ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ: ಶಿಕ್ಷಕರ ಜೊತೆ ಅಧಿಕಾರಿಗಳ ಹೊಣೆಯೂ ಹೆಚ್ಚಿದೆ

ಚಿತ್ರದುರ್ಗ:

        ಹತ್ತನೆ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡುವ ಹೊಣೆ ಕೇವಲ ಶಿಕ್ಷಕರದ್ದಲ್ಲ. ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯೂ ಜಾಸ್ತಿಯಿದೆ ಎಂದು ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕಿ ಜೋಹಿರಜಬೀನ್ ಸೂಚನೆ ನೀಡಿದರು.

        ಪ್ರಾಂಶುಪಾಲರು ಹಾಗೂ ಪದನಿಮಿತ್ತ ಸಹ ನಿರ್ದೇಶಕರ ಕಚೇರಿ ವತಿಯಿಂದ 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸಲು ಸಿ.ಟಿ.ಇ. ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಧುಗಿರಿ, ತುಮಕೂರು ಜಿಲ್ಲೆಗಳ ಉರ್ದು ಮಾಧ್ಯಮದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಕನ್ನಡ ಗಣಿತ ಶಿಕ್ಷಕರಿಗೆ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.

       ಶಿಕ್ಷಕರುಗಳ ಜೊತೆ ಅಧಿಕಾರಿಗಳು ಕೈಜೋಡಿಸಿದಾಗ ಉತ್ತಮ ಫಲಿತಾಂಶ ತರಬಹುದು. ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳು ಫಲಿತಾಂಶದಲ್ಲಿ ಸುಧಾರಣೆ ಕಂಡುಕೊಳ್ಳಲು ಹೆಚ್ಚಿನ ಶ್ರಮ ಹಾಕಬೇಕಿದೆ. ಯಾವ ಶಾಲೆಗಳಲ್ಲಿ ಉತ್ತಮ ಮುಖ್ಯ ಶಿಕ್ಷಕರುಗಳಿರುತ್ತಾರೋ ಅಂತಹ ಶಾಲೆಗಳಲ್ಲಿ ಸಹ ಶಿಕ್ಷಕರುಗಳ ಜೊತೆ ಒಳ್ಳೆ ಸಹಕಾರವಿರುತ್ತದೆ. ಮುಖ್ಯ ಶಿಕ್ಷಕರುಗಳು ಶಿಕ್ಷಕರುಗಳಿಗೆ ಸ್ಪೂರ್ತಿ ತುಂಬಿ ಸರಿಯಾದ ಮಾರ್ಗದರ್ಶನ ಕೊಡಿ.

       ಕನ್ನಡ ವಿಷಯದಲ್ಲಿಯೂ ಫಲಿತಾಂಶ ಸುಧಾರಣೆಯಾಗಬೇಕಿದೆ. ಭಾಷಾ ಕೌಶಲ್ಯ ಶಿಕ್ಷಕರು ಗಳಿಗೆ  ಅತ್ಯವಶ್ಯಕವಾದುದು. ಆಗ ಮಾತ್ರ ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠಗಳನ್ನು ಭೋದಿಸಬಹುದು ಎಂದು ಹೇಳಿದರು.

         ಫಲಿತಾಂಶವನ್ನು ಎಷ್ಟು ಪರ್ಸೆಂಟ್ ಕೊಡುತ್ತೀರೋ ಅಷ್ಟು ಪರ್ಸೆಂಟ್ ಮಾತ್ರ ಸಂಬಳ ತೆಗೆದುಕೊಳ್ಳಿ ಎಂದು ಶಿಕ್ಷಕರುಗಳನ್ನು ಎಚ್ಚರಿಸಿದ ನಿರ್ದೇಶಕಿ ನಿಮ್ಮ ನಿಮ್ಮ ವಿಷಯದಲ್ಲಾದರೂ ತೃಪ್ತಿದಾಯಕವಾದ ಫಲಿತಾಂಶ ಸಿಗುವಂತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಸಾಧನೆ ಮಾಡಲೂ ಏನೇನು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಮನಸ್ಸಿದ್ದರೆ ಮಾರ್ಗ.

         ಇಲ್ಲದಿದ್ದರೆ ಯಾವ ಮಾರ್ಗವೂ ಸಿಗುವುದಿಲ್ಲ. ಮಕ್ಕಳ ಮನಸ್ಸಿನಲ್ಲಿರುವ ಕೆಟ್ಟ ಅಭ್ಯಾಸ, ದುರಾಲೋಚನೆಯನ್ನು ತೆಗೆದುಹಾಕಿ ದಿನನಿತ್ಯದ ಪಾಠಗಳನ್ನು ಅಂದೇ ಓದಿ ಅವರ ಭಾಷೆಯಲ್ಲಿಯೇ ಪರೀಕ್ಷೆಯಲ್ಲಿ ಉತ್ತರ ಬರೆಯುವಂತೆ ಮಕ್ಕಳನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ.ಬಾಯಿಪಾಠ ಮಾಡಿದರೆ ಏನು ಅರ್ಥವಾಗುವುದಿಲ್ಲ. ವಿಜ್ಞಾನಿಗಳು ದೊಡ್ಡ ದೊಡ್ಡ ಸಾಧಕರ ಕಥೆ ಮತ್ತು ವಿಚಾರಗಳನ್ನು ಮಕ್ಕಳಿಗೆ ತಿಳಿಸಿ. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತಿರಿಸುವ ಸಾಮಥ್ರ್ಯ ಶಿಕ್ಷಕರುಗಳಲ್ಲಿರಬೇಕು ಎಂದರು.

         ಪಾಠದ ಜೊತೆಯಲ್ಲಿ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಚಿಕ್ಕಂದಿನಿಂದಲೇ ಬೆಳೆಸಿ ದೇಶಕ್ಕೆ ಬಲಿಷ್ಟವಾದ ಪ್ರಜೆಗಳನ್ನು ಕೊಡುವ ಕೆಲಸವನ್ನು ಶಿಕ್ಷಕರುಗಳು ಮಾಡಬೇಕು. ಮೈಸೂರು ಜಿಲ್ಲೆಯಲ್ಲಿ ಟಾರ್ಗೆಟ್-5 ಕಾರ್ಯಕ್ರಮ ನಡೆಸಿದೆ. ನಿಮ್ಮ ಗುರಿ ಯಾವಾಗಲೂ ಮೊದಲನೆ ಸ್ಥಾನಕ್ಕಿರಬೇಕು. ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದು ಉರ್ದು ಮಾಧ್ಯಮದ ಮುಖ್ಯ ಶಿಕ್ಷಕರು ಹಾಗೂ ಕನ್ನಡ, ಗಣಿತ ಶಿಕ್ಷಕರುಗಳಿಗೆ ಕಿವಿಮಾತು ಹೇಳಿದರು.

         ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರೆ ಸಹ ನಿರ್ದೇಶಕ ಎಂ.ರೇವಣಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಮಧುಗಿರಿ ಐದನೇ ಸ್ಥಾನ, ತುಮಕೂರು-10, ಚಿತ್ರದುರ್ಗ-16, ದಾವಣಗೆರೆ-15, ಶಿವಮೊಗ್ಗ-20 ನೇ ಸ್ಥಾನದಲ್ಲಿತ್ತು. ಐದು ಜಿಲ್ಲೆಗಳಿಂದ ಕಳೆದ ವರ್ಷ 17757 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಫಲಿತಾಂಶ ಹೆಚ್ಚಿಸುವ ಕಡೆ ಶಿಕ್ಷಕರುಗಳು ಗಮನ ಕೊಡಬೇಕು ಎಂದು ತಿಳಿಸಿದರು.

         ಶೇ.95 ಕ್ಕಿಂತ ಹೆಚ್ಚಿನ ಫಲಿತಾಂಶದ ಕಡೆ ನಿಮ್ಮ ಗುರಿಯಿದ್ದರೆ ಐದರಿಂದ ಹತ್ತನೆ ಸ್ಥಾನದೊಳಗೆ ಬರಬಹುದು. ಫಲಿತಾಂಶ ಕಳಪೆಯಾಗಲು ಏನು ಕಾರಣ ಎಂದು ತಿಳಿದುಕೊಂಡು ಸಮಸ್ಯೆಗಳಿಗೆ ನೀವುಗಳೇ ಪರಿಹಾರ ಕಂಡುಹಿಡಿಯಬೇಕು. ಉರ್ದು ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಫಲಿತಾಂಶ ಶೇ.50 ಕ್ಕಿಂತ ಕೆಳಗಿದೆ ಇದು ಕೂಡ ಸುಧಾರಣೆಯಾಗುವ ನಿಟ್ಟಿನಲ್ಲಿ ಶಿಕ್ಷಕರುಗಳು ಮಕ್ಕಳಿಗೆ ಪಾಠ ಮಾಡಬೇಕು ಎಂದು ತಾಕೀತು ಮಾಡಿದರು.

         ವಹೀದಾನಸ್ರಿನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂಥೋಣಿ, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ರೀಡರ್‍ಗಳಾದ ಎಸ್.ಕೆ.ಬಿ.ಪ್ರಸಾದ್, ಲೀಲಾವತಿ, ಉಪನ್ಯಾಸಕ ರಾಮಪ್ಪ, ಇ.ಸಿ.ಓ.ಜಾಕೀರ್‍ಹುಸೇನ್, ಅಧೀಕ್ಷಕ ಸೈಯದ್ ಅಫಾಖ್‍ಅಹಮದ್ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap