ತುಮಕೂರು:
ದೇಶವೇ ಸಂಕಷ್ಟದಲ್ಲಿರುವಾಗ ಡಿ.ಸಿ. ಗೌರಿಶಂಕರ್‍ರವರು ತನ್ನ ತಾಯಿಯ ಮಾತಿನಂತೆ 50 ಸಾವಿರ ಕುಟುಂಬಗಳ ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ರೈತರ ಬದುಕು ಹಸನುಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ವಾದದ್ದು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.
ತುಮಕೂರು ತಾಲ್ಲೂಕು ಹೊನ್ನುಡಿಕೆ ಗ್ರಾಮದಲ್ಲಿ ಪಡಿತರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಗ್ರಾಮಾಂತರ ಶಾಸಕ ಡಿ.ಸಿಗೌರಿಶಂಕರ್ ಅವರು, ತಮ್ಮ ಕ್ಷೇತ್ರದ ಐವತ್ತು ಸಾವಿರ ಕುಟುಂಬಗಳಿಗೆ ಹತ್ತು ಕೆಜಿ ಪಡಿತರ ಹಾಗೂ ರೈತರಿಂದ ನೇರವಾಗಿ ಖರೀದಿಸಿ ಬಡವರಿಗೆ ಉಚಿತವಾಗಿ 50 ಟನ್ ಬಾಳೆಹಣ್ಣು 50 ಟನ್ ವಿವಿಧ ರೀತಿಯ ತರಕಾರಿಯೊಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಅನ್ನು ಸಾಮಾಜಿಕ ಅಂತರದಲ್ಲಿ ವಿತರಿಸುತ್ತಿರುವುದು ಸಂತಸದ ವಿಚಾರ ಎಂದರು.ಮೇ.3ರವರೆಗೆ ಪ್ರತಿನಿತ್ಯ ಐದು ಸಾವಿರ ಕುಟುಂಬಗಳಿಗೆ ನೆರವಿನಂತೆ 50 ಸಾವಿರ ಪಡಿತರ ಕಿಟ್ ನೀಡುವ ಮೂಲಕ ಗೌರಿಶಂಕರ್ ಅವರು ಶಾಸಕರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ, ಇಂತಹ ಮಹತ್ವ ಪೂರ್ಣ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡುತ್ತಿದ್ದು, ಫಲಾನುಭವಿಗಳು ಕೊರೋನಾ ನಿಯಂತ್ರಣ ಮಾಡಲು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ಎಂದರು.
ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಾತನಾಡಿ, ಕೊರೋನಾ ಸಂಕಷ್ಟದಲ್ಲಿ ರೈತರಿಗೆ ನೆರವಾಗುವಂತೆ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆದೇಶ ನೀಡಿದ್ದರು, ಅವರ ಆದೇಶವನ್ನು ಪಾಲಿಸಿ ರೈತರಿಗೆ ಸಹಾಯ ಮಾಡುವ ಕಾರ್ಯಕ್ರಮಕ್ಕೆ ದೇವೇಗೌಡರೇ ಚಾಲನೆ ನೀಡಿ ಪ್ರೋತ್ಸಾಹ ನೀಡುತ್ತಿದ್ದು, ದೇವೇಗೌಡ ಅವರೇ ನಮ್ಮ ಕುಟುಂಬದ ದೇವರು ಅವ ವಿಚಾರ ಎಂದು ಹೇಳಿದರು.
ಮೂರುವರೆ ಕೋಟಿ ವೆಚ್ಚದಲ್ಲಿ ಗ್ರಾಮಾಂತರ ಕ್ಷೇತ್ರದ ಐವತ್ತು ಸಾವಿರ ಕುಟುಂಬಗಳಿಗೆ ತರಕಾರಿ, ಪಡಿತರ ಸೇರಿದಂತೆ ಅಗತ್ಯ ಸಾಮಾಗ್ರಿಯನ್ನು ವಿತರಿಸಲಾಗುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುವಂತೆ ಕುಮಾರಣ್ಣ ಸೂಚಿಸಿದ್ದರು, ಅದರಂತೆ ಎಲ್ಲರಿಗೂ ಪಡಿತರ ವಿತರಿಸಲು ಕ್ರಮವಹಿಸಲಾಗಿದೆ ಎಂದರು.
ಗ್ರಾಮಾಂತರ ಕ್ಷೇತ್ರದಲ್ಲಿ ಬೆಳೆದಿರುವ 50 ಟನ್ ತರಕಾರಿ, 50 ಟನ್ ಬಾಳೆಯನ್ನು ಖರೀದಿಸಿ ಅದನ್ನು ಗ್ರಾಮಾಂತರ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚಲು ತೀರ್ಮಾನಿಸಲಾಗಿದ್ದು, ಗ್ರಾಮಾಂತರ ಕ್ಷೇತ್ರದ ಎಲ್ಲ ಮನೆಗಳಿಗೂ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯ ಕರ್ತರ ಸಹಕಾರದೊಂದಿಗೆ ಮಾಡಲಾಗುತ್ತಿದೆ, ಪಡಿತರ ಕಿಟ್ ಅನ್ನು ಏಳು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ವಿತರಿಸಲಾಗುವುದು ಎಂದರು.
ಗ್ರಾಮಾಂತರ ಕ್ಷೇತ್ರವನ್ನು ಹಸಿವು ಮುಕ್ತಗೊಳಿಸಲು ಪಣ ತೊಟ್ಟಿದ್ದು, ತುಮಕೂರು ಜಿಲ್ಲೆಯಲ್ಲಿಯೇ ಮಾದರಿಯಾಗಿ ಕೊರೋನಾ ನಿಯಂತ್ರಣದ ಅರಿವು ಮೂಡಿಸಲಾಗುವುದು, ಅದಕ್ಕಾಗಿ ಜನರು ಮನೆಯಿಂದ ಹೊರಬಾರದು, ಪಡಿತರ, ಔಷಧ ಹೀಗೆ ಏನೇ ಅಗತ್ಯ ಸೌಲಭ್ಯಕ್ಕಾಗಿ ನಮ್ಮನ್ನು ಸಂಪರ್ಕಿಸಿದರೆ ಸಹಾಯ ಮಾಡುವುದಾಗಿ ತಿಳಿಸಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಲಕ್ಷ ಮಾಸ್ಕ್ ಈಗಾಗಲೇ ವಿತರಿಸಲಾಗಿದ್ದು, 10 ಸಾವಿರ ಸ್ಯಾನಿಟೈಜರ್ ವಿತರಸಲಾಗಿದ್ದು, ಇಂದಿನಿಂದ ಮತ್ತೆ 1 ಲಕ್ಷ ಮಾಸ್ಕ್ ಮತ್ತು 10 ಸಾವಿರ ಸ್ಯಾನಿಟೈಸರ್ ಅನ್ನು ವಿತರಣೆ ಮಾಡುವ ಮೂಲಕ ಲಾಕ್‍ಡೌನ್ ಮುಗಿಯುವವರೆಗೆ ಈ ಕಾರ್ಯವನ್ನು ನಿರಂತರವಾಗಿ ಮಾಡುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು ಮಾತನಾಡಿ ಕೊರೋನಾದಿಂದ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಕೂಲಿ ಕಾರ್ಮಿಕರು ಹಾಗೂ ರೈತರು ಸಂಕಷ್ಟದಲ್ಲಿದ್ದಾರೆ, ಸರ್ಕಾರ ರೈತರ ಬೆಳೆ ಖರೀದಿಸುವ ಬಗ್ಗೆ ಚಿಂತನೆ ನಡೆಸಬೇಕು, ರೈತರ ನೆರವಿಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.ದೇಶದಲ್ಲಿ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಹಾಗೂ ಕೊರೋನಾದಿಂದ ಸುಧಾರಿಸಲು ಹಲವು ತಿಂಗಳೇ ಬೇಕು, ಎಲ್ಲರು ಉದ್ಯೋಗಪಡೆಯುವವರೆಗೆ ಗೌರಿಶಂಕರ್ ರಂತೆ ಸಹಾಯ ಮಾಡುವ ಕಾರ್ಯವನ್ನು ಎಲ್ಲೆಡೆ ನಡೆಯುವಂತಾಗಬೇಕು, ಕೊರೋನಾ ನಿಯಂತ್ರಣಕ್ಕೆ ಎಲ್ಲರು ಮುಂದಾಗಬೇಕು ಎಂದು ಹೇಳಿದರು
ಜಿ.ಪಂ.ಮಾಜಿ ಸದಸ್ಯ ಡಿ.ಸಿ.ವೇಣುಗೋಪಾಲ್ ಮಾತನಾಡಿ ಸರ್ಕಾರ ಲಾಕ್ ಡೌನ್ ಮಾಡಿರುವುದು ಒಳ್ಳೇ ವಿಚಾರ ಆದರೆ ದಿನಗೂಲಿ ಕಾರ್ಮಿಕರು ಕಷ್ಟದಲ್ಲಿದ್ದಾರೆ, ಚೆನ್ನಿಗಪ್ಪ ಅವರು ಅನ್ನದಾಸೋಹ ಮಾಡುತ್ತಿದ್ದರು, ಅವರ ಮಕ್ಕಳಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಪಡಿತರವನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಬೆಳ್ಳಿ ಲೋಕೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ನರುಗನಹಳ್ಳಿ ವಿಜಯಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್, ತಾ.ಪಂ.ಇಒ ಜೈಪಾಲ್ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
