ಚಿತ್ರದುರ್ಗ:
ಭಾರತದ ಸಂವಿಧಾನಕ್ಕೆ ಸಾಮಾಜಿಕ ನ್ಯಾಯದ ದೊಡ್ಡ ಲಾಂಛನವಿದೆ. ಹಾಗಾಗಿ ಸಂವಿಧಾನ ಸೂಕ್ಷ್ಮ ತರ್ಕದ ಗ್ರಂಥವಲ್ಲ. ಅಂತಃಕರಣವಿದೆ. ನೊಂದವರ ಕೆಳಗೆ ಬಿದ್ದವರ ಕಡೆ ಗಮನವಿಟ್ಟಿದೆ ಎಂದು ಸಾಹಿತಿ ಪ್ರಗತಿಪರ ಹೋರಾಟಗಾರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಂವಿಧಾನದ ಮಹತ್ವನ್ನು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಲಂ ಜನಾಂದೋಲನ ಕರ್ನಾಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಬಹುತ್ವದ ಭಾರತಕ್ಕಾಗಿ ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು
ಸಂವಿಧಾನದ ಆತ್ಮ ಸಂದೇಶ ಬುದ್ದನಿಂದ ಪ್ರೇರಿತವಾಗಿದೆ. ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಈ ಮೂರು ಧ್ಯೇಯ ವಾಕ್ಯಗಳು ಸಂವಿಧಾನದಲ್ಲಿ ಅಡಕವಾಗಿದೆ. ಸ್ವಾತಂತ್ರವಿಲ್ಲದಿದ್ದರೆ ಸಮಾನತೆ ಸಿಗುವುದಿಲ್ಲ. ಅಸಮಾನತೆಯಿಂದ ಕಿತ್ತಾಟವಾಗುತ್ತದೆ. ಸಂವಿಧಾನಕ್ಕೆ ಕುರುಡುತನವಿಲ್ಲ. ಸಾಮಾಜಿಕ ನ್ಯಾಯದ ಬೆಳಕನ್ನು ನಂದಿಸಿದರೆ ಸಂವಿಧಾನವನ್ನು ಓದಲು ಆಗುವುದಿಲ್ಲ. ಉಳಿಸಲು ಆಗುವುದಿಲ್ಲ. ಅದಕ್ಕಾಗಿ ಸಂವಿಧಾನವನ್ನು ಉಳಿಸಬೇಕಾದರೆ ಅದರಲ್ಲಿರುವ ಸತ್ವವನ್ನು ಕಾಪಾಡಬೇಕು ಎಂದು ಹೇಳಿದರು
ಸಂವಿಧಾನದಡಿ ಭಾರತವನ್ನು ಬಲಿಷ್ಟವಾಗಿ ಕಟ್ಟುವುದೆಂದರೆ ಕಟ್ಟಡಗಳನ್ನು ಕಟ್ಟುವುದಲ್ಲ, ರಸ್ತೆಗಳನ್ನು ನಿರ್ಮಿಸುವುದಲ್ಲ. ಹಸಿವುಮುಕ್ತ ಸಮಾಜ ನಿರ್ಮಿಸಿ ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು, ನಿರ್ಲಕ್ಷೆಗೊಳಗಾದವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ತಡೆಗಟ್ಟುವುದೇ ನಿಜವಾದ ಸಂವಿಧಾನದ ರಕ್ಷಣೆ. ವಿದೇಶಿ ಬಂಡವಾಳಗಾರರು, ಉದ್ದಿಮೆದಾರರು ನಮ್ಮ ದೇಶಕ್ಕೆ ಬಂದು ಎಷ್ಟು ಬೇಕಾದರೂ ಬಂಡವಾಳ ಹೂಡಿ ಸಿಗುವ ಲಾಭವನ್ನೆಲ್ಲಾ ನಿಮ್ಮ ದೇಶಕ್ಕೆ ತೆಗೆದುಕೊಂಡು ಹೋಗಬಹುದು ಎನ್ನುವ ತೀರ್ಮಾನವನ್ನು ನಮ್ಮ ದೇಶವನ್ನು ಆಳುವವರು ಯಾವಾಗ ತೀರ್ಮಾನ ಮಾಡಿದರೋ ಅಂದೆ ಸಂವಿಧಾನದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಯಿತು.
ಸಂವಿಧಾನ ತಿದ್ದುಪಡಿ, ಬದಲಾವಣೆಯನ್ನು ನ್ಯಾಯಾಂಗದ ತೀರ್ಪಿನ ಮೂಲಕ ಇರಿಯಲಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ತೀರ್ಪಾಗಿಯೇ ಉಳಿದಿದೆ. ಯಾವುದೂ ಪಾಲನೆಯಾಗುತ್ತಿಲ್ಲ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪು ನೀಡಿದ್ದಾಗ್ಯೂ ಅಲ್ಲಿ ಇನ್ನು ಮಹಿಳೆಯರಿಗೆ ಪ್ರವೇಶ ಸಿಗುತ್ತಿಲ್ಲ. ಬಸ್ಗಳು ನಾಲೆ, ನದಿ, ಡ್ಯಾಂಗಳಲ್ಲಿ ಬಿದ್ದು ನೂರಾರು ಜನರ ಪ್ರಾಣ ಹೋಗುತ್ತಿದೆ. ಇನ್ನು ಸಂಚಾರಕ್ಕೆ ಸಮರ್ಪಕ ರಸ್ತೆ ಒದಗಿಸುವ ಪ್ರಯತ್ನ ಆಗುತ್ತಿಲ್ಲದಿರುವುದು ದುಃಖದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೊಡ್ಡ ಮಾಫಿಯಾ ಔಷಧ ಕ್ಷೇತ್ರ ದೇಶವನ್ನು ಆಳುತ್ತಿದೆ. ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಸಂವಿಧಾನವನ್ನು ಕ್ರಮೇಣವಾಗಿ ಕೊಲ್ಲುತ್ತಿರುವುದನ್ನು ತಡೆಯಬೇಕಾದರೆ ಇನ್ನಾದರೂ ಜಾಗೃತರಾಗಿ ಇಲ್ಲದಿದ್ದರೆ ಅಪಾಯ ತಪ್ಪಿದಲ್ಲ ಎಂದು ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರನ್ನು ಎಚ್ಚರಿಸಿದರು.
ಏಕತೆ, ಏಕರೂಪ, ಜಾತಿ, ಧರ್ಮ, ಸಂಸ್ಕತಿ, ಆಹಾರ ಪದ್ದತಿಯಲ್ಲಾದರೂ ಏಕತೆ ಇದೆಯೇ ಎಂದು ಹುಡುಕಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಕ್ತಿ ತುಂಬಿದ ದೇಶ ನಮ್ಮದು. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಹತ್ಯೆಯಾಗುತ್ತಿದೆ. ಗೋಮಾಂಸವನ್ನು ಬರೀ ಮುಸಲ್ಮಾನರಷ್ಟೆ ಸೇವಿಸುತ್ತಿಲ್ಲ. ಆಹಾರ ಸೇವನೆ ಇಂತಹುದೇ ಜಾತಿಗೆ ಸೀಮಿತವಲ್ಲ. ಯಾವುದು ಪವಿತ್ರ, ಯಾವುದು ಅಪವಿತ್ರ ಎನ್ನುವುದನ್ನು ಪ್ರಶ್ನಿಸುವಂತಾಗಿದೆ.
ದೇಶವನ್ನು ತಿಂದು ಮುಗಿಸಿದವರು ಈಗ ನೀತಿ ಪಾಠ ಹೇಳುತ್ತಿದ್ದಾರೆ. ಆವೇಷದಲ್ಲಿ, ಧರ್ಮದ ಹೆಸರಿನಲ್ಲಿ ಭಾಷಣ ಮಾಡುತ್ತಿರುವವರು ಸಂವಿಧಾನವನ್ನು ಬದಲಾಯಿಸಲು ಸುಡಲು ಹೊರಟಿರುವವರ ವಿರುದ್ದ ಎಚ್ಚರಿಕೆಯಿಂದ ಇರಬೇಕು. ಕಳ್ಳದಂದೆ ಮಾಡುವವರು, ವಿದೇಶಿ ಬಂಡವಾಳಗಾರರ ಸಹಾಯ ಪಡೆಯುವವರು ನಮ್ಮ ದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮೈಮರೆತರೆ ಸಂವಿಧಾನವನ್ನು ಉಸಿರುಗಟ್ಟಿಸಿ ಸಾಯಿಸಲಾಗುವುದು ಎಂದು ಸಂವಿಧಾನಕ್ಕೆ ಎದುರಾಗಿರುವ ಸವಾಲನ್ನು ಸೂಕ್ಷ್ಮವಾಗಿ ವಿವರಿಸಿದರು.
ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಸಂವಿಧಾನದ ಆಶಯಗಳ ಮೇಲೆ ವ್ಯವಸ್ಥಿತವಾದ ಗಧಾಪ್ರಹಾರ ನಡೆಯುತ್ತಿರುವುದು ದೊಡ್ಡ ಆತಂಕ. ದೇಶಕ್ಕೆ ಸ್ವಾತಂತ್ರ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರೂ ಇನ್ನು ಸಂವಿಧಾನದ ಆಶಯಗಳು ಈಡೇರಿಲ್ಲ. ಸನಾತನವಾದಿ, ಮೂಲಭೂತ ವಾದಿಗಳು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ. ಹಿಂದುತ್ವವಾದಿಗಳು ಮಾತ್ರ ಹಿಂದುಗಳು ಎಂದು ಬಡಬಡಿಸಿಕೊಳ್ಳುತ್ತಿರುವ ಕೋಮುವಾದಿಗಳಿಗೆ ಭಾರತದಲ್ಲಿರುವ ಎಲ್ಲರೂ ಹಿಂದುಗಳೇ ಎಂಬುದನ್ನು ನೆನಪಿಸಬೇಕಾಗಿದೆ ಎಂದು ಹೇಳಿದರು.
ಸಂವಿಧಾನವನ್ನು ಸುಡಲು ಪೈಶಾಚಿಕ ಮನಸ್ಸುಗಳು ಒಂದಾಗಿವೆ. ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರತಿಯೊಬ್ಬ ಭಾರತೀಯನು ಮುಂದಾಗಬೇಕು. ದಲಿತರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು, ಶೋಷಿತರಿಗೆ ಮೀಸಲಾತಿ ನೀಡುತ್ತಿರುವುದರಿಂದಲೇ ಕೆಲವು ಮನುವಾದಿಗಳು ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಸಂವಿಧಾನವನ್ನು ಭಾರತಕ್ಕೆ ಸಮರ್ಪಣೆ ಮಾಡಿದ ದಿನ. ನ.26. ಇದು ನೆಪಮಾತ್ರವಾಗಬಾರದು. ಸಂವಿಧಾನದ ಆಶಯಗಳು ಎಲ್ಲರಿಗೂ ತಲುಪಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಸಂವಿಧಾನ ಮಹಿಳಾ ಕಾಯಿದೆ ಕುರಿತು ವಿಷಯ ಮಂಡಿಸಿದ ಚಿಂತಕಿ ಮಮತ ಸಂವಿಧಾನ ಮಹಿಳೆಗೆ ಬದುಕು ವ ಹಕ್ಕು ನೀಡಿದೆ. ಆದರೆ ಪುರಷ ಪ್ರಧಾನ ಸಮಾಜದಲ್ಲಿ ಸಂಘಟನೆ, ಸಮಾನತೆ ವಿಚಾರ ಬಂದಾಗ ಎಷ್ಟು ಹಕ್ಕು ನೀಡಿದ್ದೇವೆ ಎನ್ನುವುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೇಯಿಸಿ ಆಹಾರ ತಿನ್ನುವ ಪದ್ದತಿಯನ್ನು ರೂಢಿಗೆ ತಂದವರು ಮಹಿಳೆಯರು. ಬದುಕಿನ ಹಕ್ಕಿಗೆ ಆಂದೋಲನವಾಯಿತು. ಧರ್ಮದ ಹೆಸರಿನಲ್ಲೂ ಮಹಿಳೆಯ ಮೇಲೆ ಶೋಷಣೆ ನಡೆಯುತ್ತಿದೆ. ಪ್ರಗತಿಪರ ಸಂಘಟನೆಗಳು, ಚಿಂತನಾಶೀಲರು ಎಲಿ ಮಾಯವಾಗಿದ್ದಾರೆ.
ಹಾಗಾಗಿ ಮಹಿಳೆಯರನ್ನು ಗೌರವಿಸಿ ಸಂಘಟನೆಯಲ್ಲಿ ಜೊತೆ ಜೊತೆಗೆ ತೆಗೆದುಕೊಂಡು ಹೋಗಬೇಕು ಎಂದರು.ರಾಜ್ಯ ದಲಿತ ಮುಖಂಡ ಹಾಗೂ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ.ದುರುಗೇಶ್, ಸ್ಲಂ ಜನಾಂದೋಲನ ಜಿಲ್ಲಾಧ್ಯಕ್ಷ ಶಿವರಾಜ್, ಫಾದರ್ ಎಂ.ಎಸ್.ರಾಜು, ಪತ್ರಕರ್ತ ನರನೇನಹಳ್ಳಿ ಅರುಣ್ಕುಮಾರ್, ದಲಿತ ಮುಖಂಡ ಕೆ.ರಾಜಣ್ಣ, ಛಲವಾದಿ ಮುಖಂಡ ಹೆಚ್.ಹಾಲೇಶಪ್ಪ, ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ, ಕಸ್ತೂರಪ್ಪ, ಕೆಂಗುಂಟೆ ಜಯಪ್ಪ ವೇದಿಕೆಯಲ್ಲಿದ್ದರು. ಡಿ.ಓ.ಮುರಾರ್ಜಿ ಕ್ರಾಂತಿಗೀತೆ ಮೂಲಕ ಪ್ರಾರ್ಥಿಸಿದರು. ಎಸ್.ಮಲ್ಲಿಕಾರ್ಜುನ್ ಸ್ವಾಗತಿಸಿದರು. ಶಿಕ್ಷಕಿ ವಿಮಲಾಕ್ಷಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ