ಬಳ್ಳಾರಿ
ಜಿಲ್ಲಾ ಖನಿಜ ನಿಧಿ ಅಡಿಯ ಅನುದಾನದಡಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಜಿಲ್ಲೆಯ ಫಲಿತಾಂಶ ವೃದ್ಧಿಗೆ ಸಹಕಾರಿಯಾಗುವಂತೆ ವಿಭಿನ್ನ ಯೋಜನೆ ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್ ರೂಪಿಸಿ ಗಮನಸೆಳೆದಿದ್ದ ಬಳ್ಳಾರಿ ಜಿಲ್ಲಾಡಳಿತ ಕಾರ್ಯಕ್ಕೆ ರಾಷ್ಟ್ರಮನ್ನಣೆ ದೊರಕಿದೆ.
ಗಣಿ ಮಂತ್ರಾಲಯವು ಈ ವಿಭಿನ್ನ ಯೋಜನೆಗೆ ಅತ್ಯುತ್ತಮ ಯೋಜನೆ ಎಂದು ಪರಿಗಣಿಸಿ ನವದೆಹಲಿಯಲ್ಲಿ ಪ್ರಶಸ್ತಿ ನೀಡಿ ಶುಕ್ರವಾರ ಗೌರವಿಸಿದೆ.
ಜಿಲ್ಲಾ ಖನಿಜ ನಿಧಿ ಹಾಗೂ ಗಣಿ ಸಂಬಂಧಿತ ಇನ್ನಿತರ ಅನುದಾನಗಳನ್ನು ಬಳಸಿಕೊಂಡು ಈ ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಶೈಕ್ಷಣಿಕ ಪ್ರಗತಿಗೆ ಕಾರಣವಾಗುವ ಕೆಲಸ ಮಾಡುವಂತೆ ವಿವಿಧ ರಾಜ್ಯಗಳಿಗೆ ಗಣಿ ಮಂತ್ರಾಲಯ ಸೂಚನೆ ನೀಡಿದೆ.
ಬಳ್ಳಾರಿ ಜಿಲ್ಲಾಡಳಿತವು ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್ ಅಡಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಗೌರವ ಶಿಕ್ಷಕರ/ಉಪನ್ಯಾಸಕರ ನೇಮಕ, ಕ್ರಿಯೆಟಿವ್ ಕ್ಲಾಸ್, ನೈಟ್ ಕ್ಲಾಸ್ ಮತ್ತು ಬಳ್ಳಾರಿ ವಿದ್ಯಾರ್ಥಿ ಬೆಳಕು ಕಾರ್ಯಕ್ರಮ ರೂಪಿಸಿರುವುದು ಅತ್ಯಂತ ಶ್ಲಾಘನೀಯ. ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಿ. ಈ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿ. ಇದನ್ನೇ ಬೇರೆ ರಾಜ್ಯಗಳು ಅನುಸರಿಸುವಂತೆ ಸೂಚಿಸಲಾಗುವುದು ಎಂದು ಕೇಂದ್ರ ಗಣಿ ಮಂತ್ರಾಲಯದ ಕಾರ್ಯದರ್ಶಿ ಅನಿಲ್ ಮುಕಿಮ್ ಹೇಳಿದರು.
ಗಣಿ ಮಂತ್ರಾಲಯ ವತಿಯಿಂದ ನವದೆಹಲಿಯ ಎ.ಪಿ.ಶಿಂಧೆ ಸಿಂಪೋಸಿಯಂ ಹಾಲ್ ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಖನಿಜ ನಿಧಿ(ಡಿಎಂಎಫ್) ಮತ್ತು ಪ್ರಧಾನ ಮಂತ್ರಿ ಖನಿಜ ಕಲ್ಯಾಣ ಕ್ಷೇತ್ರ ಯೋಜನೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಅವರಿಗೆ “ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್” ಅತ್ಯುತ್ತಮ ಯೋಜನೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲಾಧಿಕಾರಿ ರಾಮ್‍ಪ್ರಸಾತ್ ಮನೋಹರ್ ಅವರು ಬಳ್ಳಾರಿ ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಮತ್ತು ಆ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್ ಯೋಜನೆ ಜಾರಿಗೊಳಿಸಲಾಗಿದ್ದು, ಇದರಡಿ ಮಕ್ಕಳಿಗೆ ನೈಟ್ ಕ್ಲಾಸ್, ಕ್ರಿಯೆಟಿವ್ ಕ್ಲಾಸ್, ಶಿಕ್ಷಕರು ಮತ್ತು ಉಪನ್ಯಾಸಕರು ಕೊರತೆ ಇರುವ ಕಡೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಶಿಕ್ಷಕರ/ಉಪನ್ಯಾಸಕರ ನೇಮಕ, ಶಿಷ್ಯವೇತನ ಒದಗಿಸುವ ವಿದ್ಯಾರ್ಥಿ ಬೆಳಕು ಸ್ಕೀಂ ಜಾರಿಗೊಳಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಗಣನೀಯವಾಗಿ ಏರಿಕೆಯಾಗಿದೆ ಎಂದು ವಿವರಿಸಿದರು.ಜಿಲ್ಲೆಯಲ್ಲಾದ ಶಿಕ್ಷಣ ಗುಣಮಟ್ಟ ಬದಲಾವಣೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು 30 ನಿಮಿಷಗಳ ಕಾಲ ಎಳೆಎಳೆಯಾಗಿ ಸಾಕ್ಷ್ಯಚಿತ್ರ ಸಮೇತ ಜಿಲ್ಲಾಧಿಕಾರಿ ಡಾ.ರಾಮ್‍ಪ್ರಸಾತ್ ಅವರು ವಿಚಾರಸಂಕಿರಣದಲ್ಲಿ ವಿವರಿಸಿದರು.
ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿಚಾರ ಸಂಕಿರಣದಲ್ಲಿ ಮೊದಲಿಗೆ ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್ ಕುರಿತು ಬಳ್ಳಾರಿ ಡಿಸಿ ರಾಮ್‍ಪ್ರಸಾತ್ ತಮ್ಮ ಪ್ರಬಂಧ ಮಂಡಿಸಿದರು.
ಇಡೀ ದೇಶದಲ್ಲಿಯೇ ಜಿಲ್ಲಾ ಖನಿಜ ನಿಧಿ(ಡಿ.ಎಂ.ಎಫ್) ಅಡಿಯ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವರಲ್ಲಿ ಬಳ್ಳಾರಿ 6ನೇ ಸ್ಥಾನದಲ್ಲಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಒತ್ತಾಸೆ ಹಾಗೂ ವಿಶೇಷ ಕಾಳಜಿಯಿಂದ ರೂಪಿತವಾಗಿದ್ದ “ಬಳ್ಳಾರಿ ವಿದ್ಯಾರ್ಥಿ ಬೆಳಕು” ಕಾರ್ಯಕ್ಕೆ ಪ್ರತಿಫಲ ಸಂದಂತಾಗಿದೆ. ಅತ್ಯುತ್ತಮ ಯೋಜನೆ ಎಂದು ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್ ಪಾತ್ರರಾಗಿರುವುದಕ್ಕೆ ಸಂತಸದಿಂದ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಅವರು ನಮ್ಮ ಈ ಮಿಶನ್ ಫಾರ್ ಎಜ್ಯುಕೇಶನ್ ಅತ್ಯುತ್ತಮ ಯೋಜನೆ ಎಂದು ಕೇಂದ್ರ ಗಣಿ ಮಂತ್ರಾಲಯ ಪರಿಗಣಿಸಿರುವುದಕ್ಕೆ ಸಂತಸವಾಗಿದೆ.
ನಮ್ಮ ಯೋಜನೆಯನ್ನು ಬೇರೆ ರಾಜ್ಯಗಳು ಅನುಸರಿಸಲು ಸೂಚಿಸಿರಿವುದು ಹೆಮ್ಮೆಯ ಸಂಗತಿ. ಈ ರೀತಿ ವಿಭಿನ್ನ ಕಾರ್ಯಕ್ರಮಗಳನ್ನು ನಮ್ಮ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಈ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಕೇಂದ್ರ ಗಣಿ ಸಚಿವ ನರೇಂದ್ರ ಸಿಂಗ್ ತೋಮರ್ ಚಾಲನೆ ನೀಡಿದರು. ಕೇಂದ್ರ ಗಣಿ ರಾಜ್ಯ ಸಚಿವ ಹರಿಬಾಯಿ ಪಾರ್ಥಿಬಾಯಿ ಚೌಧರಿ, ಕೇಂದ್ರ ಗಣಿ ಜಂಟಿ ಕಾರ್ಯದರ್ಶಿ ಡಾ.ಎನ್.ಕೆ.ಸಿಂಗ್, ಕೇಂದ್ರ ಗಣಿ ಅಪರ ಕಾರ್ಯದರ್ಶಿ ಡಾ.ಕೆ.ರಾಜೇಶ್ವರರಾವ್ ಸೇರಿದಂತೆ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಬಳ್ಳಾರಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಚಂದ್ರಶೇಖರ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ