ಚಿತ್ರದುರ್ಗ :
ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುವುದು ನಿಯಮ ಬಾಹಿರವಾಗಿದ್ದು, ಇಂತಹ ಸರಕು ಸಾಗಣೆ ವಾಹನಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಅಥವಾ ಕಾರ್ಮಿಕರನ್ನು ಕೊಂಡೊಯ್ಯುವುದು ನಿಯಮಗಳಿಗೆ ವಿರುದ್ಧವಾಗಿದ್ದು, ಜಿಲ್ಲೆಯಲ್ಲಿ ಅಂತಹ ಪ್ರಕರಣಗಳು ಕಂಡುಬರುತ್ತಿವೆ. ಟಾಟಾ ಏಸ್ ಸೇರಿದಂತೆ ವಿವಿಧ ಸರಕು ಸಾಗಣೆ ವಾಹನಗಳಲ್ಲಿ ಹೆಚ್ಚಾಗಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಹೆಚ್ಚಾಗಿದೆ. ಅಲ್ಲದೆ ಆಟೋಗಳಲ್ಲಿಯೂ ಕೂಡ ನಿಗದಿಗಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ನಗರ, ಪಟ್ಟಣಗಳಲ್ಲಿಯೇ ಸಂಚರಿಸುವುದು ಕೂಡ ಕಂಡುಬಂದಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು
ವಾಹನಗಳು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆ ವಿಮಾ ಸೌಲಭ್ಯ, ಪರಿಹಾರ ಧನ ಸೇರಿದಂತೆ ಇತರೆ ಪರಿಹಾರ ದೊರಕುವ ಸಾಧ್ಯತೆ ಇರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ವಾಹನ ಮಾಲೀಕರೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ. ಇಂತಹ ವಾಹನಗಳು ಹಾಗೂ ಆಟೋರಿಕ್ಷಾಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
18 ವರ್ಷಕ್ಕಿಂತ ಕಡಿಮೆ ವಯೋಮಾನದ ಯುವಕರು ವಾಹನಗಳ ಚಾಲನೆ ಮಾಡುತ್ತಿರುವ ಬಗ್ಗೆಯು ದೂರುಗಳು ಕೇಳಿಬರುತ್ತಿವೆ. ಹೆಲ್ಮೆಟ್ ರಹಿತವಾಗಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವುದರಿಂದ ಅಪಘಾತ ಸಂದರ್ಭದಲ್ಲಿ ಪ್ರಾಣ ಹಾನಿಯ ಸಾಧ್ಯತೆ ಹೆಚ್ಚಾಗಿರುತ್ತದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಕುರಿತು ವಿಶೇಷ ತನಿಖಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ್ ಅವರು, ರಸ್ತೆ ಸುರಕ್ಷತೆ ದೃಷ್ಟಿಯಿಂದ ಸಂಚಾರ ನಿಯಮಗಳು ಹಾಗೂ ನಿಯಮಗಳ ಉಲ್ಲಂಘನೆಯಿಂದ ಆಗುವ ಅಪಾಯಗಳ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯು ವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಸಾರಿಗೆ ಇಲಾಖೆಯಿಂದ ಜಂಟಿಯಾಗಿ ವಿಶೇಷ ತನಿಖಾ ಕಾರ್ಯ ಕೈಗೊಳ್ಳಲಾಗುವುದು. ಈ ವರ್ಷ ಇಂತಹ 20 ವಾಹನಗಳನ್ನು ಪತ್ತೆ ಹಚ್ಚಿ ವಾಹನದ ಆರ್.ಸಿ.ಯನ್ನು ಅಮಾನತುಗೊಳಿಸಲಾಗಿದೆ ಎಂದರು.
ಬೆಳಗಿನ ಜಾವ ಹೆಚ್ಚು ಅಪಘಾತ :
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳನ್ನು ಗಮನಿಸಿದಾಗ, ಸಾಮಾನ್ಯವಾಗಿ ಬೆಳಗಿನ 2 ರಿಂದ 4 ಗಂಟೆಯ ಅವಧಿಯಲ್ಲಿ ಹೆಚ್ಚಿನ ಅಪಘಾತ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಗಟ್ಟಲು ಯಾವ ಕ್ರಮ ಕೈಗೊಳ್ಳಬೇಕಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ, ಸೂಕ್ತ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ ಅವರು, ಮನುಷ್ಯನಿಗೆ ಸಾಮಾನ್ಯವಾಗಿ ಬೆಳಗಿನ ಜಾವ 2 ಗಂಟೆಯಿಂದ 4 ಗಂಟೆಯವರೆಗಿನ ಅವಧಿ, ನಿದ್ದೆಯನ್ನು ತಡೆಯಲು ಸಾಧ್ಯವಾಗದ ಅವಧಿಯಾಗಿದ್ದು, ಈ ಅವಧಿಯಲ್ಲಿ ವಾಹನ ಚಾಲನೆ ಅಷ್ಟು ಸುರಕ್ಷಿತವಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಿ, ರಿಫ್ರೆಶ್ ಆಗಲು ಸೂಕ್ತ ವ್ಯವಸ್ಥೆ ಇರುವುದು ಉತ್ತಮ, ಈ ದಿಸೆಯಲ್ಲಿ ಟ್ರಕ್ ಟರ್ಮಿನಲ್‍ಗಳನ್ನು ನಿರ್ಮಿಸಿದರೆ ಅಪಘಾತಗಳನ್ನು ತಡೆಗಟ್ಟಲು ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ವ್ಯಾಪ್ತಿಯಲ್ಲಿರುವ ರಾಷ್ಟ್ರಿಯ ಹೆದ್ದಾರಿಗಳಲ್ಲಿ ಟ್ರಕ್ ಟರ್ಮಿನಲ್ಸ್‍ಗಳ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಸುರಕ್ಷತೆಗೆ ಕ್ರಿಯಾ ಯೋಜನೆ :
ಹೊಸ ವಾಹನಗಳ ನೊಂದಣಿ ಸಂದರ್ಭದಲ್ಲಿ ಇದೀಗ ರಸ್ತೆ ಸುರಕ್ಷತಾ ಸೆಸ್ ವಿಧಿಸಲಾಗುತ್ತಿದ್ದು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ರೂ. 500 ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ರೂ. 1000 ರಂತೆ ಪ್ರತ್ಯೇಕವಾಗಿ ಸೆಸ್ ಶುಲ್ಕ ವಿಧಿಸಲಾಗುತ್ತಿದೆ. ಸಂಗ್ರಹವಾಗುವ ಈ ರೀತಿಯ ಶುಲ್ಕದ ಹಣವನ್ನು ರಸ್ತೆ ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾಗಿರುವ ಕಾರ್ಯಗಳಿಗೆ ಮಾತ್ರ ವಿನಿಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ಕಾಗಿ ಅಗತ್ಯವಿರುವ ಕ್ರಮಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕ್ರಿಯಾ ಯೋಜನೆಯಲ್ಲಿ ಒಟ್ಟು 4 ಆಂಬುಲೆನ್ಸ್‍ಗಳ ಖರೀದಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಪತ್ತೆ ಹಚ್ಚಲು ಪ್ರತಿ ತಾಲ್ಲೂಕಿಗೆ 10 ಉಪಕರಣಗಳು, ಅತಿ ವೇಗ ಚಾಲನೆ ಪತ್ತೆ ಹಚ್ಚುವ 10 ಉಪಕರಣಗಳ ಖರೀದಿ, ಅವೈಜ್ಞಾನಿಕ ರಸ್ತೆ ತಡೆಗಳನ್ನು ತೆರವುಗೊಳಿಸಿ, ಪರ್ಯಾಯವಾಗಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮಾತ್ರವಲ್ಲದೆ, ಜಿಲ್ಲಾ ಮಟ್ಟದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ, ಅವೈಜ್ಞಾನಿಕವಾಗಿ ಇರುವಂತಹ ರೋಡ್ ಬ್ರೇಕರ್ಸ್‍ಗಳನ್ನು ತೆರವುಗೊಳಿಸಿ, ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ನಿಯಮಾನುಸಾರ ಬಿಳಿ ಬಣ್ಣ ಹಾಕಿ, ಎಚ್ಚರಿಕಾ ಫಲಕವನ್ನೂ ಅಳವಡಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ರೋಡ್ ಬ್ರೇಕರ್ಸ್‍ಗಳನ್ನು ಉಳಿಸಿಕೊಂಡು, ಇವುಗಳಿಗೆ ಬಿಳಿ ಬಣ್ಣದ ಪಟ್ಟಿ ಹಾಕಿಸಿ, ಸಮೀಪದಲ್ಲಿ ಎಚ್ಚರಿಕಾ ಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 5 ಕಿ.ಮೀ. ಗೆ ಒಂದರಂತೆ ಸಹಾಯವಾಣಿ ಸಂಖ್ಯೆ, ಸಮೀಪದ ಅಗ್ನಿಶಾಮಕ ಠಾಣೆ ದೂರವಾಣಿ ಸಂಖ್ಯೆ ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಯನ್ನೊಳಗೊಂಡ ಫಲಕ ಹಾಗೂ ವೇಗಮಿತಿ ಎಷ್ಟು ಎಂಬುದರ ಫಲಕಗಳನ್ನು ಅಳವಡಿಸಬೇಕು ಎಂದು ಕಳೆದ ಬಾರಿ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸಮರ್ಪಕ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು
ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸುವುದು ಸುಮ್ಮನೆ ಕಾಲಹರಣಕ್ಕಲ್ಲ. ಅಪಘಾತದಿಂದ ಸಾವು-ನೋವು ಸಂಭವಿಸುವುದು ಗಂಭೀರವಾದ ವಿಚಾರವಾಗಿದೆ. ಈ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಎಂ. ನಂದಗಾವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.