ಇನ್ನೂ ಆರಂಭವಾಗದ ರಾಗಿ ಖರೀದಿ ಕೇಂದ್ರ

ಹುಳಿಯಾರು 

      ಹುಳಿಯಾರು ಹೋಬಳಿಯಲ್ಲಿ ಬಂಪರ್ ಬೆಳೆ ಅಲ್ಲದಿದ್ದರೂ ಕಳೆದ ಮೂರ್ನಲ್ಕು ವರ್ಷಗಳಿಗೆ ಓಲಿಸಿದರೆ ಈ ಬಾರಿ ರಾಗಿ ಉತ್ತಮ ಇಳುವರಿ ಬಂದಿದೆ. ಹೆಸರುಕಾಳಿನಿಂದ ಕೈ ಕಚ್ಚಿಸಿಕೊಂಡಿದ್ದ ರೈತರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ರಾಗಿಗೆ ಕನಿಷ್ಠ ಬೆಲೆಯೂ ಸಿಗದೆ ಮತ್ತೆ ಚಿಂತಾಕ್ರಾಂತರಾದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಒಳ್ಳೆ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಧಾವಿಸಿದರು. ಆದರೂ ನಿಗಧಿ ದಿನಾಂಕದಂದು ರಾಗಿ ಖರೀದಿ ಕೇಂದ್ರ ತೆರಯುವಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದು ಮತ್ತೆ ರೈತರನ್ನು ಆತಂಕಕ್ಕೆ ದೂಡಿದೆ.

        ಹೌದು ಜಿಲ್ಲಾಧಿಕಾರಿಗಳ ಆದೇಶದಂತೆ ಫೆ.1 ರಂದೇ ಪ್ರಾರಂಭವಾಗಬೇಕಿದ್ದ ರಾಗಿ ಖರೀದಿ ಕೇಂದ್ರ ಅಧಿಕಾರಿಗಳ ನಿರ್ಲಕ್ಷದಿಂದ ಪ್ರಾರಂಭವಾಗಿಲ್ಲ. ರಾಗಿ ಖರೀದಿ ಕೇಂದ್ರ ತೆರೆಯುವ ಭರವಸೆಯಿಂದ ರೈತರ ನೊಂದಣಿ ಸಹ ಮಾಡಿಕೊಂಡಿದ್ದು ಫೆ.1 ರಂದು ಬರುವಂತೆ 15 ಮಂದಿ ರೈತರಿಗೆ ಟೋಕನ್ ಸಹ ವಿತರಿಸಲಾಗಿತ್ತು. ಅದರಂತೆ ಈಗಾಗಲೇ ಇನ್ನೂರಕ್ಕೂ ಹೆಚ್ಚು ಮಂದಿ ರೈತರು ನೊಂದಣಿ ಮಾಡಿಸಿಕೊಂಡಿದ್ದು ದಿನಕ್ಕೆ ಹತ್ತದಿನೈದು ಮಂದಿಯಂತೆ ಟೋಕನ್ ಸಹ ನೀಡಿದ್ದು ಟೋಕನ್ ಪಡೆದ ರೈತರು ಎಪಿಎಂಸಿ ಬಂದು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

         ಈಗಾಗಲೇ ಕಣಗೆಲಸ ನಡೆಯುತ್ತಿದ್ದು ರೈತರು ರಾಗಿ ಒಕ್ಕಣೆಯಲ್ಲಿ ತೊಡಗಿದ್ದಾರೆ. ಕಣದ ತುಂಬೆಲ್ಲಾ ರಾಗಿಯ ಭರಪೂರ ಸಂಗ್ರಹವೇ ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ರಾಗಿ ಬೆಲೆ ಮಾತ್ರ ಎರಡರಿಂದ ಎರಡೂವರೆ ಸಾವಿರ ರೂಗಳಿದೆ. 2897 ರೂ ನಂತೆ ಬೆಂಬಲ ಬೆಲೆಯಲ್ಲಿ ರಾಗಿ ಮಾರಿದರೆ ಒಂದುಷ್ಟು ಹೆಚ್ಚಿಗೆ ಹಣ ಸಿಗಬಹುದೆಂದು ರೈತರು ಎಪಿಎಂಸಿ ವರ್ತಕರಿಗೆ ಮಾರದೆ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಲ್ಲದೆ ರಾಗಿಯನ್ನು ಖರೀದಿ ಕೇಂದ್ರಕ್ಕೆ ಮಾರಲು ಅಗತ್ಯ ದಾಖಲೆಗಳನ್ನು ಸಿದ್ದ ಮಾಡಿಕೊಂಡಿದ್ದಾರೆ. ಆದರೆ ರಾಗಿ ಮಾತ್ರ ಮಾರಲಾಗದೆ ರೈತರಿಗೆ ನಿತ್ಯ ಕಛೇರಿಯಲ್ಲಿಗೆ ಅಲೆಯುವುದೆ ಕೆಲಸವಾಗಿದೆ.

        ಕಳೆದ ಬಾರಿ ಹುಳಿಯಾರು ಎಪಿಎಂಸಿಯಲ್ಲಿ 2 ತಿಂಗಳು ಕಾಲ ರಾಗಿ ಖರೀದಿ ಕೇಂದ್ರ ಸ್ಥಾಪಿಸಿದ್ದು 175 ಮಂದಿ ರೈತರಿಂದ 5500 ಕ್ವಿಂಟಲ್ ರಾಗಿ ಖರಿಧಿಸಲಾಗಿತ್ತು. ಈ ಬಾರಿ ಈಗಾಗಲೇ 229 ಮಂದಿ ರೈತರು ರಾಗಿ ಕೊಡಲು ನೊಂದಣಿ ಮಾಡಿಸಿದ್ದಾರೆ. ಇದರರ್ಥ ವರ್ತಕರಿಗೆ ಕೊಟ್ಟು ಕ್ವಿಂಟಲ್‍ಗೆ ಏಳೆಂಟು ನೂರು ರೂಪಾಯಿ ಲುಕ್ಸಾನು ಮಾಡಿಕೊಳ್ಳುವುದಕ್ಕಿಂದ ಖರೀದಿ ಕೇಂದ್ರಕ್ಕೆ ಕೊಟ್ಟು ಲಾಭ ಗಳಿಸುವುದೊಳ್ಳೆದು ಎಂಬುದಾಗಿದೆ. ಆದರೆ ರಾಗಿ ಖರೀದಿ ಕೇಂದ್ರವನ್ನೇ ಇನ್ನೂ ಆರಂಭಿಸದಿರುವುದು  ರಾಗಿ ಖರೀದಿ ಕೇಂದ್ರದ ಬಾಗಿಲು ಯಾವಾಗ ತೆರೆಯುತ್ತದೋ, ಯಾವಾಗ ರಾಗಿ ಮಾರುವುದೋ ಎಂಬ ಚಿಂತೆ ರೈತರಲ್ಲಿ ಮೂಡುವಂತೆ ಮಾಡಿದೆ.

       ಆರ್ಥಿಕ ಮುಗ್ಗಟ್ಟಿರುವ ರೈತರು ಬಂದೊಷ್ಟು ಬರಲಿ ಎಂದು ಈಗಾಗಲೇ ಎಪಿಎಂಸಿ ವರ್ತರಿಗೆ ರಾಗಿ ಮಾರುತ್ತಿದ್ದು ಕೇಂದ್ರ ತೆರೆಯುವುದು ತಡವಾದಷ್ಟೂ ವರ್ತಕರಿಗೆ ಲಾಭಾದಾಯಕವಾಗುತ್ತಿದೆ. ಆದರೆ ರೈತ ಮಾತ್ರ ನಷ್ಟ ಅನುಭವಿಸುತ್ತಿದ್ದಾರೆ. ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುಂತೆ ರೈತರು ಆರದ್ದು ಮೂರಕ್ಕೆ ಮಾರಿ ನಷ್ಟ ಅನುಭವಿಸುವ ಮುಂಚೆ ನೆರವಾಗಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ರೈತರ ಮೇಲೆ ಕನಿಕರ ಮತ್ತು ಕಾಳಜಿ ಎಂಬುದು ಎಳ್ಳಷ್ಟು ಇದ್ದರೂ ತಕ್ಷಣ ರಾಗಿ ಖರಿಧಿ ಕೇಂದ್ರ ಆರಂಭಿಸಿ ಅವರ ನೆರವಿಗೆ ಧಾವಿಸಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link