್ಚಿನ ಒತ್ತನ್ನು ರೈತ ಸಮುದಾಯ ನೀಡಬೇಕು. ಅಧಿಕಾರಿಗಳು ಸಹ ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಸಲಹೆ ನೀಡಿದರು.
ಬಳ್ಳಾರಿ ತಾಲೂಕಿನ ಕೋರ್ಲಗುಂದಿಯಲ್ಲಿ ಶನಿವಾರ ಏರ್ಪಡಿಸಿದ್ದ ಗುಲಾಬಿ ಕಾಯಿಕೊರಕ ನಿವಾರಣಾ ಆಂದೋಲನ ಮತ್ತು ಕೂರಿಗೆ ಭತ್ತ ಬಿತ್ತನೆ ಫಲಶೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಈ ಮುಂಚೆ 200ಹೆಕ್ಟೇರ್ ಇದ್ದ ಕೂರಿಗೆ ಭತ್ತದ ಕ್ಷೇತ್ರದ ವ್ಯಾಪ್ತಿ ಅಧಿಕಾರಿಗಳ ಮುತುವರ್ಜಿ ವಹಿಸಿದ ಪರಿಣಾಮ ಇಂದು 10 ಸಾವಿರಕ್ಕೂ ಹೆಚ್ಚು ಕೂರಿಗೆ ಭತ್ತ ಬಿತ್ತನೆಯಾಗಿದೆ. ಇದು ಅತ್ಯಂತ ಖುಷಿಯ ಸಂಗತಿ. ಈ ರೀತಿ ಇಡೀ ರಾಜ್ಯಾದ್ಯಂತ ಕೂರಿಗೆ ಭತ್ತ ಕ್ಷೇತ್ರ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿ ರೈತರಲ್ಲಿ ಅಧಿಕಾರಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕಳೆದ 3 ವರ್ಷಗಳಿಂದ ಹತ್ತಿಗೆ ಗುಲಾಬಿ ಕಾಯಿಕೋಶ ಹುಳು ಸುತ್ತಮುತ್ತಲಿನ ರಾಜ್ಯಗಳಲ್ಲಿ ವ್ಯಾಪಕವಾಗಿ ವ್ಯಾಪಿಸುತ್ತಿರುವುದರಿಂದ ನಮ್ಮಲ್ಲಿ ಆತಂಕವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ಈ ಹುಳು ನಿಯಂತ್ರಣ ಮತ್ತು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ರೈತಸಮುದಾಯಕ್ಕೆ ಅಗತ್ಯ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಸಮರ್ಪಕವಾಗಿ ಅರಿವು ಮೂಡಿಸಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ರೈತಸಮುದಾಯದಲ್ಲಿ ಹತ್ತಿ ಬೆಳೆಗೆ ಕಾಡುವ ಈ ಹುಳುವಿನ ನಿಯಂತ್ರಣ ಮತ್ತು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು,ಕೃಷಿ ವಿಜ್ಞಾನಿಗಳು,ರಸಗೊಬ್ಬರ,ಕೀಟನಾಶಕ ಮತ್ತು ಬೀಜ ತಯಾರಿಕಾ ತಂಡಗಳು 14 ತಂಡಗಳನ್ನು ರಚಿಸಿ ಪ್ರತಿದಿನ ಸಂಜೆ 4ಕ್ಕೆ ಗ್ರಾಮಗಳಿಗೆ ಭೇಟಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
ಕೃಷಿ ಪದ್ದತಿ ಮತ್ತು ಸಾವಯವ ಕೃಷಿಗೆ ಒತ್ತು ನೀಡುವ ಅಗತ್ಯತೆ ಹಾಗೂ ಇಸ್ರೆಲ್ ಕೃಷಿ ಪದ್ದತಿ ಸೇರಿದಂತೆ ವಿವಿಧ ರೀತಿಯ ವಿಚಾರಗಳನ್ನು ರೈತರೊಂದಿಗೆ ಸಚಿವ ಶಿವಶಂಕರರೆಡ್ಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮುಂಚೆ ಅವರು ಕೂರಿಗೆ ಭತ್ತ ಬಿತ್ತನೆ ಕ್ಷೇತ್ರ ವ್ಯಾಪ್ತಿ ಹೆಚ್ಚಳ ಮತ್ತು ಗುಲಾಬಿ ಕಾಯಿಕೊರಕ ಹುಳುವಿನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ರಮೀಜಾ ಬೀ, ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆಯ ಸಿಬ್ಬಂದಿ,ಕೃಷಿಕ ಸಮಾಜದ ಅಧ್ಯಕ್ಷರು, ಗ್ರಾಪಂ,ತಾಪಂ ಸದಸ್ಯರು ಸೇರಿದಂತೆ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
