ಬ್ಯಾಡಗಿ:
ಹೆಚ್ಚಾಗುತ್ತಿರುವ ಅರಣ್ಯ ನಾಶ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಿಂದಲೇ ಕಟ್ಟುನಿಟ್ಟಿನ ಕ್ರಮಗಳಾಗಬೇಕಾಗಿದೆ, ಅರಣ್ಯ ಇಲಾಖೆಯನ್ನು ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡುವ ಮೂಲಕ ಅರಣ್ಯಗಳ್ಳರಿಗೆ ಐಪಿಸಿ ಮಾದರಿಯಲ್ಲಿ ಕಾನೂನನ್ನು ಅಳವಡಿಸಿದಾಗ ಮಾತ್ರ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದು ತಾಲ್ಲೂಕ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ತಾಲೂಕಾಡಳಿತ, ತಾಲ್ಲೂಕ ಪಂಚಾಯತ್, ಅರಣ್ಯ ಇಲಾಖೆ, ಪುರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ಸಂರಕ್ಷಣೆ ಎಂಬುದು ಕೇವಲ ಘೋಷಣೆಗೆ ಸೀಮಿತವಾಗುತ್ತಿದ್ದು, ನಿತ್ಯವೂ ನಡೆಯುತ್ತಿರುವ ಮರಗಳ ಮಾರಣ ಹೋಮ ಮಾತ್ರ ಸ್ಥಗಿತಗೊಂಡಿಲ್ಲ, ದೇಶದ ಜನರು ಪ್ರಾಕೃತಿಕ ಸಂಪತ್ತಿನ ಬಗ್ಗೆ ತಿರಸ್ಕಾರ ಮನೋಭಾವನೆ ನೋಡುತ್ತಿದ್ದರೇ, ಇನ್ನೂ ಜವಾಬ್ದಾರಿಯುತ ಇಲಾಖೆಗಳು ಇರುವಂತಹ ಕಾನೂನಿನಲ್ಲಿ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾ ಗುತ್ತಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉನ್ನತ ಮಟ್ಟದ ಸಮಿತಿಗಳನ್ನು ರಚಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಮಾಡಬೇಕಾಗಿದೆ ಎಂದರು.
ಪ್ರಾಕೃತಿಕ ಸಂಪತ್ತಿನ ಬಗ್ಗೆ ತಿರಸ್ಕಾರ ಬೇಡ: ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಪರುಶರಾಮ ಪೂಜಾರ ಮಾತನಾಡಿ, ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನಕ್ಕೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ, ಬಹಳಷ್ಟು ವರ್ಷಗಳಿಂದ ಹಸಿರಾಗಿದ್ದ ವಾತಾವರಣ ಬರಡಾಗುತ್ತಿರುವುದಕ್ಕೆ ಹೊಣೆ ಯಾರು..? ಅವರಿವರ ಮೇಲೆ ದೂರುವುದಕ್ಕಿಂತ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದಲ್ಲಿ ಪರಿಸರವನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಸಾರ್ವತ್ರಿಕ ಜವಾಬ್ದಾರಿ ತೋರಿದಿದ್ದಲ್ಲಿ ಅನಾಹುತ: ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ ಮಾತನಾಡಿ, ಹೆಚ್ಚುತ್ತಿರುವ ತಾಪಮಾನ ಕುರಿತು ಇದೀಗ ಜಾಗತಿಕ ಮಟ್ಟದಲ್ಲಿ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತಿದೆ, ಇದಕ್ಕೆ ಯಾರು ಹೊಣೆ ಎಂಬುದೇ ಅರ್ಥವಾಗುತ್ತಿಲ್ಲ ಸದರಿ ವಿಷಯದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸಾರ್ವತ್ರಿಕ ಹೊಣೆ ತೋರದಿದ್ದಲ್ಲಿ ಬರುವ ದಿನಗಳಲ್ಲಿ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ ಜನರೂ ಸಹ ಮನಸ್ಸು ಪರಿವರ್ತನೆ ಮಾಡಿಕೊಂಡು ಪರಿಸರ ಸಂರಕ್ಷಣೆಗೆ ನಿಲ್ಲಬೇಕಾಗಿದೆ ಎಂದರು.
ಉದ್ದೇಶ ಸರಿಯಾಗಿರಲಿ:ಪುರಸಭೆ ಆರೋಗ್ಯಾಧಿಕಾರಿ ರವಿಕೀರ್ತಿ ಮಾತನಾಡಿ, ಸುತ್ತಲಿನ ಪರಿಸರವನ್ನು ಕಾಯ್ದುಕೊಳ್ಳುದಷ್ಟೇ ಅಲ್ಲ, ಜೊತೆಗೆ ಗಿಡ ಮರಗಳನ್ನು ಬೆಳೆಸುವುದು, ಪಾಲನೆ ಪೋಷಣೆ ಮಾಡುವುದು ನಮ್ಮೆಲ್ಲರ ಉದ್ದೇಶವಾಗಬೇಕು ಪರಿಸರ ರಕ್ಷಣೆ ವಿಷಯದ ಕುರಿತು ಸರ್ಕಾರದ ಜೊತೆ ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಪುರಸಭೆ ಸಿಬ್ಬಂದಿ ಮಾಲತೇಶ ಹಳ್ಳಿ, ವಸತಿ ಶಾಲೆ ಪ್ರಾಚಾರ್ಯ ಸದಾನಂದ ಕೋಡಿಹಳ್ಳಿ ಹಾಗೂ ಶಿಕ್ಷಕಸಿಬ್ಬಂದಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.