ಜಗಳೂರು:
ಜಗತ್ತಿನಲ್ಲಿ ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ಯನ್ನು ಉರುಳು ಹಾಕಿ ಬೇಟೆಯಾಡಿರುವ ಘಟನೆ ತಾಲ್ಲೂಕಿನ ವೆಂಕಟೇಶಪುರ ಗ್ರಾಮದ ಸಮೀಪ ಮಂಗಳವಾರ ನಡೆದಿದೆ. ಕೊಂಡುಕುರಿ ವನ್ಯಧಾಮದ ಅಂಚಿನಲ್ಲಿ ಉರುಳು ಹಾಕಿ ಗಂಡು ಕೊಂಡುಕುರಿಯನ್ನು ಕೊಲ್ಲಲಾಗಿದೆ.
ವೆಂಕಟೇಶಪುರ ಗ್ರಾಮ ಸಮೀಪದ ದಾಳಿಂಬೆ ತೋಟದ ಮನೆಯಲ್ಲಿ ಕೊಂಡುಕುರಿಯ ಮಾಂಸವನ್ನು ದಾಸ್ತಾನು ಮಾಡಿರುವ ಬಗ್ಗೆ ನಿಖರ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಕೊಂಡುಕುರಿ ತಲೆ, ಚರ್ಮ ಹಾಗೂ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕೊಂಡುಕುರಿ ವನ್ಯಧಾಮದ ವಲಯ ಅರಣ್ಯಾಧಿಕಾರಿ ಶ್ರೀಹರ್ಷ ತಿಳಿಸಿದ್ದಾರೆ. ಜಗತ್ತಿನಲ್ಲಿ ವಿರಳ ಸಂಖ್ಯೆಯಲ್ಲಿರುವ ಕೊಂಡುಕುರಿಯನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶಡ್ಯೂಲ್ 1ಅಡಿಯಲ್ಲಿ ವಿಶೇಷ ರಕ್ಷಣೆ ನೀಡಲಾಗಿದೆ. ನೇಪಾಳ ಹಾಗೂ ಭಾರತದ ಕೆಲವೇ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ ಹುಲ್ಲೆ ಜಾತಿಗೆ ಸೇರಿದ ಈ ಜೀವಿಯ ಸಂರಕ್ಷಣೆ ಹಿನ್ನೆಲೆಯಲ್ಲಿ 2010ರಲ್ಲಿ ರಂಗಯ್ಯನದುರ್ಗ ಅರಣ್ಯವನ್ನು ಕೊಂಡುಕುರಿ ವನ್ಯಧಾಮ ಆಗಿ ಘೋಷಿಸಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
