ಬೆಂಗಳೂರು :
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ಗೆ ರಾಜ್ಯ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯದ ಕಾರಣ ನೀಡಿ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ ಇದೀಗ ದರ್ಶನ್ರ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧವಾಗಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆಗಳನ್ನು ಪಡೆದಿದ್ದಾರೆ. ಕಾನೂನು ತಜ್ಞರ ಸಲಹೆ ಮೇರೆಗೆ ಸುಪ್ರೀಂಕೋರ್ಟ್ನಲ್ಲಿ ಮಧ್ಯಂತರ ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದ್ದು, ಗೃಹ ಇಲಾಖೆಯ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ದರ್ಶನ್ಗೆ ದೊರೆತಿರುವ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಕಡತಗಳನ್ನು ಪೊಲೀಸ್ ಇಲಾಖೆ ಸಿದ್ಧಪಡಿಸಿಕೊಂಡಿದೆ. ಕಾನೂನು ತಜ್ಞರ ಸಲಹೆ ಮೇರೆಗೆ ಈ ಕಡತಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಮುಂಚೆ ಗೃಹ ಇಲಾಖೆಯ ಒಪ್ಪಿಗೆ ಕೇಳಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದು, ಇಲಾಖೆಯ ಒಪ್ಪಿಗೆ ಕೇಳಿದ್ದಾರೆ. ಒಂದೊಮ್ಮೆ ಗೃಹ ಇಲಾಖೆ ಒಪ್ಪಿಗೆ ಸೂಚಿಸಿದರೆ ಕೂಡಲೇ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಜಾಮೀನು ರದ್ದತಿಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ.
ಕೊಲೆ ಆರೋಪಿ ದರ್ಶನ್ ಸುಮಾರು ಐದು ತಿಂಗಳು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದರು, ಆದರೆ ಇತ್ತೀಚೆಗೆ ಅವರಿಗೆ ಬೆನ್ನು ನೋವು ಹೆಚ್ಚಾಗಿರುವ ಕಾರಣ ಚಿಕಿತ್ಸೆಯ ಅಗತ್ಯವಿದೆಯೆಂದು ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ತುರ್ತಾಗಿ ಚಿಕಿತ್ಸೆ ಅಗತ್ಯವಿದೆಯೆಂದು ಮನಗಂಡ ಕರ್ನಾಟಕ ರಾಜ್ಯ ಹೈಕೋರ್ಟ್, ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಕೆಲವು ಷರತ್ತುಗಳನ್ನು ಸಹ ವಿಧಿಸಿತ್ತು.
ಜಾಮೀನು ದೊರೆತ ಬಳಿಕ ದರ್ಶನ್, ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಹಲವು ಪರೀಕ್ಷೆಗಳನ್ನು ಮಾಡಿದ್ದು, ಕುಟುಂಬದೊಂದಿಗೆ ಚರ್ಚಿಸಿ ಚಿಕಿತ್ಸೆ ಪ್ರಾರಂಭಿಸಿದ್ದಾರೆ. ದರ್ಶನ್ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಇತರೆ ಕೆಲವು ಚಿಕಿತ್ಸೆಗಳನ್ನು ಸಹ ಪ್ರಾರಂಭ ಮಾಡಲಾಗುತ್ತಿದೆ. ಇದರ ನಡುವೆ ಈಗ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಕಡತ ತಯಾರಿಸಲಾಗಿದ್ದು, ದರ್ಶನ್ಗೆ ಆತಂಕ ಶುರುವಾಗಿದೆ. ಆರೋಗ್ಯ ಮೂಲಭೂತ ಹಕ್ಕು ಎಂದು ಪರಿಗಣಿತವಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗುವ ಮೇಲ್ಮನವಿ ಮಾನ್ಯವಾಗುತ್ತದೆಯೇ ಎಂಬ ಅನುಮಾನವೂ ಸಹ ಇದೆ.