ಹೊಳಲ್ಕೆರೆ:
ಸರಕಾರದಿಂದ ಹಲವು ಶರಣರ ಜಯಂತಿ ಆಚರಣೆಯಂತೆಯೇ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿ ವರ್ಷ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಲು 69 ಲಕ್ಷ ರೂ. ಅನುದಾನ ಬಿಡುಗಡೆಗೆ ಸರಕಾರ ಮಂಜೂರು ನೀಡಿ ಆದೇಶ ಹೊರಡಿಸಿದೆ ಎಂದು ಇಒ ಮಹಾಂತೇಶ್ ತಿಳಿಸಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಹಾಗೂ ಸವಿತಾ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಉದ್ದೇಶಿಸಿ ಮಾತನಾಡಿದರು.
ಶ್ರೀ ಸವಿತಾ ಮಹರ್ಷಿ ಜಯಂತಿ ಕೇವಲ ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮುದಾಯದವರನ್ನು ಒಳಗೊಂಡ ಕಾರ್ಯಕ್ರಮ ಮಾಡುವುದರ ಜೊತೆಗೆ ಅವರ ತತ್ವ ಸಿದ್ದಾಂತಗಳನ್ನು ನಾಡಿಗೆ ತಿಳಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ತಿಳಿಸಿದರು.ಪ.ಪಂ. ಸದಸ್ಯ ಹಬೀಬುರ್ ರಹಮಾನ್ ಮಾತನಾಡಿ ತಳ ಸಮುದಾಯ ಸಮಾಜಕ್ಕೆ ಆದರ್ಶಗಳನ್ನು ಹೇಳುವ ಮಟ್ಟಕ್ಕೆ ಬೆಳೆದು ಬಂದಿದೆ, ಮೂಲ ಕಾಯಕಕ್ಕೆ ಅವಲಂಬಿಸಿಕೊಳ್ಳದೆ ಅದರ ಜೊತೆಗೆ ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಮಹನೀಯರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು
ಪ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ ಜಾತಿ ಎನ್ನುವುದು ಬದುಕಿಗಾಗಿ ಒಂದು ಕಾಯಕ. ಚಿಂತನೆಯಿರುವ ನೀವು ಜಾತಿಗೆ ಅಂಟಿಕೊಳ್ಳದೆ ವಿಶ್ವ ಮಾನವರಾಗಿ ಎಂದು ಹೇಳಿದರು. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ನಾವು ಮೇಲೆ ಬರಬೇಕೆಂದರೆ ನಮ್ಮ ಆಲೋಚನೆ ಬದಲಿಸಿಕೊಳ್ಳಬೇಕು. ಇದು ನಿಮಗೆ ಸಿಕ್ಕ ಜಯ ಇದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಕೆ.ನಾಗರಾಜ್, ಪ.ಪಂ ಅಧ್ಯಕ್ಷೆ ಸವಿತಾ ಬಸವರಾಜ್, ಕಾಂಗ್ರೆಸ್ ಮುಖಂಡ ಬಿ.ಎಸ್.ರುದ್ರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ, ಸವಿತಾ ಸಮಾಜದ ನಗರ ಘಟಕದ ಅಧ್ಯಕ್ಷ ಟಿ.ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.ತಾಲ್ಲೂಕು ಕಚೇರಿಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ ಭಾವ ಚಿತ್ರ ಮತ್ತು ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ಹಳೇ ಶ್ರೀ ವಾಲ್ಮೀಕಿ ಸಮುದಾಯಭವನಕ್ಕೆ ಆಗಮಿಸಿದರು.