ಬಳ್ಳಾರಿ
ನೀರಿನ ಸಂರಕ್ಷಣಾ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಡಿಸೆಂಬರ್ ಅಂತ್ಯದವರೆಗೆ ಅಗತ್ಯ ಯೋಜನಾ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡು ಜನವರಿಯಿಂದ ಆಂದೋಲನದ ರೂಪದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಮತ್ತು ಮಳೆಗಾಲ ಆರಂಭವಾಗುವ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಪ್ರತಿ ಗ್ರಾಪಂಗಳಲ್ಲಿ ಕನಿಷ್ಠ ಏನಿಲ್ಲವೆಂದರೂ 10 ಚೆಕ್ ಡ್ಯಾಂಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ ಎಂದು ಹೇಳಿದ ಸಚಿವರು ಎಲ್ಲೆಲ್ಲಿ ಚೆಕ್ ಡ್ಯಾಂಗಳು ನಿರ್ಮಾಣ ಮಾಡಿ ನೀರಿನ ಸಂರಕ್ಷಣೆ ಮಾಡಲು ಅವಕಾಶವಿದೆಯೋ ಅಲ್ಲಲ್ಲೆಲ್ಲಾ ನಿರ್ಮಿಸುವ ನಿಟ್ಟಿನಲ್ಲಿ ಒಂದು ಟಾರ್ಗೆಟ್ ನಿಗದಿ ಮಾಡಿಕೊಂಡು ಜಿಪಂ ಸಿಇಒ ಅವರು ತಮ್ಮ ಹಂತದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ತಾಪಂ ಇಒ ಅವರು ಸಭೆ ನಡೆಸಿ ಎಲ್ಲೆಲ್ಲಿ ಸ್ಕೋಪ್ ಇದೆಯೋ ಅಲ್ಲಲ್ಲೆಲ್ಲಾ ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡು ನಿರ್ದೆಶನ ನೀಡಬೇಕು ಎಂದರು.
ಡಿಸೆಂಬರವರೆಗೆ ಎಲ್ಲಾ ಸಿದ್ದತೆಗಳನ್ನು ಇದಕ್ಕೆ ಸಂಬಂಧಿಸಿದಂತೆ ನಡೆಸಿ ಜನವರಿಯಿಂದ ಆಂದೋಲನದಡಿ ಕೈಗೊಂಡು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದರು.
ತಮ್ಮದು ಅರೇಮಲೆನಾಡು ಜಿಲ್ಲೆ ಎಂಬುದನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಬೆಟ್ಟ ಗುಡ್ಡಗಳಿಂದ ಎಷ್ಟೆಲ್ಲಾ ನೀರು ಹರಿದುಬರುತ್ತಿದ್ದು,ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಚೆಕ್ ಡ್ಯಾಂ ನಿರ್ಮಿಸಿದದ್ದರೇ ಹೇಗೇ? ಅದನ್ನು ಮೊದಲು ಮಾಡಿ ಎಂದು ಅವರು ಹೇಳಿದರು. ನೀರಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪುರಾತನ ಗೋಕಟ್ಟೆ, ಕುಂಟೆಗಳು ಹೂಳುತುಂಬಿಕೊಂಡಿದ್ದು, ಅದನ್ನು ತೆಗೆಯುವುದಕ್ಕೆ ಒತ್ತು ಕೊಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಜುಲೈ ಅಂತ್ಯದೊಳಗೆ 2ಸಾವಿರ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುವುದು ಎಂದರು.ಶಾಲಾ ಕಂಪೌಂಡ್ ಕಾಮಗಾರಿ ಪೂರ್ಣಗೊಳಿಸಲು ಮಾ.31ಕ್ಕೆ ಗಡವು: ಜಿಲ್ಲೆಯಲ್ಲಿ ನರೇಗಾ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗಿರುವ ಮತ್ತು ಕೈಗೊಳ್ಳಲು ಉದ್ದೇಶಿಸಿರುವ ಸರಕಾರಿ ಶಾಲೆಗಳ ಕಾಂಪೌಂಡ್ ಕಾಮಗಾರಿಗಳನ್ನು ಬರುವ ಮಾ.31ರೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು ಎಲ್ಲೆಲ್ಲಿ ಕಾಂಪೌಂಡ್ ನಿರ್ಮಿಸಲು ಅವಕಾಶವಿದೆಯೋ ಅಲ್ಲಲ್ಲೆಲ್ಲಾ ನಿರ್ಮಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ತಾಪಂ ಇಒಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 1400 ಶಾಲೆಗಳಿದ್ದು, ಅವುಗಳಲ್ಲಿ ಈಗಾಗಲೇ 800ಶಾಲೆಗಳಿಗೆ ಕಾಂಪೌಂಡ್ ಗಳಿವೆ. ಉಳಿದ 600ಶಾಲೆಗಳಿಗೆ ಕಾಂಪೌಂಡ್ ಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಲ್ ಹಂತದಲ್ಲಿ ಉಸ್ತುವಾರಿಗಳನ್ನು ನಿಯೋಜಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ನರೇಗಾದಲ್ಲಿ ಮಾನವ ದಿನಗಳ ಸೃಜನೆಯಲ್ಲಿ ಈಗ ಇಟ್ಟಿಕೊಂಡಿರುವ ಮಾನವ ದಿನಗಳ ಸೃಜನೆಯ 44ಲಕ್ಷ ಗುರಿಯನ್ನು ಪರಿಷ್ಕೃತಗೊಳಿಸಿ 70ಲಕ್ಷವನ್ನಿಟ್ಟುಕೊಂಡು ಮಾನವ ದಿನಗಳ ಸೃಜನೆ ವಿಷಯದಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ, ಶಾಸಕರಾದ ನಾಗೇಂದ್ರ, ಸೋಮಲಿಂಗಪ್ಪ, ಗಣೇಶ, ಜಿಪಂ ಸದಸ್ಯರು, ಪಂಚಾಯತ್ ರಾಜ್ ಇಲಾಖೆ ನಿರ್ದೇಶಕ ಕೆಂಪೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ