ಬೆಂಗಳೂರು
ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಪರಿಸರವಾದಿಗಳು ಹಾಗೂ ಬುದ್ಧಿಜೀವಿಗಳೊಂದಿಗೆ ಸೇರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದೆ.
ಇಂದು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಈ ಯೋಜನೆಯನ್ನು ನಾವು ವಿರೋಧಿಸಿದ್ದೆವು. ಈಗ ಯೋಜನೆಗೆ ಮರುಜೀವ ನೀಡಲು ಸಿದ್ಧತೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಉಕ್ಕಿನ ಸೇತುವೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಾವ ಯೋಜನೆಯಲ್ಲಿ “ಸ್ವಯಂ ಅನುಕೂಲ” ಇದೆಯೋ ಅಂತಹ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಯೋಜನೆ ಸಂಪೂರ್ಣ ವಿಫಲಗೊಂಡಿದೆ. ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಅವೆಲ್ಲವನ್ನೂ ಬಂದ್ ಮಾಡಿ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವೈಯಕ್ತಿಕವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ. ಇದನ್ನು ಅವರು ನಿಲ್ಲಿಸದಿದ್ದರೆ ನಾವು ಕೂಡ ಮಾತನಾಡಬೇಕಾಗುತ್ತದೆ. ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ನಮ್ಮಲ್ಲೂ ಸಾಕಷ್ಟು ವಿಚಾರಗಳಿವೆ ಎಂದು ಎಚ್ಚರಿಸಿದರು.
ಕಿಕ್ ಬ್ಯಾಕ್‍ಗೋಸ್ಕರ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಅವರು, ಉಕ್ಕಿನ ಸೇತುವೆ ಹೆಚ್ಚು ವರ್ಷ ಬಾಳಿಕೆ ಬರುವುದಿಲ್ಲ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಶಾಶ್ವತ ಹಾಗೂ ದೀರ್ಘಾವಧಿ ಬಾಳಿಕೆ ಬರುವ ಸೇತುವೆ ನಿರ್ಮಿಸಲಿ. ಅದಕ್ಕೆ ನಮ್ಮ ಬೆಂಬಲವಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ನಾಯ್ಡು, ನಾವೆಲ್ಲಾ ನ್ಯಾಯಾಂಗಕ್ಕೆ ಒಳಪಟ್ಟಿದ್ದೇವೆ. ಅನಿವಾರ್ಯವಾಗಿ ಅದಕ್ಕೆ ತಲೆಬಾಗಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







