ಬೆಂಗಳೂರಿನಲ್ಲಿ ನೆಲಸಿದ್ದ ಬಾಂಗ್ಲಾದೇಶ ಪ್ರಜೆಯ ಬಂಧನ

ಬೆಂಗಳೂರು

     ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ  ಪ್ರಜೆಯನ್ನು ಕಾಡುಗೋಡಿ ಠಾಣೆ ಪೊಲೀಸರು  ಬಂಧಿಸಿದ್ದಾರೆ. ಮೊಹಮ್ಮದ್ ಸಿದ್ಧಿಕ್ (55) ಬಂಧಿತ ಬಾಂಗ್ಲಾದೇಶ ಪ್ರಜೆ. ಮೊಹಮ್ಮದ್ ಸಿದ್ಧಿಕ್ 2006ರಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದನು. ಪಶ್ಚಿಮ ಬಂಗಾಳದ ಮೆಲ್ಪಾ ಜಿಲ್ಲೆಯ ಶಾಲೆಯೊಂದರಲ್ಲಿ ನಕಲಿ ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದನು.

     ಬಳಿಕ, ಮೊಹಮ್ಮದ್ ಸಿದ್ಧಿಕ್ ಬೆಂಗಳೂರಿನ ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿ ವಾಸವಿದ್ದನು. ಇಲ್ಲಿ, ನಕಲಿ ವರ್ಗಾವಣೆ ಪತ್ರದ ಮೂಲಕ ಭಾರತದ ಪಾಸ್​ಪೋರ್ಟ್, ವೋಟರ್​ಐಡಿ, ಪಾನ್ ಕಾರ್ಡ್ ಪಡೆದಿದ್ದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಮೊಹಮ್ಮದ್ ಸಿದ್ಧಿಕ್ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಫಾರಿನರ್ಸ್ ಆಕ್ಟ್, BNS 336(3), 340(2), 339ರಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಮೊಹಮ್ಮದ್ ಸಿದ್ದಿಕ್ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿರುವ ಬಾಂಗ್ಲಾ ವಲಸಿಗರಿಂದ ಹಣ ಪಡೆದುಕೊಂಡು, ಭಾರತೀಯ ದಾಖಲಾತಿಗಳಾದ ಪಾಸ್​ಪೋರ್ಟ್​, ಪ್ಯಾನ್​ಕಾರ್ಡ್​ಗಳನ್ನು ಮಾಡಿಸಿಕೊಂಡಿದ್ದಾನೆ. ಈತನ ಜೊತೆಗೆ ಇನ್ನೂ 15-20 ಬಾಂಗ್ಲಾ ವಲಸಿಗರು ಜನ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಫ್​ಐಆರ್​ನಲ್ಲಿ ದಾಖಲಾಗಿದೆ. ಮೊಹಮ್ಮದ್ ಸಿದ್ದಿಕ್​ನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಬೆಂಗಳೂರು ನಗರದ ಥಣಿಸಂದ್ರದ ವ್ಯಕ್ತಿಯೊಬ್ಬರು ಪ್ಯಾನ್ ​ಕಾರ್ಡ್​, ವೋಟರ್​ ಐಡಿ ಗುರುತಿನ ಚೀಟಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಮತ್ತು ಶಾಲೆಯ ವರ್ಗಾವಣೆ ಪತ್ರದ ಆಧಾರದ ಮೇಲೆ ಭಾರತದ ಪಾಸ್​ಪೋರ್ಟ್​ ಅನ್ನು ಏಜೆಂಟ್​ ಮಾಡಿಸಿಕೊಟ್ಟಿದ್ದಾರೆ ಎಂದು ಬಾಯಿಬಿಟ್ಟಿದ್ದಾನೆ.