ಬೆಂಗಳೂರು
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪುರಭವನದ ಮುಂಭಾಗ ಶುಕ್ರವಾರ ಸೇರಿದ ನೂರಾರು ಕಾರ್ಯಕರ್ತರು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸಾಮಾಜಿಕ ನ್ಯಾಯವನ್ನು ಕಾಪಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯ ದೊರಕಿಸಿ ಕೊಡಲು ನಡೆಸಿದ ಹೋರಾಟದ ಫಲವಾಗಿ ಸದಾಶಿವ ಆಯೋಗದ ವರದಿ ರಚನೆಯಾಗಿದೆ.2004ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚನೆ ಮಾಡಿದ್ದು ಅದರ ವರದಿ ಜಾರಿ ಮಾಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂದು ದೂರಿದರು.
ಸವಿಸ್ತಾರವಾಗಿ ಅಧ್ಯಯನ ನಡೆಸಿದ ಆಯೋಗವು 200 ಪುಟಗಳ ಸುದೀರ್ಘ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪರಿಶಿಷ್ಟ ಜಾತಿಯ ಶೇ. 15ರ ಮೀಸಲಾತಿ ಪ್ರಮಾಣವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದೆ.ಎಡಗೈ ಸಮುದಾಯಕ್ಕೆ ಶೇ. 6 ಮತ್ತು ಬಲಗೈ ಸಮುದಾಯಕ್ಕೆ ಶೇ. 5 ಹಾಗೂ ಅಸ್ಪೃಶ್ಯರಲ್ಲದವರಿಗೆ ಶೇ. 3 ಹಾಗೂ ಇತರರಿಗೆ ಶೇ. 1ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಈ ವರದಿಯಲ್ಲಿ ಯಾವುದೇ ಗೊಂದಲ ಇಲ್ಲ. ಈ ಕೂಡಲೇ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ವಿ. ನಾರಾಯಣಸ್ವಾಮಿ, ಸದಾಶಿವ ಆಯೋಗದ ವರದಿ ಜಾರಿಯ ಜೊತೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಬಡ್ತಿ ಮೀಸಲಾತಿ ಸುಗ್ರೀವಾಜ್ಞೆ ಯನ್ನು ಈ ತಕ್ಷಣವೇ ಜಾರಿ ಮಾಡಿ ಎಸ್ಸಿ-ಎಸ್ಟಿ ನೌಕರರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.
ಅದೇ ರೀತಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಪಿಟಿಸಿಎಲ್ ಕಾಯ್ದೆ ದುರ್ಬಲವಾಗಿದ್ದು, ಈ ಕಾಯ್ದೆಗೆ ಸುಗ್ರಿವಾಜ್ಞೆ ಹೊರಡಿಸುವ ಮೂಲಕ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
