ದಾವಣಗೆರೆ:
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ, ಭಾರತೀಯ ರೈತ ಒಕ್ಕೂಟದಿಂದ ಶಾಸಕರಾದ ಎಸ್.ಎ.ರವೀಂದ್ರನಾಥ್ ಹಾಗೂ .ಎನ್.ಲಿಂಗಣ್ಣ ಅವರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರವೀಂದ್ರನಾಥ್, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1700 ರೂ. ಹಾಗೂ ಭತ್ತಕ್ಕೆ 1750 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರ ಆರಂಭಿಸದ ಕಾರಣ ಮಾರುಕಟ್ಟೆಯಲ್ಲಿ ವರ್ತಕರು ಕಡಿಮೆ ಬೆಲೆಗೆ ಮೆಕ್ಕೆಜೋಳ ಹಾಗೂ ಭತ್ತ ಖರೀದಿಸುತ್ತಿದ್ದಾರೆ. ಆದ್ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ದೀಪಾವಳಿ ಹಬ್ಬದ ಬಳಿಕ ರೈತರು ಬೆಳೆ ಕೊಯ್ಲು ಆರಂಭವಾಗಲಿದ್ದು, ಖರೀದಿ ಕೇಂದ್ರ ಆರಂಭವಾಗದಿದ್ದರೆ, ರೈತರಿಗೆ ಮತ್ತಷ್ಟು ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ಮಧ್ಯ ಕರ್ನಾಟಕವಾದ ದಾವಣಗೆರೆಯಿಂದ ಆರಂಭಗೊಳ್ಳುವ ರೈತರ ಬವಣೆಯು ವಿಜಯಪುರ ಜಿಲ್ಲೆಯವರೆಗೂ ವಿಸ್ತರಿಸಿಕೊಂಡಿದೆ. ರಾಜ್ಯದ ಮೆಕ್ಕೆಜೋಳದ ಕಣಜವೆಂದೇ ಕರೆಯಲ್ಪಡುವ ದಾವಣಗೆರೆ ಜಿಲ್ಲೆಯಲ್ಲಿ 1.86 ಲಕ್ಷ ಹೆಕ್ಟೇರ್‍ನಲ್ಲಿ ಸುಮಾರು 1 ಮಿಲಿಯನ್ ಟನ್ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಆದರೆ, ಮಳೆಯ ಅಭಾವ ಹಾಗೂ ಸೂಕ್ತ ಬೆಲೆ ಸಿಗದ ಕಾರಣಕ್ಕೆ ಪ್ರಸ್ತುತ ಐದಾರು ಲಕ್ಷ ಟನ್‍ನಷ್ಟು ಮಾತ್ರ ಮೆಕ್ಕೆಜೋಳ ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ಖರೀದಿ ಕೇಂದ್ರ ಆರಂಭಿಸದ ಕಾರಣಕ್ಕೆ ಈಗಲೇ ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ, ಭತ್ತವನ್ನು ಮಾರಾಟ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಮುಂದೆಯೂ ಖರೀದಿ ಕೇಂದ್ರ ಆರಂಭಿಸದಿದ್ದರೆ, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ತಕ್ಷಣವೇ ಖರೀದಿ ಕೇಂದ್ರ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಬನೂರು ಎಚ್.ಆರ್.ಲಿಂಗರಾಜ ಮಾತನಾಡಿ, ರೈತರಿಗೆ ಉಂಟಾಗುತ್ತಿರುವ ಆರ್ಥಿಕ ಸಂಕಷ್ಟ, ಸೂಕ ಬೆಲೆ ಸಿಗದಿರುವುದು, ಮಳೆ ಹಾನಿ, ಬೆಳೆ ಹಾನಿ, ಪ್ರಕೃತಿ ವಿಕೋಪದಿಂದಲೂ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು. ಈಗಾಗಲೇ ಸಂಕಷ್ಟಕ್ಕೆಸಿಲುಕಿದ ರೈತರು ಆರ್ಥಿಕವಾಗಿ ಮತ್ತಷ್ಟು ಹೈರಾಣಾಗುವ ಮೊದಲು ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿದರು.
ರೈತರು ಬೆಳೆದ ಪ್ರತಿ ಕಾಳಿಗೂ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ತಕ್ಷಣವೇ ಜಿಲ್ಲೆಯಲ್ಲಿ ಮೆಕ್ಕೆಜೋಳ, ಬತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು. ಇಲ್ಲಿನ ಜಿಲ್ಲಾಧಿಕಾರಿಗಳೂ ಸಹ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಮುನ್ನವೇ ಖರೀದಿ ಕೇಂದ್ರ ಸ್ಥಾಪಿಸಿ, ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಕೆ.ಆರ್.ಜಯಶೀಲ, ಒಕ್ಕೂಟದ ಮುಖಂಡರಾದ ಕೊಂಡಜ್ಜಿ ಶಾನುಬೋಗರ ನಾಗರಾಜರಾವ್, ಎಚ್.ಎನ್.ಗುರುನಾಥ, ಕೆ.ಎಸ್.ಬಸವರಾಜ, ಧನಂಜಯ ಕಡ್ಲೇಬಾಳು, ಕುಂದುವಾಡ ಗಣೇಶಪ್ಪ, ಶಿವರಾಜ ಪಾಟೀಲ್, ಮಹೇಶ ಕುಂದುವಾಡ, ಎ.ಎಂ.ಮಂಜುನಾಥ, ಹನುಮಂತಪ್ಪ, ವೀರೇಶ ಬಾತಿ, ಉಜ್ಜಿನಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
