ರಕ್ಷಣಾ ವಲಯದ ಸ್ವಾವಲಂಭನೆಯತ್ತ ಭಾರತ ದಾಪುಗಾಲು : ನಿರ್ಮಲಾ ಸೀತಾರಾಮನ್

ಬೆಂಗಳೂರು;

       ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತ ರಕ್ಷಣಾ ಉತ್ಪನ್ನಗಳ ತಯಾರಿಕೆಯ ಪ್ರಮುಖ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

      ಯಲಹಂಕ ವಾಯುನೆಲೆಯಲ್ಲಿ ೧೨ನೇ ಆವೃತ್ತಿಯ ಏರೋ ಇಂಡಿಯಾ-೨೦೧೯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಈ ವಿಷಯ ತಿಳಿಸಿದರು. ಇದುವರೆಗೂ ಭಾರತ ಹೆಚ್ಚಿನ ಪ್ರಮಾಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು.

        ಈಗ ಪರಿಸ್ಥಿತಿ ಬದಲಾಗಿದೆ. ಇದಕ್ಕೆ ಪ್ರಧಾನಿ ಅವರ ದೂರದೃಷ್ಟಿ ಮತ್ತು ಮೇಕ್ ಇನ್ ಇಂಡಿಯಾ ಯೋಜನೆ ಕಾರಣವಾಗಿದೆ ಎಂದು ಅವರು ಹೇಳಿದರು. ರಕ್ಷಣಾ ವಲಯದಲ್ಲಿ ಶೇಕಡ ೧೦೦ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದ ಬಳಿಕ ಭಾರತವು ಹೆಲಿಕಾಪ್ಟರ್, ಲಘು ವಿಮಾನ ಸೇರಿದಂತೆ ಈವರೆಗೆ ೪ ಸಾವಿರ ವಿಮಾನಗಳನ್ನು ತಯಾರಿಸಿದೆ. ನೇಪಾಳ, ಮಾರಿಷಸ್, ರಷ್ಯಾ ದೇಶಗಳಿಗೆ ಭಾರತ ರಕ್ಷಣಾ ಸರಕುಗಳನ್ನು ರಫ್ತು ಮಾಡುತ್ತಿದೆ ಎಂದರು.

         ಮೇಕ್ ಇನ್ ಇಂಡಿಯಾ ಯೋಜನೆಯು ವಿಮಾನಯಾನ ವಲಯಕ್ಕೆ ಅಪಾರ ಕೊಡುಗೆ ನೀಡುತ್ತಿದ್ದು, ರಕ್ಷಣಾ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ೨ವರ್ಷಗಳಲ್ಲಿ ೧.೨೭ ಲಕ್ಷ ಕೋಟಿ ಮೊತ್ತದ ೧೫೦ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಐಟಿ ಉದ್ಯಮ ಒಟ್ಟು ರಾಷ್ಟ್ರೀಯ ಉತ್ಪನ್ನ-ಜಿಡಿಪಿಗೆ ಉತ್ತಮ ಕೊಡುಗೆ ನೀಡುತ್ತಿದೆ. ಬೆಂಗಳೂರು ಸೇವಾ ಕ್ಷೇತ್ರ ಜಿಡಿಪಿಗೆ ಉತ್ತಮ ಕೊಡುಗೆ ನೀಡುತ್ತಿರುವ ನಗರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

       ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಮಾತನಾಡಿ, ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿದೆ. ಉಡಾನ್ ಯೋಜನೆಯಡಿ ದೇಶದ ಉದ್ದಗಲಕ್ಕೂ ವಿಮಾನ ಸೇವೆ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶ ೨ ಸಾವಿರ ೩೦೦ ವಿಮಾನಗಳನ್ನು ಖರೀದಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

       ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ಭಾರತ ವೈಮಾನಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಇದಕ್ಕೆ ಮೇಕ್ ಇನ್ ಇಂಡಿಯಾ ಯೋಜನೆ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವ ಮನ್ನಣೆ ಗಳಿಸಿದೆ.

         ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ವೈಮಾನಿಕ ಪಾರ್ಕ್ ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಡಿಫೆನ್ಸ್ ಕ್ಲಸ್ಟರ್ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ. ರಕ್ಷಣೆ ಖಾತೆ ಸಹಾಯಕ ಸಚಿವ ಡಾ.ಸುಭಾಷ್ ಬಾಮ್ರೆ, ದೇಶ ವಿದೇಶಗಳ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ೨೪ರ ವರೆಗೆ ಏರೋ ಇಂಡಿಯಾ ಪದರ್ಶನ ನಡೆಯಲಿದ್ದು, ಮೊದಲ ದಿನವೇ ವೈಮಾನಿಕ ಪ್ರದರ್ಶನದಲ್ಲಿ ರಫೆಲ್ ಮತ್ತು ಸಾರಸ್ ವಿಮಾನಗಳ ಹಾರಾಟ, ಪ್ರದರ್ಶನ ಬಾನಂಗಳದಲ್ಲಿ ಚಿತ್ತಾರ ಮೂಡಿಸಿ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದವು.

          ಇದೇ ಪ್ರಥಮ ಬಾರಿಗೆ ಏರ್ ಬಸ್ ೩೩೦ ನಿಯೊ, ಏರ್ ಬಸ್ ಸಿ-೨೯೫ ಟ್ರಾನ್ಸ್‌ಪೋರ್ಟ್ ಜೆಟ್, ಎನ್‌ಎಎಲ್- ಸರಸ್, ಎಚ್‌ಎಎಲ್‌ನ ಎಚ್‌ಟಿಟಿ -೪೦ ಬೇಸಿಕ್ ಟ್ರೈನರ್ ಮತ್ತು ಎಚ್‌ಎಎಲ್‌ನ ಎಲ್‌ಯುಎಚ್ ಯುದ್ಧ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ. ವೈಮಾನಿಕ ಪ್ರದರ್ಶನದಲ್ಲಿ ಜಗತ್ತಿನ ೩೬೩ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ೫೦ ಹೊಸ ವಿಮಾನಗಳ ಹಾರಾಟ ಇರಲಿದೆ.

         ಇಸ್ರೇಲ್, ಅಮೆರಿಕ, ಇಂಗ್ಲೆಂಡ್, ಜರ್ಮನಿ, ರಷ್ಯಾ ಮತ್ತು ಫ್ರಾನ್ಸ್ ಸೇರಿದಂತೆ ಹಲವು ದೇಶಗಳ ಯುದ್ಧವಿಮಾನಗಳು ಪ್ರದರ್ಶನದಲ್ಲಿ ಭಾಗಿಯಾಗಿ ಚಮತ್ಕಾರ ಪ್ರದರ್ಶನ ಮಾಡಲಿವೆ. ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರಿನ ವಿವಿಧ ಬಡಾವಣೆಗಳಿಂದ ಯಲಹಂಕ ವಾಯುನೆಲೆಗೆ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap